ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ: ಕಂದಾಯ ಸಚಿವ ದೇಶಪಾಂಡೆ

Update: 2018-07-21 11:56 GMT

ಬೆಂಗಳೂರು, ಜು. 21: ರಾಜ್ಯದಲ್ಲಿನ 50 ಹೊಸ ತಾಲೂಕುಗಳ ಪೈಕಿ ಇನ್ನೂ ಮಿನಿ ವಿಧಾನಸೌಧ ಇಲ್ಲದ 44 ತಾಲೂಕುಗಳಲ್ಲಿ ಇದಕ್ಕಾಗಿ ಕೂಡಲೇ ಸೂಕ್ತ ಸ್ಥಳವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದ್ದಾರೆ.

ಶನಿವಾರ ಈ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಹೊಸ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ 14 ಪ್ರಮುಖ ಕಚೇರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಬೇಕು. ಇದಕ್ಕಾಗಿ ಆರ್ಥಿಕ ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸದೆ ಹೋದರೆ ಅವುಗಳ ರಚನೆಯ ಹಿಂದಿರುವ ಮೂಲ ಆಶಯವೇ ವಿಫಲವಾಗುತ್ತದೆ. ಹೊಸ ತಾಲೂಕುಗಳ ಪೈಕಿ ಇದುವರೆಗೆ ಕೇವಲ 6 ಕಡೆ ಮಾತ್ರ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಿರುವುದು ನಿರಾಶಾದಾಯಕವಾದ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ರಮ-ಸಕ್ರಮ ಯೋಜನೆಯಡಿ ಅರ್ಹರು ಸಲ್ಲಿಸಿರುವ 94 ‘ಸಿ’ ಮತ್ತು 94‘ಸಿಸಿ’ ಅರ್ಜಿಗಳನ್ನು ಹಾಗೂ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಮಾಡಿಕೊಂಡು ಸಾಗುವಳಿ ಚೀಟಿಗಾಗಿ ಸಾರ್ವಜನಿಕರು ಸಲ್ಲಿಸಿರುವ ನಮೂನೆ 50 ಮತ್ತು 53ರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕೆಂದು ಅವರು ನಿರ್ದೇಶಿಸಿದ್ದಾರೆ.

94ಸಿ ಮತ್ತು 94ಸಿಸಿ ಅರ್ಜಿಗಳಡಿಯಲ್ಲಿ ಮಂಜೂರಾತಿ ನೀಡಿಯೂ ಎಲ್ಲೆಲ್ಲಿ ಹಕ್ಕುಪತ್ರ ನೀಡಿಲ್ಲವೋ ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು 3 ತಿಂಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು. ಒಂದು ವೇಳೆ, ಇಂತಹ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಾಗದಿದ್ದಲ್ಲಿ ಅವುಗಳನ್ನು ನಿಯಮಾನುಸಾರ ತಿರಸ್ಕರಿಸಿ, ಅರ್ಜಿದಾರರಿಗೆ ಸೂಕ್ತ ಕಾರಣವನ್ನು ವಿವರಿಸಬೇಕು ಎಂದು ಸೂಚಿಸಿದ್ದಾರೆ.

ಸಿಆರ್ ಝಡ್ ಪ್ರದೇಶ, ಕುಮ್ಕಿ, ಗೋಮಾಳ, ಸಿ ಅಂಡ್ ಡಿ ಮತ್ತು ಡೀಮ್ಡ್ ಫಾರೆಸ್ಟ್ ಪ್ರದೇಶಗಳಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಿದ್ದಲ್ಲಿ ಅವುಗಳ ಸಕ್ರಮವನ್ನು ಕೋರಿ, ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಉಳಿದಂತೆ ‘ಪೋಡಿಮುಕ್ತ ಗ್ರಾಮ’ ಅಭಿಯಾನದಡಿ ಈಗಾಗಲೇ ರಾಜ್ಯದ ಸಾವಿರ ಹಳ್ಳಿಗಳನ್ನು ‘ಪೋಡಿಮುಕ್ತ ಗ್ರಾಮಗಳು’ ಎಂದು ಘೋಷಿಸಲಾಗಿದೆ. ಆದರೆ, ಈ ಅಭಿಯಾನದಡಿ ರಾಜ್ಯದ ಇನ್ನೂ 21 ಸಾವಿರ ಹಳ್ಳಿಗಳನ್ನು ‘ಪೋಡಿ ಮುಕ್ತ’ ಗ್ರಾಮಗಳನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಜೊತೆಗೆ, ನಿಯಮಿತವಾಗಿ ಕಂದಾಯ ಅದಾಲತುಗಳನ್ನು ನಡೆಸಬೇಕು ಎಂದು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ದಾಖಲೆಗಳ ವರ್ಗಾವಣೆ, ಭೂಮಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಕಾವೇರಿ ಇತ್ಯಾದಿ ತಂತ್ರಾಂಶಗಳಲ್ಲಿ ಗ್ರಾಮಗಳನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯನ್ನು ಆಗಸ್ಟ್ 14ರೊಳಗೆ ಮುಗಿಸಬೇಕೆಂದು ಆದೇಶಿಸಿದ್ದಾರೆ.

‘ಎಸ್ಸಿ-ಎಸ್ಟಿ ಜನಾಂಗದವರಿಗೆ ರಾಜ್ಯದ ಯಾವುದೇ ಭಾಗದಲ್ಲೂ ಸ್ಮಶಾನ ಭೂಮಿಗೆ ಸಮಸ್ಯೆ ಎದುರಾಗಬಾರದು. ಸಮಸ್ಯೆ ಇರುವ ಕಡೆಗಳಲ್ಲಿ ಸರಕಾರಿ ಭೂಮಿ ಇದ್ದಲ್ಲಿ ಅದನ್ನು ‘1964ರ ಭೂ ಕಂದಾಯ ಕಾಯ್ದೆಯನ್ವಯ ಕಾಯ್ದಿರಿಸಬೇಕು. ಸರಕಾರಿ ಜಮೀನು ಇಲ್ಲದ ಕಡೆಗಳಲ್ಲಿ ಅಗತ್ಯ ಭೂಮಿಯನ್ನು ಖರೀದಿಸಲು ಸೂಕ್ತ ಕ್ರಮ ವಹಿಸಬೇಕು’
-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News