ಪ್ರಧಾನಿಯನ್ನು ಅಪ್ಪಿಕೊಂಡು ಎಲ್ಲರ ಹುಬ್ಬೇರಿಸಿದ ರಾಹುಲ್

Update: 2018-07-20 15:08 GMT

ಹೊಸದಿಲ್ಲಿ, ಜು. 19: ಸಂಸತ್ತಿನಲ್ಲಿ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭ ಎನ್‌ಡಿಎ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಿಕ ಮೋದಿ ಬಳಿಗೆ ತೆರಳಿ ಅವರಿಗೆ ಹಸ್ತಲಾಘವ ನೀಡಿ ಆಲಂಘಿಸಿದ್ದಾರೆ. ಅನಂತರ ಅವರು ತನ್ನ ಸ್ಥಾನಕ್ಕೆ ಹಿಂದಿರುಗಿ ಕುಳಿತು ತನ್ನ ಪಕ್ಷದ ಸದಸ್ಯರತ್ತ ನೋಡಿ ಕಣ್ಣು ಮಿಟುಕಿಸಿದರು.

 ಗಂಟೆಗಳ ಕಾಲ ನಡೆಸಿದ ವಾಗ್ದಾಳಿಯ ಅಂತ್ಯದಲ್ಲಿ ‘‘ನೀವು ನನ್ನನ್ನು ನಿಂದಿಸಬಹುದು, ನೀವು ನನ್ನನ್ನು ಪಪ್ಪು ಎಂದು ಕರೆಯಬಹುದು. ಆದರೆ, ನಾನು ನಿಮ್ಮ ವಿರುದ್ಧ ದ್ವೇಷಪೂರಿತವಾಗಿ ಮಾತನಾಡಲಾರೆ. ನನಗೆ ನಿಮ್ಮ ಬಗ್ಗೆ ಗೌರವ ಇದೆ. ನಾನು ಕಾಂಗ್ರೆಸಿಗ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಫೇಲ್ ವ್ಯಾಪಾರ ಸಹಿತ ಹಲವು ವಿಷಯಗಳ ಬಗ್ಗೆ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಪ್ರಧಾನಿ ಅವರು ಚೌಕಿದಾರ (ರಕ್ಷಕ) ಅಲ್ಲ. ಅವರು ‘ಭಾಗೀದಾರ’. ನಿರ್ದಿಷ್ಟ ಉದ್ಯಮಿಗಳ ಜೊತೆಗೆ ಪ್ರಧಾನಿ ಅವರು ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಪ್ರತಿಯೊಬ್ಬರಿಗೂ ಗೊತ್ತಿದೆ. ಅಂತಹ ಒಬ್ಬ ಉದ್ಯಮಿಗೆ ರಫೇಲ್ ವ್ಯಾಪಾರ ನೀಡಲಾಗಿದೆ. ಆತನಿಗೆ ಸಾವಿರಾರು ಕೋಟಿ ರೂ. ಲಾಭವಾಗಿದೆ. ಅವರ ಮುಗುಳ್ನಗೆ ನನಗೆ ಕಾಣುತ್ತದೆ. ಆದರೆ, ಅವರು ತಬ್ಬಿಬ್ಬಾಗಿದ್ದಾರೆ. ಆದುದರಿಂದ ಅವರಿಗೆ ನನ್ನ ಕಣ್ಣುಗಳನ್ನು ನೋಡಲು ಸಾಧ್ಯವಾಗದು ಎಂದರು.

“ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಮೇಲೆ ನನಗೆ ದ್ವೇಷ ಇದೆ ಎಂದು ನೀವು ಭಾವಿಸಬಹುದು. ಆದರೆ, ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಕಾಂಗ್ರೆಸಿಗನಾಗಿರುವುದು ಅಂದರೆ ಏನು ? ಭಾರತೀಯನಾಗಿರುವುದು ಅಂದರೆ ಏನು ? ಹಿಂದೂ ಅಥವಾ ಶಿವಭಕ್ತನಾಗಿರುವುದು ಅಂದರೆ ಏನು ? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ, ಆರೆಸ್ಸೆಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನೆರವಾಗಿದ್ದಾರೆ” “ಎಂದು ಅವರು ನುಡಿದರು. “ಅಧಿಕಾರ ಕಳೆದುಕೊಳ್ಳುವುದರಲ್ಲಿ, ಅಧಿಕಾರದಿಂದ ಹೊರಗೆ ಇರುವುದರಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ, ಅವರು ಅಧಿಕಾರ ಕಳೆದುಕೊಳ್ಳಲು ಸಿದ್ದರಿರಲಾರರು. ಯಾಕೆಂದರೆ, ಅಧಿಕಾರ ಕಳೆದುಕೊಂಡ ಕೂಡಲೇ ಅವರ ವಿರುದ್ಧ ಇತರ ಪ್ರಕ್ರಿಯೆಗಳು ಆರಂಭವಾಗುತ್ತದೆ. ಅವರ ಭೀತಿ ಆಕ್ರೋಶವಾಗಿ ಪರಿವರ್ತಿತವಾಗುತ್ತದೆ ಹಾಗೂ ಆಕ್ರೋಶ ಭಾರತಾದ್ಯಂತ ಹರಡುತ್ತದೆ” ಎಂದು ಅವರು ಹೇಳಿದ್ದಾರೆ.

 “ಜನರನ್ನು ಥಳಿಸಲಾಗುತ್ತಿದ್ದರೂ ಪ್ರಧಾನಿ ಅವರು ಒಂದೇ ಒಂದು ಪದ ಉಚ್ಚರಿಸುತ್ತಿಲ್ಲ. ದಲಿತರು, ಅಲ್ಪಸಂಖ್ಯಾತರು, ಮಹಿಳೆಯ ಭಾರತೀಯರಲ್ಲವೇ? ಅವರು ಭಾರತಕ್ಕೆ ಸೇರಿದವಲ್ಲವೇ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಪ್ರಧಾನಿ ಅವರು ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕೇವಲ ನಾಲ್ಕು ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಅಲ್ಲದೆ ಜಿಎಸ್‌ಟಿಯಿಂದ ಆರ್ಥಿಕತೆ ಹಾಳಾಗಿದೆ. ಸಣ್ಣ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ಸದನದ ಗೌರವ ಕಾಪಾಡಿ: ಸ್ಪೀಕರ್

ಸಂಸತ್ತಿನಲ್ಲಿ ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭ ಮಾಡಿದ ಭಾಷಣದ ಅಂತ್ಯದಲ್ಲಿ ಪ್ರಧಾನಿ ನೇರಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಲಂಘಿಸಿರುವುದನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಖಂಡಿಸಿದ್ದಾರೆ. ‘‘ನನಗೆ ಇದು ಇಷ್ಟವಾಗಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಗೌರವ ಅಲ್ಲ. ಸದನದ ಒಳಗೆ ಸ್ಥಾನದಲ್ಲಿ ಕುಳಿತಾಗ ಅವರು ನರೇಂದ್ರ ಮೋದಿ ಅಲ್ಲ. ಬದಲಾಗಿ ಭಾರತದ ಪ್ರಧಾನಿ’’ ಎಂದು ಮಹಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News