ವೈಜ್ಞಾನಿಕ ಬೆಲೆ ನಿಗದಿಯಾಗುವವರೆಗೆ ಸಾಲಮನ್ನಾ ಮುಂದುವರೆಯಲಿ: ಹಸಿರು ಸೇನೆ ಮುಖಂಡ ಮಂಜೇಗೌಡ

Update: 2018-07-21 12:52 GMT

ಬೆಂಗಳೂರು, ಜು.21: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗುವವರೆಗೆ ರೈತರಿಗೆ ಸಾಲ ಮನ್ನಾ ಪ್ರಕ್ರಿಯೆ ಮುಂದುವರೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ಮಂಜೇಗೌಡ ಒತ್ತಾಯಿಸಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘38ನೆ ವರ್ಷದ ರೈತ ಹುತಾತ್ಮ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು, ಸಚಿವರು ತಮ್ಮ ಸಂಬಳವನ್ನು ನಿಗದಿ ಪಡಿಸಿಕೊಳ್ಳುವಂತೆ ಕೃಷಿ ಬೆಳೆಗಳಿಗೆ ದರ ನಿಗದಿ ಪಡಿಸಲಿ. ರೈತರ ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕರೆ ರೈತರ ಸಾಲ ಮನ್ನಾದ ಪ್ರಶ್ನೆಯೆ ಬರುವುದಿಲ್ಲವೆಂದು ತಿಳಿಸಿದರು.

ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಸಾಲಮನ್ನಾ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಚುನಾವಣೆಯ ನಂತರ ಆ ಬೇಡಿಕೆಗಳನ್ನು ಈಡೇರಿಸಿ ಎಂದರೆ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯವನ್ನು ಮುನ್ನಡೆಸುವವರೆ ಮಾತಿಗೆ ತಪ್ಪಿದರೆ, ಜನತೆಯ ಹಿತಾಸಕ್ತಿಯನ್ನು ಕಾಪಾಡುವವರು ಯಾರೆಂದು ಅವರು ಪ್ರಶ್ನಿಸಿದರು.

ರೈತರು ಯಾವುದೆ ಕಾರಣಕ್ಕೂ ಆತ್ಮಹತ್ಯೆ ಕೃತ್ಯಕ್ಕೆ ಇಳಿಯಬಾರದು. ರೈತರು ಒಗ್ಗಟ್ಟಿನಿಂದ ಪರಸ್ಪರ ಸಹಾಯ ಹಸ್ತಗಳನ್ನು ಚಾಚಿಕೊಳ್ಳುತ್ತಾ ಮುನ್ನಡೆಯಬೇಕು. ರೈತ ಸಮುದಾಯದೊಂದಿಗೆ ರೈತ ಸಂಘ ಸದಾ ಜೊತೆಯಲ್ಲಿರುತ್ತದೆ. ರೈತರ ಬೇಡಿಕೆಗಳನ್ನು ಹೋರಾಟದಿಂದ ಈಡೇರಿಸಿಕೊಳ್ಳೋಣ, ಸಾವಿನಿಂದಲ್ಲ ಎಂದು ಅವರು ಹೇಳಿದರು.

ರೈತ ಮುಖಂಡ ಶಿವಕುಮಾರ್ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಯಾವ ರೈತರು ಸರಕಾರದ ಬಳಿ ಸಾಲ ಮನ್ನಾ ಮಾಡಿ ಎಂದು ಕೇಳುವುದಿಲ್ಲ. ಈಗ ಸಾಕಷ್ಟು ಮಳೆಯಾಗುತ್ತಿದ್ದು, ಆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವಂತಹ ಕೆಲಸವಾಗಬೇಕು. ಆದರೆ, ಸರಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸುವುದಿಲ್ಲ. ಮಳೆ ನಿಂತ ಮೇಲೆ ನೀರಿಗೆ ಅಭಾವ ತಲೆದೋರಿದಾಗ, ಇಲ್ಲಸಲ್ಲದ ನೆಪಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇವತ್ತು ತಲೆಗೊಂದರಂತೆ ಬಿತ್ತನೆ ಬೀಜದ ಕಂಪೆನಿಗಳು ಸ್ಥಾಪನೆಗೊಂಡು, ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಗುರುತಿಸಲಾಗುತ್ತಿಲ್ಲ. ಈ ಬಗ್ಗೆ ಸರಕಾರ ಕೂಲಂಕಷವಾಗಿ ಪರಿಶೀಲಿಸಿ ನಕಲಿ ಬೀಜ ಕಂಪೆನಿಗಳಿಗೆ ಕಡಿವಾಣ ಹಾಕಬೇಕು. ಹಾಗೂ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಸಿರು ಸೇನೆ ರಾಜ್ಯ ಕಾರ್ಯಕಾರಿ ಸಮಿತಿಯ ಮುಖಂಡರಾದ ವಿ.ಆರ್.ನಾರಾಯಣರೆಡ್ಡಿ, ಬಿ.ನಾರಾಯಣಸ್ವಾಮಿ ಹಾಗೂ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಸಾಗರ ಎನ್.ಮಂಜುನಾಥ ರೆಡ್ಡಿ, ಉಪಾಧ್ಯಕ್ಷ ಎಸ್.ನಂಜುಂಡರೆಡ್ಡಿ, ಕಾರ್ಯಾಧ್ಯಕ್ಷ ಎಲ್.ಎನ್.ಚಂದ್ರಕುಮಾರ್ ಮತ್ತಿತರರಿದ್ದರು.

ಹಕ್ಕೊತ್ತಾಯಗಳು
-ರೈತರು ಸಹಕಾರಿ, ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು.
-ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು.
-ಬಿತ್ತನೆ ಬೀಜ ಖರೀದಿಸುವ ರೈತರಿಗೆ ವಿಮಾ ಪಾಲಿಸಿ ಕಡ್ಡಾಯವಾಗಿ ನೀಡಬೇಕು.
-ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕೆರೆಗಳಿಗೆ ಮಳೆ ನೀರನ್ನು ತುಂಬಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News