ಸಂಜೀವ್ ಭಟ್ ಗೆ ಖಾಸಗಿ ಭದ್ರತೆ ಒದಗಿಸಲು ಸಾಮಾಜಿಕ ಕಾರ್ಯಕರ್ತರಿಂದ ನಿಧಿ ಸಂಗ್ರಹ

Update: 2018-07-21 08:31 GMT

ಹೊಸದಿಲ್ಲಿ, ಜು.21: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಗುಜರಾತ್ ಸರಕಾರ ಹಿಂದೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿನೋದ್ ಚಂದ್ ಅವರು ಸಂಜೀವ್ ಭಟ್ ರಿಗೆ ಖಾಸಗಿ ಭದ್ರತೆಯನ್ನೊದಗಿಸಲು ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.

ಮುಂದಿನ ಮೇ ತಿಂಗಳವರೆಗೆ ಸಂಜೀವ್ ಭಟ್ ರಿಗೆ ಖಾಸಗಿ ಭದ್ರತೆ ಒದಗಿಸಲು 4 ಲಕ್ಷ ರೂ. ಅಗತ್ಯವಿದ್ದು, ಈಗಾಗಲೇ ಈ ಅಭಿಯಾನದ ಮೂಲಕ 1,07,400 ರೂ.ಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, 2,92,600 ರೂ.ಗಳ ಅಗತ್ಯವಿದೆ. ಈ ಆಂದೋಲನಕ್ಕೆ ಸಂಬಂಧಿಸಿ ವಿನೋದ್ ಚಂದ್ ಅವರು ಫೇಸ್ಬುಕ್ ಪೋಸ್ಟ್ ಈ ಕೆಳಗಿನಂತಿದೆ.

"2002ರ ಮುಸ್ಲಿಮರ ಹತ್ಯಾಕಾಂಡದ ನಂತರ ಮೋದಿ ವಿರುದ್ಧ ಇಬ್ಬರು ಧ್ವನಿಯೆತ್ತಿದ್ದರು. ಆಗಿನ ಮುಖ್ಯಮಂತ್ರಿಯಾಗಿದ್ದ ಮೋದಿ ನಿವಾಸದಲ್ಲಿ ಸಭೆಯೊಂದು ನಡೆದಿತ್ತು. ಕಾನೂನು ವ್ಯವಸ್ಥೆಯನ್ನು ಮುಂದಿನ 3 ದಿನಗಳವರೆಗೆ ಹಿಂದೂಗಳಿಗೆ ಪ್ರತಿಕ್ರಿಯಿಸಲು ಬಿಡಬೇಕು ಎಂದು ಅವರು ಹೇಳಿದ್ದರು. ನಂತರ ಏನು ನಡೆಯಿತು ಎನ್ನುವುದು ಇತಿಹಾಸ".

"ಇನ್ನೊಬ್ಬ ಸಾಕ್ಷಿಯಾಗಿದ್ದವರು ಹರೇನ್ ಪಾಂಡ್ಯಾ, ಜಸ್ಟಿಸ್ ಸುರೇಶ್ ಹೊಸ್ಬೆಟ್ ಸದಸ್ಯರಾಗಿದ್ದ 'ಸಿಟಿಝನ್ಸ್ ಫ್ಯಾಕ್ಟ್ ಫೈಂಡಿಂಗ್ ಕಮಿಟಿ'ಯ ಜೊತೆ ಅವರು ಈ ಬಗ್ಗೆ ಮಾತನಾಡಿದ್ದರು. ಆದರೆ ಈ ಸುದ್ದಿ ಸೋರಿಕೆಯಾಗಿ ಹರೇನ್ ಪಾಂಡ್ಯಾರನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಂತರ ಸೊಹ್ರಾಬುದ್ದೀನ್, ಆತನ ಪತ್ನಿ ಹಾಗು ಸಹವರ್ತಿ ತುಳಸೀರಾಮ್ ಪ್ರಜಾಪತಿಯನ್ನೂ ಕೊಲ್ಲಲಾಯಿತು. ನಂತರ ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಲೋಯಾ ಅವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು".

"ಎರಡನೆ ಸಾಕ್ಷಿಯಾಗಿರುವ ಸಂಜೀವ್ ಭಟ್ ಎಸ್ ಐಟಿ ಮುಂದೆ ಸಾಕ್ಷಿ ಹೇಳಿದ್ದರು. ಆದರೆ ವಿಚಿತ್ರ ಕಾರಣಗಳಿಂದ ಅವರ ಸಾಕ್ಷ್ಯಗಳನ್ನು ತಿರಸ್ಕರಿಸಲಾಯಿತು. ಇದೀಗ 2019ಕ್ಕೂ ಮೊದಲೇ ಸಂಜೀವ್ ಭಟ್ ರ ಭದ್ರತೆಯನ್ನೂ ಹಿಂದೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು ನ್ಯಾಯಾಧೀಶ ಲೋಯಾರ ಭದ್ರತೆ ಹಿಂದೆಗೆದುಕೊಳ್ಳಲಾಗಿತ್ತು. ಅವರು 7 ದಿನಗಳೊಳಗೆ ಮೃತಪಟ್ಟಿದ್ದರು. 2019ರ ಮೇ ತಿಂಗಳವರೆಗೆ ಅವರಿಗೆ ಖಾಸಗಿ ಭದ್ರತೆ ಒದಗಿಸಲು ನಾನು ನಿಧಿ ಸಂಗ್ರಹಿಸುತ್ತಿದ್ದೇನೆ. 4 ಲಕ್ಷ ರೂ. ನಮ್ಮ ಗುರಿ" ಎಂದವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಧಿ ಸಂಗ್ರಹ, ಖಾತೆಯ ವಿವರ ಇದರ ಸಂಪೂರ್ಣ ಮಾಹಿತಿ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News