ಉಚಿತ ಬಸ್ ಪಾಸ್‌ಗಾಗಿ ಶಾಲಾ-ಕಾಲೇಜು ಬಂದ್: ತರಗತಿ ಬಹಿಷ್ಕರಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Update: 2018-07-21 12:39 GMT

ಬೆಂಗಳೂರು, ಜು.21: ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಶನಿವಾರ ಎಐಡಿಎಸ್‌ಓ, ಎಐಡಿವೈಓ ಮತ್ತು ಎಐಎಂಎಸ್‌ಎಸ್ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ, ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್ ಬೆಂಬಲಿಸಿ, ರಾಜಧಾನಿಯ ಬೆಂಗಳೂರಿನ ಮಹಾರಾಣಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಜಯನಗರ, ರಾಜಾಜಿನಗರ, ಯಲಹಂಕ ಕಾಲೇಜು ಸೇರಿದಂತೆ ನಾನಾ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅದೇ ರೀತಿ, ಬೆಂಗಳೂರು ಗ್ರಾಮಾಂತರ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಕಡೆ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗಿ ಜಿಲ್ಲಾ ಮಟ್ಟದ ಪ್ರತಿಭಟನಾ ಮೆರವಣಿಗಗಳಲ್ಲಿ ಪಾಲ್ಗೊಂಡು, ಉಚಿತ ಬಸ್ ಪಾಸ್ ತ್ವರಿತವಾಗಿ ನೀಡುವಂತೆ ಆಗ್ರಹಿಸಿದರು.

ಬೆಂಗಳೂರಿನ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಕಾರಣಕ್ಕಾಗಿ ಉಚಿತ ಬಸ್ ಪಾಸ್ ಕೈ ಬಿಟ್ಟಿರುವುದು ಸರಿಯಲ್ಲ. ಬಸ್ ಪಾಸ್ ಪಡೆಯುವ ಬಹುತೇಕ ವಿದ್ಯಾರ್ಥಿಗಳು ರೈತರ ಮಕ್ಕಳಾಗಿದ್ದಾರೆ. ಹಾಗಾಗಿ, ಬೇರೆ ಬೇರೆ ಕ್ಷೇತ್ರದ ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ಬಳಸಿಕೊಂಡು ಉಚಿತ ಬಸ್ ಪಾಸ್ ಯೋಜನೆ ಮುಂದುವರೆಸಬೇಕು ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಶ್ವಿನಿ ಮಾತನಾಡಿ, ಈಗಾಗಲೇ ಶಾಲಾ ಕಾಲೇಜು ಆರಂಭಗೊಂಡು ಎರಡು ತಿಂಗಳು ಕಳೆದರೂ ಇನ್ನೂ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗಳು ಈ ಕೂಡಲೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಯ ಆದೇ ನೀಡಬೇಕು ಎಂದು ಆಗ್ರಹಿಸಿದರು.

ಬಂದ್ ಯಶಸ್ವಿ: ಶಾಲಾ-ಕಾಲೇಜುಗಳ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ, ಶಿಕ್ಷಕ ವರ್ಗವೂ ಬಂದ್ ಅನ್ನು ಬೆಂಬಲಿಸಿದೆ ಎಂದರು. ಪ್ರತಿಭಟನೆಯಲ್ಲಿ ಎಐಡಿವೈಓ ರಾಜ್ಯ ಕಾರ್ಯದರ್ಶಿ ಜಿ.ಎಸ್.ಕುಮಾರ್, ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ, ಕೆ.ಉಮಾ, ಎಂ.ಎನ್.ಶ್ರೀರಾಮ್, ಐಶ್ವರ್ಯಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಕೆಎಸ್ಸಾರ್ಟಿಸಿಗೆ ಮನವಿ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ನಿರ್ದೇಶಕರಿಗೆ ಎಸ್‌ಎಫ್‌ಐ ಕಾರ್ಯಕರ್ತರು ಮನವಿ ಸಲ್ಲಿಸಿ, ಆಗ್ರಹಿಸಿದರು. ಶಾಂತಿನಗರದ ಕೆಎಸ್ಸಾರ್ಟಿಸಿ ಪ್ರಧಾನ ಕಚೇರಿಗೆ ಎಸ್‌ಎಫ್‌ಐ ಕಾರ್ಯಕರ್ತರು, ಸಾರಿಗೆ ಕಚೇರಿಗೆ ಮುತ್ತಿಗೆ ಹಾಕಿ, ಬಳಿಕ ಕೆಸ್ಸಾರ್ಟಿಸಿ ನಿದೇಶಕರಿಗೆ ಮನವಿ ಸಲ್ಲಿಸಿ, ತ್ವರಿತವಾಗಿ ಎಲ್ಲ ವರ್ಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ದೊರೆಯಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ರಾಜ್ಯ ಪದಾಧಿಕಾರಿಗಳಾದ ಎಸ್. ವೇಗಾನಂದ, ಮಹೇಶ್, ಸಮಿತಿ ಸದಸ್ಯರಾದ ದಿಲೀಪ್ ಶೆಟ್ಟಿ ಮತ್ತು ವೆಂಕಟೇಶ್, ರಾಜೇಶ್ವರಿ ಸೇರಿದಂತೆ ಪ್ರಮುಖರಿದ್ದರು.

ಸಿದ್ದರಾಮಯ್ಯ ಇರಬೇಕಿತ್ತು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುತ್ತಿದ್ದರೆ, ಇಷ್ಟೊತ್ತಿಗೆ ಉಚಿತ ಬಸ್ ಪಾಸ್ ದೊರೆಯುತ್ತಿತ್ತು. ಈ ವಿಚಾರದಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಆಗಿದ್ದರು. ಆದರೆ, ಸಮ್ಮಿಶ್ರ ಸರಕಾರದಲ್ಲಿ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಅವರು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಚಿವರಾಗಿದ್ದೇ ಸರಿ ಇಲ್ಲ. ಎರಡು ತಿಂಗಳಾದರೂ ಈವರೆಗೆ ಉಚಿತ ಬಸ್ ಪಾಸ್ ಕೊಡಿಸಿಲ್ಲ. ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ಉಚಿತ ಬಸ್ ಪಾಸ್ ನೀಡಬೇಕು. ಇಲ್ಲವಾದರೆ, ಆಗಸ್ಟ್ ತಿಂಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News