ಲೋಕಸಭಾ ಚುನಾವಣೆಗೆ ಎಲ್ಲರೂ ಸಜ್ಜಾಗಿ: ಡಾ.ಜಿ.ಪರಮೇಶ್ವರ್

Update: 2018-07-21 11:45 GMT

ಉಡುಪಿ, ಜು.21: ವಿಧಾನಸಭಾ ಚುನಾವಣೆಯಲ್ಲಾದ ಲೋಪಗಳನ್ನು ಸರಿದೂಗಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲರೂ ಸನ್ನದ್ಧರಾಗಿ, ಕನಿಷ್ಠ 20 ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲಿಸಿಕೊಡುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ‌ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕರೆ ನೀಡಿದರು. 

ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಳ್ಳೆಯ ಆಡಳಿತ, ಕಾರ್ಯಕ್ರಮ ಎಲ್ಲ‌ ಕೊಟ್ಟಿದ್ದರೂ ಎಲ್ಲೋ ಒಂದು ಕಡೆ ನಾವು ಎಡವಿದ್ದೆವು. ನಮ್ಮ ಹಿಂದಿನ ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ‌ ಕೂಡ ಕೇಳಿಬಂದಿರಲಿಲ್ಲ. ಉತ್ತಮ ಆಡಳಿತವನ್ನು ನೀಡಿದ್ದೆವು. 125 ಸ್ಥಾನ ಗೆದ್ದೇ ಗಡಲ್ಲುತ್ತೇವೆ ಎಂಬ ವಿಶ್ವಾಸವಿತ್ತು ಎಂದರು.

ಈ ಬಾರಿ ಆ ತಪ್ಪುಗಳು ಮರುಕಳಿಸಬಾರದು. ನಮ್ಮ ಯುವನಾಯಕ ರಾಹುಲ್‌ ಗಾಂಧಿ ಅವರ ಮೇಲೆ ಇಡೀ ದೇಶದ ಜವಾಬ್ದಾರಿ ಬಿದ್ದಿದೆ. ನಿನ್ನೆ ಸಂಸತ್‌ನಲ್ಲಿ ಅವರ ಮಾತುಗಳು ಹೆಚ್ಚು ಪ್ರಸ್ತುತವಾಗಿತ್ತು.‌ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಇವರ ಆಡಳಿತ ನಮ್ಮೆಲ್ಲರಿಗೂ ಬೇಕು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ‌ ಮೊದಲ ಬಾರಿಗೆ ಬೂತ್ ಮಟ್ಟದ ಸಮಿತಿ ರಚಿಸಿದ್ದೆವು. ಈ ಬಾರಿ ಈ‌ ಸಮಿತಿಗಳನ್ನು ಇನ್ನಷ್ಟು ಬಲಿಷ್ಠವಾಗಿ ಬಳಸಿಕೊಳ್ಳಬೇಕು ಎಂದರು. 

ಕಳೆದ ಎಂಟು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷನಾಗಿ ಸಾಕಷ್ಟು ಏಳು ಬೀಳು ಕಂಡು, ಪಕ್ಷದಲ್ಲಿ ಸಮತೋಲನ ಕಾಯ್ದುಕೊಂಡಿದ್ದೇವೆ. ಈಗ ಹೊಸ ನಾಯಕತ್ವ ಬಂದಿದೆ. ಇಬ್ಬರೂ ಯುವ ನಾಯಕರೇ ಪಕ್ಷದ ಜವಾಬ್ದಾರಿ ವಹಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ರಾಜ್ಯದ ಚಿತ್ರಣ ಗೊತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ‌ ನಮ್ಮ‌ ನಿರೀಕ್ಷೆಯಂತೆ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.‌ ಈ ಚುನಾವಣೆಯಲ್ಲಿ ಜಯ ಗಳಿಸುವ‌ ಮೂಲಕ‌ ಪಕ್ಷದ ಅಸ್ತಿತ್ವವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಕರೆ ನೀಡಿದರು. 

ನೂತನ ಅಧ್ಯಕ್ಷರು ಹೊಸ ಸಮಿತಿಗಳನ್ನು ರಚಿಸುವ ಮೂಲಕ ಎಲ್ಲರಿಗೂ ಕೆಲಸ ಕಾರ್ಯಗಳನ್ನು ಹಂಚಬೇಕು. ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತನಿಗೂ ಪಕ್ಷದಲ್ಲಿ ಸ್ಥಾನ ದೊರಕುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪಕ್ಷಕ್ಕಾಗಿ ದುಡಿಯಬೇಕು ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News