ಗೌರಿ ಹತ್ಯೆ ಪ್ರಕರಣ: ಸುಳ್ಯದ ನಾಟಿವೈದ್ಯನೋರ್ವನ ಬಂಧನ

Update: 2018-07-20 12:43 GMT

ಬೆಂಗಳೂರು, ಜು.20: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ನಾಟಿವೈದ್ಯ ಮೋಹನ್‌ನಾಯಕ್ ಎಂಬಾತನನ್ನು ಬಂಧಿಸಿದ್ದು, ಈತ ಪಿಸ್ತೂಲು ಸರಬರಾಜು ಮಾಡಿದ್ದ ಎನ್ನುವ ಆರೋಪ ಕೇಳಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳ ತಾಲೂಕಿನ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿಯಾಗಿರುವ ಮೋಹನ್ ನಾಯಕ್(50)ನನ್ನು ಜು.18 ರಂದು ನಗರದ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಟ್ ತನಿಖಾಧಿಕಾರಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಪಿಸ್ತೂಲು ಆರೋಪ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಪರಶುರಾಮ್ ವಾಗ್ಮೋರೆಗೆ ಪಿಸ್ತೂಲು ರವಾನಿಸಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಮೋಹನ್ ನಾಯಕ್‌ನನ್ನು ವಶಕ್ಕೆ ಪಡೆಯಿತು. ಈತನು ಕಡಿಮೆ ಬೆಲೆಗೆ ವಿದೇಶಿ ಪಿಸ್ತೂಲುಗಳನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. ವಿದೇಶಿ ಪಿಸ್ತೂಲು ಎಲ್ಲಿಂದ ಬಂದಿತು, ಯಾರು ಪೂರೈಕೆ ಮಾಡಿದರು, ಇದರ ಹಿಂದಿರುವ ಅಸಲಿಕತೆ ಸೇರಿದಂತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಲಾಗಿದೆ.

ಮನೆ ಬಾಡಿಗೆ ಕೊಡಿಸಿದ್ದ: ಬಂಧಿತ ಆರೋಪಿ ಪರಶುರಾಮ್ ವಾಗ್ಮೋರೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಬಾಡಿಗೆಗೆ ಒಂದು ಮನೆಯನ್ನೂ ಮೋಹನ್ ನಾಯಕ್ ಕೊಡಿಸಿದ್ದ. ಬಳಿಕ ಇಬ್ಬರ ಸ್ನೇಹವು ಆತ್ಮೀಯವಾಗಿ ಬೆಳೆದ ನಂತರವೇ ಕೃತ್ಯಕ್ಕೆ ಪಿಸ್ತೂಲು ಪೂರೈಸಿದ್ದ ಎಂದು ಹೇಳಲಾಗುತ್ತಿದೆ.

7 ಬಂಧನ: 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರಕಾರ ಸಿಟ್‌ಗೆ(ಎಸ್‌ಐಟಿ) ವಹಿಸಿದ ಮೇಲೆ ಮೊದಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಿಂದೂ ಸಂಘಟನೆಯೊಂದರ ಮುಖಂಡ ಕೆ.ಟಿ.ನವೀನ್‌ಕುಮಾರ್ ಎಂಬಾತನನ್ನು ಬಂಧಿಸಲಾಯಿತು. ಆತ ನೀಡಿದ ಸುಳಿವಿನ ಮೇರೆಗೆ ಪರಶುರಾಮ್ ವಾಗ್ಮೋರೆ ಸೇರಿದಂತೆ ಈವರೆಗೂ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News