ಹುಷಾರ್...​ ಲಂಚ ನೀಡಿದರೆ ನೀವೂ ಕಂಬಿ ಎಣಿಸಬೇಕಾದೀತು..

Update: 2018-07-20 05:32 GMT

ಹೊಸದಿಲ್ಲಿ, ಜು.20: ಸಾರ್ವಜನಿಕ ಸೇವಕರಿಗೆ ಲಂಚ ನೀಡಿದ್ದು ಸಾಬೀತಾದಲ್ಲಿ ಅಂಥ ವ್ಯಕ್ತಿಗೆ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುವ ಭ್ರಷ್ಟಾಚಾರ ತಡೆ (ತಿದ್ದುಪಡಿ) ಮಸೂದೆ- 2013ಕ್ಕೆ ರಾಜ್ಯಸಭೆ ಅನುಮೋದನೆ ನೀಡಿದೆ.

ಆದರೆ ಲಂಚ ನೀಡುವಂತೆ ಒತ್ತಾಯಪಡಿಸಲಾಗಿತ್ತು ಎಂಬ ಘೋಷಣೆಯನ್ನು ನೀಡಿದಲ್ಲಿ ಅಂಥ ಶಿಕ್ಷೆಯಿಂದ ವಿನಾಯ್ತಿ ಇರುತ್ತದೆ.

ಹಿಂದಿನ ಯುಪಿಎ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು. ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿ, ಕಾನೂನು ಆಯೋಗ ಹಾಗೂ ಆಯ್ದ ಸಮಿತಿ ಪರಿಶೀಲಿಸುವ ಐದು ವರ್ಷಗಳ ಸುದೀರ್ಘ ಪ್ರಕ್ರಿಯೆ ಮುಗಿದು ಅಂತಿಮವಾಗಿ ರಾಜ್ಯಸಭೆ ಮಸೂದೆಗೆ ಒಪ್ಪಿಗೆ ನೀಡಿದೆ.

ಸರ್ಕಾರಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಅನುಮತಿ ನೀಡುವ ಅಧಿಕಾರವನ್ನು ಲೋಕಪಾಲ/ ಲೋಕಾಯುಕ್ತದ ಬದಲು ಸಮರ್ಥ ಪ್ರಾಧಿಕಾರಕ್ಕೆ ನೀಡುವುದೂ ಸೇರಿದಂತೆ 43 ತಿದ್ದುಪಡಿಗಳೊಂದಿಗೆ ರಾಜ್ಯಸಭೆ ಈ ಮಸೂದೆಗೆ ಸರ್ವಾನುಮತದ ಅನುಮೋದನೆ ನೀಡಿತು. ಸೋಮವಾರ ಅಥವಾ ಮಂಗಳವಾರ ಈ ಮಸೂದೆ ಲೋಕಸಭೆ ಮುಂದೆ ಬರಲಿದೆ.

ಲಂಚ ನೀಡಲು ಒತ್ತಾಯಪಡಿಸಲಾಗಿತ್ತು ಎಂಬ ಹೇಳಿಕೆ ನೀಡಲು ಇದ್ದ ಒಂದು ವಾರದ ಅವಧಿಯನ್ನು ಎರಡು ವಾರಗಳಿಗೆ ವಿಸ್ತರಿಸಿರುವುದು, ಲಂಚದ ಮೂಲಕ ಸಂಪಾದಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನು ವಿಶೇಷ ನ್ಯಾಯಾಧೀಶರ ಬದಲಾಗಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿರುವುದು ಇತರ ಪ್ರಮುಖ ತಿದ್ದುಪಡಿಗಳಾಗಿವೆ.

ಸಾರ್ವಜನಿಕ ಸೇವಕರ ವಿರುದ್ಧದ ತನಿಖೆಗೆ ಅನುಮತಿ ನೀಡುವ ಅಧಿಕಾರವನ್ನು ಲೋಕಪಾಲ ಅಥವಾ ಲೋಕಾಯುಕ್ತರಿಗೆ ಕೊಡುವ ಬಗ್ಗೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ತಿದ್ದುಪಡಿ ತಂದು ಸಮರ್ಪಕ ಪ್ರಾಧಿಕಾರಕ್ಕೆ ಈ ಅಧಿಕಾರ ನೀಡಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News