ಖರ್ಗೆ ದಮನಿತರ ದನಿ: ಡಿಸಿಎಂ ಪರಮೇಶ್ವರ್

Update: 2018-07-20 12:45 GMT

ಬೆಂಗಳೂರು, ಜು. 20: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಇಡೀ ಬದುಕನ್ನು ಸಾರ್ವಜನಿಕರ ಹಿತಕ್ಕೆ ಮೀಸಲಿಟ್ಟಂತಹ ವಿಭಿನ್ನ ವ್ಯಕ್ತಿತ್ವದ ನಾಯಕ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ‘ಪೊಲಿಟಿಕಲ್ ಅಡ್ವೈಸರ್’ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಖರ್ಗೆಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಸರ್ವಸ್ವವನ್ನು ಜನರ ಹಿತಾಸಕ್ತಿಗೋಸ್ಕರ ಮೀಸಲಿಟ್ಟು ನೊಂದ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದಾರೆ. ಹೀಗಾಗಿ, ಇವರು ಜನಮೆಚ್ಚಿನ ನಾಯಕ ಎಂದರು.

ಖರ್ಗೆ ನನಗೆ ಹಿರಿಯ ಸಹೋದರ ಹಾಗೆಯೇ ಮಾರ್ಗದರ್ಶಕರು ಹೌದು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಇವರು ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ತಡವಾಗುತ್ತಿತ್ತು. ಹೀಗಾಗಿ, ನಮ್ಮ ಪರ ನಿಂತರು ಎಂದ ಅವರು, ನನ್ನ ತಂದೆಗೆ ಹೆಚ್ಚು ಆಪ್ತರಾಗಿದ್ದರಿಂದ ನಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ 18 ವರ್ಷ ಅಧ್ಯಕ್ಷರಾಗಿದ್ದರು. ನಮ್ಮ ಕುಟುಂಬದ ಒಬ್ಬ ಸದಸ್ಯರಂತೆ ನಮ್ಮೊಟ್ಟಿಗೆ ಇದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ: ಅವರು ರಾಜಕೀಯದ ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡವರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶದ ದಾರಿಯಲ್ಲಿ ನಡೆದವರು. ಶಿಕ್ಷಣ ಸಚಿವರಾದ ಮೇಲೆ, ದಲಿತ ಸಮುದಾಯಕ್ಕೆ ಸೇರಿದವರು ಕೂಡ ಶಿಕ್ಷಣ ಸಂಸ್ಥೆ ಮಾಡಬಹುದು ಎಂದು ಕಾನೂನು ತಂದು ಅನುದಾನ ಮೀಸಲಿಟ್ಟರು ಎಂದು ಹೇಳಿದರು. ಇನ್ನು, ಇವರ ಜೀವನದ ಹಾದಿಯಲ್ಲಿ 11 ಬಾರಿ ಶಾಸಕರಾಗಿ, 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸುವುದು ಕಷ್ಟ. ಆದರಿವರು, ಒಂದು ಕ್ಷೇತ್ರದಲ್ಲಿ ಇಷ್ಟು ಬಾರಿ ಗೆಲ್ಲುವು ಸಾಧಿಸಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ಕಾಂಗ್ರೆಸ್ ಮುಖಂಡರಾದ ವಿಜಯಾ ನಾಯಕ್, ಡಾ.ಆನಂದ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News