ಪುತ್ರನ ಜೊತೆಗೆ ಪದವಿ ಪಡೆದ ಟ್ಯಾಕ್ಸಿ ಚಾಲಕ!

Update: 2018-07-19 07:53 GMT

ಮುಂಬೈ, ಜು.19: ಶಿಕ್ಷಣ ಪಡೆಯಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮುಂಬೈಯ ತಂದೆ-ಮಗನೊಬ್ಬ ಜತೆಯಾಗಿ ಪದವಿ ಪಡೆದು ತೋರಿಸಿದ್ದಾರೆ.

ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಮುಹಮ್ಮದ್ ಫಾರೂಖ್ ಶೇಖ್ ಅವರು  ಹತ್ತನೇ ತರಗತಿವರೆಗೆ ಕಲಿತಿದ್ದು, ಇಂಗ್ಲಿಷ್ ಕೂಡ ಮಾತನಾಡಬಲ್ಲವರಾಗಿದ್ದರು.  ಮನೆಯಲ್ಲಿದ್ದ ಬಡತನದಿಂದ ಶಿಕ್ಷಣ ಮುಂದುವರಿಸುವುದು ಅವರಿಗೆ ಅಸಾಧ್ಯವಾಗಿತ್ತು. ಅವರ ಪುತ್ರ ಹಾಝಿಂ ಫಾರೂಕ್ ಶೇಖ್ ಮುಂಬೈ ವಿವಿಯಿಂದ ಪದವಿ  ಶಿಕ್ಷಣ ಪಡೆಯುತ್ತಿದ್ದಾಗ ಅವರಿಗೂ ಪದವಿ ಪಡೆಯುವ ಆಸೆಯುಂಟಾಗಿ ಅವರು ಮಹಾರಾಷ್ಟ್ರದ ವೈ.ಬಿ. ಚವಾಣ್ ವಿವಿಗೆ ದಾಖಲಾತಿ ಪಡೆದಿದ್ದರು.

ಹೀಗೆ ತನ್ನ ವೃತ್ತಿ ಮತ್ತು ಶಿಕ್ಷಣದ  ನಡುವೆ ಸಮತೋಲನ ಕಾಯ್ದುಕೊಂಡು ವಾರಾಂತ್ಯ ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಇತರ ವಿದ್ಯಾರ್ಥಿಗಳು ಅವರನ್ನು ಪ್ರೀತಿಯಿಂದ 'ಅಂಕಲ್' ಎಂದೇ ಸಂಬೋಧಿಸುತ್ತಿದ್ದರು. "ವಿಶ್ವವಿದ್ಯಾಲಯದ ಶಿಕ್ಷಕರೂ ನನ್ನ ಪುತ್ರನ ವಯಸ್ಸಿನವರಾಗಿದ್ದರೂ ಅವರಿಂದ ಕಲಿಯಲು ನಾನು ಸಂತೋಷ ಪಟ್ಟೆ" ಎನ್ನುತ್ತಾರೆ ಮುಹಮ್ಮದ್.

ಈ ವರ್ಷ ಪದವಿ ಪೂರೈಸಿರುವ ಮುಹಮ್ಮದ್  ಶೇ.46 ಅಂಕಗಳನ್ನು ಗಳಿಸಿದ್ದರೆ ಅವರ ಪುತ್ರ ಶೇ.56 ಅಂಕಗಳನ್ನು ಪಡೆದಿದ್ದಾರೆ. ಮುಹಮ್ಮದ್ ಅವರು ಪದವಿ ಪೂರೈಸಲು ಅವರ ಪತ್ನಿಯ ಸಹಕಾರ ಕೂಡ ಬಹಳಷ್ಟಿತ್ತು. ಆರಂಭದಲ್ಲಿ ಕಂಪೆನಿಯೊಂದರಲ್ಲಿ  ಜೂನಿಯರ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಮುಹಮ್ಮದ್  ಆ ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಂತೆಯೇ  ಉದ್ಯೋಗ ತೊರೆಯಬೇಕಾಗಿ ಬಂದಿತ್ತು.

ಈಗ ಪದವೀಧರರಾಗಿರುವುದರಿಂದ ತಮಗೆ ಉತ್ತಮ ಉದ್ಯೋಗ ದೊರೆಯಬಹುದೆಂಬ ಭರವಸೆಯೂ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News