ಖ್ಯಾತ ಕವಿ, ಗೀತರಚನೆಗಾರ ನೀರಜ್ ನಿಧನ

Update: 2018-07-20 04:09 GMT

ಹೊಸದಿಲ್ಲಿ, ಜು.20: ಬಾಲಿವುಡ್ ಚಿತ್ರಗಳ ಜನಪ್ರಿಯ ಗೀತೆಗಳ ಮೂಲಕ 1960 ಮತ್ತು 70ರ ದಶಕದಲ್ಲಿ ಚಿತ್ರರಸಿಕರಲ್ಲಿ ಹುಚ್ಚು ಹಿಡಿಸಿದ್ದ ಖ್ಯಾತ ಕವಿ, ಗೀತ ರಚನೆಗಾರ ಗೋಪಾಲ್‌ದಾಸ್ ನೀರಜ್ ಗುರುವಾರ ಇಲ್ಲಿನ ಎಐಐಎಂಎಸ್‌ನಲ್ಲಿ ನಿಧನರಾದರು.

ಆಗ್ರಾದ ತಮ್ಮ ನಿವಾಸದಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು. ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು.

ಅವರ ಆರೋಗ್ಯಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಟ್ರಾಮಾಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಕಿಡ್ನಿ ವೈಫಲ್ಯ, ಸೋಂಕು ಮತ್ತು ತಲೆಗೆ ಆದ ಗಾಯದಿಂದ ಅವರು ಮೃತಪಟ್ಟರು ಎಂದು ಕೇಂದ್ರದ ಮುಖ್ಯಸ್ಥ ಡಾ.ರಾಜೇಶ್ ಮಲ್ಹೋತ್ರಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಂದಿ ಗಣ್ಯರು ನೀರಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

1924ರ ಜನವರಿ 4ರಂದು ಉತ್ತರ ಪ್ರದೇಶದ ಎತ್ವಾದಲ್ಲಿ ಜನಿಸಿದ ಅವರು 1960 ಮತ್ತು 70ರ ದಶಕದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಅವರ ಬಾಲಿವುಡ್ ಹಾಡುಗಳು ಚಿತ್ರಪ್ರೇಮಿಗಳಲ್ಲಿ ಗುಂಗು ಹಿಡಿಸಿದ್ದವು. ಹಲವು ಕವಿ ಸಮ್ಮೇಳನಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಅವರು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದರು. ಸಾಮರಸ್ಯವನ್ನು ಸಾರುವ ಅವರ ಗಝಲ್‌ಗಳೂ ಜನಪ್ರಿಯವಾಗಿದ್ದವು.

ಫೂಲನ್ ಕೆ ರಂಗ್ ಸೇ (ಪ್ರೇಮ್‌ಪುಜಾರಿ), ಎ ಭಾಯ್ ಝರಾ ದೇಖ್ ಖೆ (ಮೇರಾ ನಾಮ್ ಜೋಕರ್) ಹಾಗೂ ಮೇರೆ ಮನ್ ತೆರಾ ಪ್ಯಾಸಾ (ಗ್ಯಾಂಬ್ಲರ್) ಅವರ ಕೆಲ ಜನಪ್ರಿಯ ಹಾಡುಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News