ಅನುವಾದದಲ್ಲಿ ಮೂಲ ಆಶಯಕ್ಕೆ ಧಕ್ಕೆಯಾಗಬಾರದು: ಕವಿ ಡಾ.ಸಿದ್ದಲಿಂಗಯ್ಯ

Update: 2018-07-21 12:34 GMT

ಬೆಂಗಳೂರು, ಜು.21: ಅನುವಾದಕರು ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಅನುವಾದ ಮಾಡಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಹೆಮ್ಮರ ಪ್ರಕಾಶನದಿಂದ ಆಯೋಜಿಸಿದ್ದ ಡಾ.ಎಸ್.ಚಂದ್ರಮೋಹನ್ ಅನುವಾದಿಸಿರುವ ‘ನಿಗೂಢ ಕರ್ನಾಟಕ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನುವಾದಕರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡುವ ಸಮಯದಲ್ಲಿ ಸ್ವಲ್ಪ ಎಡವಿದರೂ ಅನುವಾದಿಸಿರುವ ವಿಷಯ ಗೊಂದಲಮಯವಾಗುತ್ತದೆ. ಹೀಗಾಗಿ, ಎಚ್ಚರಿಕೆಯಿಂದ ಅನುವಾದ ಮಾಡಬೇಕು ಎಂದು ಸಲಹೆ ನೀಡಿದರು.

ಪದೇ ಪದೇ ಒಂದೇ ವಿಷಯವನ್ನು ಹೇಳುವವರ ಸಂಖ್ಯೆ ಜಾಸ್ತಿಯಿದೆ. ಆದರೆ, ಪತ್ರಕರ್ತ, ಲೇಖಕ ಶ್ಯಾಮ್ ಪ್ರಸಾದ್ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ ಎಂದ ಅವರು, ಚರಿತ್ರೆಯಲ್ಲಿ ಸತ್ಯ ಶೋಧನೆಯಲ್ಲಿ ತೊಡಗಿ ಮುಚ್ಚಿಹೋಗಿರುವ ಸತ್ಯಗಳನ್ನು ಬಯಲಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಶ್ಯಾಮ್ ಪ್ರಸಾದ್ ಅವರ ಪ್ರಯತ್ನ ಶ್ಲಾಘನೀಯ. ಅಲ್ಲದೆ, ಅನುವಾದಕ ಚಂದ್ರಮೋಹನ್ ಮೂಲ ಆಶಯಕ್ಕೆ ಭಂಗ ತರದ ರೀತಿಯಲ್ಲಿ, ಎಚ್ಚರಿಕೆಯಿಂದ ಹಾಗೂ ಅತ್ಯುತ್ತಮವಾಗಿ ಅನುವಾದ ಮಾಡಿದ್ದಾರೆ ಎಂದು ಅವರು ಬಣ್ಣಿಸಿದರು.

ನಮ್ಮ ಇಂದಿನ ಸಮಾಜದಲ್ಲಿನ ಸಿದ್ಧ ನಂಬಿಕೆಗಳನ್ನು ಬುಡಮೇಲು ಮಾಡುವ ರೀತಿಯಲ್ಲಿ ನಿಗೂಢ ಕರ್ನಾಟಕ ಕೃತಿ ರಚನೆಯಾಗಿದ್ದು, ಅದನ್ನು ಗೊಂದಲ ಸೃಷ್ಟಿಸದ ರೀತಿಯಲ್ಲಿ ಅನುವಾದ ಮಾಡಿದ್ದಾರೆ. ಅನುವಾದಕರಿಗೆ ಭಾಷೆಯ ಮೇಲೆ ಹಿಡಿತವಿರಬೇಕು. ಅದು ಈ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದ ಸಿದ್ದಲಿಂಗಯ್ಯ, ಅಪರೂಪಕ್ಕೊಬ್ಬರು ಮಾತ್ರ ಉತ್ತಮ ಅನುವಾದಕರು ಸಿಗುತ್ತಾರೆ ಎಂದರು.

ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿ, ಅನುವಾದಕರು ಆಯಾ ಸ್ಥಳೀಯ ಭಾಷೆಯವರಾಗಿದ್ದರೆ ಮಾತ್ರ ಸಮಗ್ರವಾದ ಅನುವಾದ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಅನುವಾದದ ದಾರಿ ದಿಕ್ಕು ತಪ್ಪುತ್ತದೆ ಎಂದ ಅವರು, ಶುದ್ಧ ಹಸುವಿನ ತುಪ್ಪ ಎನ್ನುತ್ತಾರೆ. ಆದರೆ, ಹಸು ಶುದ್ಧವಾಗಿರಬೇಕಾ ಎಂದು ಪ್ರಶ್ನಿಸಿದರು.

ಜಗತ್ತನ್ನು ಮುಕ್ತ ಕಣ್ಣಿನಿಂದ ನೋಡಲು ಹಾಗೂ ವಿಶಾಲವಾಗಿ ನೋಡಲು ಅನುವಾದವೂ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಅನುವಾದಗಳಿಂದ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತೊಂದು ಜಗತ್ತನ್ನು ತೆರೆದಿಡುತ್ತದೆ. ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ ನಮ್ಮನ್ನು ಒಳಗೊಳ್ಳುವಂತೆ ಅನುವಾದ ಮಾಡುತ್ತದೆ ಎಂದು ಹೇಳಿದರು.

ಕೃತಿಯಲ್ಲಿರುವ ಹೊಯ್ಸಳರ ಲಾಂಛನ ಕುರಿತ ಲೇಖನ ನಮ್ಮ ತಿಳುವಳಿಕೆಯನ್ನು ಬುಡಮೇಲು ಮಾಡುವುದಲ್ಲದೆ, ಚಿಂತನೆಗೆ ಹಚ್ಚುತ್ತದೆ. ಈ ಕಥೆಯಲ್ಲಿ ನಮ್ಮ ಚರಿತ್ರೆಯ ಪಾಲು ಎಷ್ಟು, ಐತಿಹ್ಯದ ನಂಬಿಕೆ ಮತ್ತು ಕಲ್ಪನೆಯ ಪಾಲು ಎಷ್ಟು ಎಂಬುದನ್ನು ಲೇಖಕ ಆಧಾರ ಸಹಿತವಾಗಿ ವಿವರಿಸಿದ್ದಾರೆ. ಗೊಮ್ಮಟೇಶ್ವರನ ಬೆರಳು ಕುರಿತ ಲೇಖನ ಚರ್ಚೆಗೆ ಎಡೆಮಾಡಿಕೊಡುತ್ತದೆ. ಅಲ್ಲದೆ, ಲೇಖಕನ ನಿಷ್ಠೂರತೆ ಮತ್ತು ಪ್ರಖರ ಸಂಶೋಧನ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ, ಲೇಖಕ ಎಸ್.ಶ್ಯಾಮ್‌ಪ್ರಸಾದ್, ಅನುವಾದ ಡಾ.ಎಸ್.ಚಂದ್ರಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News