ತಿದ್ದುಪಡಿ ತಂದರೆ ಆರ್‌ಟಿಐ ಕಾಯ್ದೆ ನಿಷ್ಪ್ರಯೋಜಕವಾಗಲಿದೆ: ರಾಹುಲ್ ಗಾಂಧಿ

Update: 2018-07-19 17:43 GMT

ಹೊಸದಿಲ್ಲಿ, ಜು. 19: ಮಾಹಿತಿ ಹಕ್ಕು ಕಾಯ್ದೆಯ ಪ್ರಸ್ತಾಪಿತ ಬದಲಾವಣೆ ವಿರುದ್ಧ ಗುರುವಾರ ಕೇಂದ್ರದ ಎನ್‌ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆರ್‌ಟಿಐಗೆ ಬದಲಾವಣೆ ತಂದರೆ ಅದು ನಿಷ್ಪ್ರಯೋಜಕವಾಗಲಿದೆ ಎಂದಿದ್ದಾರೆ. ವೇತನ, ಭತ್ಯೆ ಹಾಗೂ ಹುದ್ದೆಗೆ ಸಂಬಂಧಿಸಿ ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗಗಳಿಗೆ ಇರುವ ಸಮಾನತೆಯನ್ನು ಪ್ರಸ್ತಾವಿತ ತಿದ್ದುಪಡಿ ತೆಗೆದು ಹಾಕಲಿದೆ. ‘‘ಪ್ರತಿ ಭಾರತೀಯನಿಗೂ ಸತ್ಯ ತಿಳಿದುಕೊಳ್ಳುವ ಹಕ್ಕು ಇದೆ. ಆದರೆ, ಬಿಜೆಪಿ ಸತ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿದೆ. ಸತ್ಯವನ್ನು ಜನರಿಂದ ಮರೆ ಮಾಚಬೇಕು ಹಾಗೂ ತನ್ನ ಅಧಿಕಾರವನ್ನು ಜನರು ಪ್ರಶ್ನಿಸಬಾರದು ಎಂದು ಬಿಜೆಪಿ ಬಯಸುತ್ತಿದೆ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಶಿಫಾರಸು ಮಾಡಲಾದ ಬದಲಾವಣೆಯನ್ನು ಪ್ರತಿಯೊಬ್ಬ ಭಾರತೀಯನೂ ವಿರೋಧಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ವೇತನ ಹಾಗೂ ಸೇವೆಯ ಕುರಿತು ನಿಯಮ ರೂಪಿಸಲು 2005ರ ಮಾಹಿತಿ ಹಕ್ಕು ತಿದ್ದುಪಡಿ ಪ್ರಸ್ತಾವವನ್ನು ಪರಿಗಣಿಸಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News