ಮಧ್ಯವರ್ತಿಗೆ ಒತ್ತಡ ಹೇರಿ ಸೋನಿಯಾ ಸಿಕ್ಕಿಸಿ ಹಾಕಲು ಮೋದಿ ಸರಕಾರದ ಸಂಚು: ಕಾಂಗ್ರೆಸ್ ಆರೋಪ

Update: 2018-07-20 11:06 GMT

ಹೊಸದಿಲ್ಲಿ, ಜು.20: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಸಿಕ್ಕಿಸಿ ಹಾಕಿದರೆ ಅದಕ್ಕೆ ಬದಲಿಯಾಗಿ ನಿಮ್ಮನ್ನು ದೋಷಮುಕ್ತಗೊಳಿಸುವುದಾಗಿ ಹೇಳಿ ಈ ಹಗರಣದಲ್ಲಿ ಮಧ್ಯವರ್ತಿಯಾಗಿ ಶಾಮೀಲಾಗಿದ್ದಾರೆನ್ನಲಾದ ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಮಿಕೆಲ್ ಅವರ ಮೇಲೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಒತ್ತಡ ಹೇರುತ್ತಿದೆಯೆಂದು ಕಾಂಗ್ರೆಸ್ ಆರೋಪಿಸಿದೆ.

"ದ್ವೇಷ ಸಾಧನೆಗಾಗಿ ವಿಪಕ್ಷ ನಾಯಕರ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಪಡೆಯುವ ಕಾರ್ಯದಲ್ಲಿ ಪ್ರಧಾನಿಯೊಬ್ಬರು ಭಾಗಿಯಾಗಿರುವುದು ಭಾರತದ ಇತಿಹಾಸದಲ್ಲಿಯೇ ನಡೆದಿಲ್ಲ"' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ,

"ನೀವು ಸೋನಿಯಾ ಅವರನ್ನು ಭೇಟಿಯಾಗಿದ್ದೀರಿ, ನಿಮಗೆ ಅವರೊಂದಿಗೆ ನಂಟು ಇದೆ ಎಂದು ಹೇಳಿ ಬಿಡಿ, ಈ ಕಾಗದ ಪತ್ರಕ್ಕೆ ಸಹಿ ಹಾಕಿ ನೀವು ಸ್ವತಂತ್ರರಾಗುತ್ತೀರಿ ಎಂದು ತನಿಖಾಕಾರರು ಮಿಕೆಲ್ ಗೆ ಹೇಳಿದ್ದಾರೆ" ಎಂದು ಅವರ ವಕೀಲೆ ರೋಸ್‍ಮೇರಿ ಪಟ್ರಿಝಿ ಹಾಗೂ ಸೋದರಿ ಸಶಾ ಒಝೆಮಾನ್ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಉಲ್ಲೇಖಿಸಿ ಸುರ್ಜೇವಾಲ ಮೇಲಿನಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಆಗಸ್ಟಾ ವೆಸ್ಟ್‍ಲ್ಯಾಂಡ್ ಹಗರಣದಲ್ಲಿ ಹೊರಬಿದ್ದ ಕೆಲವೊಂದು ಮಾಹಿತಿಗಳು ಕಾಂಗ್ರೆಸ್ ನಾಯಕತ್ವದ ವಿರುದ್ಧ ಈ ಹಗರಣದಲ್ಲಿ ನರೇಂದ್ರ ಮೋದಿ ಹೆಣೆದ ಸುಳ್ಳುಗಳ ಬಲೆಯನ್ನು ಬಹಿರಂಗ ಪಡಿಸಿದೆ. ಮೋದಿ ಸರಕಾರದ ಡರ್ಟಿ ಟ್ರಿಕ್ಸ್ ಇಲಾಖೆಯ ಕೆಲಸಗಳು ಇಡೀ ದೇಶದ ಮುಂದಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News