ಬೆಂಗಳೂರು: ಪಾಸ್‌ಪೋರ್ಟ್ ಅವಧಿ ಮುಗಿದರೂ ನೆಲೆಸಿದ್ದ ಆರೋಪ; 107 ವಿದೇಶಿ ಪ್ರಜೆಗಳು ವಶಕ್ಕೆ

Update: 2018-07-21 17:03 GMT

ಬೆಂಗಳೂರು, ಜು.21: ಪಾಸ್‌ಪೋಟ್ ಅವಧಿ ಮುಕ್ತಾಯಗೊಂಡಿದ್ದರೂ, ನಗರದಲ್ಲಿ ನೆಲೆಸಿದ್ದ ಆರೋಪದಡಿ ನೈಝೀರಿಯಾ, ಆಫ್ರಿಕಾ ದೇಶದ 107 ವಿದೇಶಿ ಪ್ರಜೆಗಳನ್ನು ನಗರದ ವಿವಿಧ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ 25, ಉತ್ತರ-50, ಪೂರ್ವ ವಿಭಾಗ ವ್ಯಾಪ್ತಿಯಲ್ಲಿ 32 ಸೇರಿದಂತೆ ಒಟ್ಟು 107 ಜನರನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಅಬ್ದುಲ್ ಅಹದ್, ನಗರದ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ಆಫ್ರಿಕನ್ ಪ್ರಜೆಗಳು ವಾಸವಾಗಿದ್ದು, ಕೆಲವರು ಪಾಸ್‌ಪೋರ್ಟ್, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವ ಆರೋಪದಡಿ ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ ಇತ್ತೀಚೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ 6ಗಂಟೆ ಸುಮಾರಿಗೆ ವೈಟ್‌ಫೀಲ್ಡ್ ವಿಭಾಗದ ಕೆಆರ್‌ಪುರಂ, ಕಾಡುಗೋಡಿ, ಎಚ್‌ಎಎಲ್, ಮಹದೇವಪುರ, ವರ್ತೂರು ಪೊಲೀಸ್ ಠಾಣೆಗಳ ಎಸ್ಸೈಗಳ ನೇತೃತ್ವದಲ್ಲಿ 6 ತಂಡಗಳಲ್ಲಿ ಒಟ್ಟು 120ಕ್ಕೂ ಅಧಿಕ ಪೊಲೀಸರು ಏಕಕಾಲದಲ್ಲಿ ಟಿ.ಸಿ.ಪಾಳ್ಯ,ಬೃಂದಾವನ ಬಡಾವಣೆ, ಸೀಗೆಹಳ್ಳಿ, ಪ್ರಿಯಾಂಕ ನಗರ, ಆನಂದಪುರ, ಮಾರ್ಗೊಂಡನಹಳ್ಳಿ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿ 25 ಮಂದಿ ನೈಜಿರೀಯಾ ಮತ್ತು ಉಗಾಂಡಾ ದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವಿವರಿಸಿದರು.

ಕಾನೂನು ಅನ್ವಯ ಸೂಕ್ತ ದಾಖಲೆ ಹೊಂದದವರ ವಿರುದ್ಧ ಪಾಸ್‌ಪೋರ್ಟ್ ಕಾಯ್ದೆ, ವಿದೇಶಿ ಪ್ರಜೆಗಳ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಅಧಿಕೃತ ದಾಖಲಾತಿಗಳನ್ನು ಹೊಂದದ ಆಫ್ರಿಕನ್ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಮನೆ ಮಾಲಕರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅಬ್ದುಲ್ ಅಹದ್ ಹೇಳಿದರು.

ಗಾಂಜಾ; ಇಬ್ಬರ ಬಂಧನ
ಮೂರು ವಿಭಾಗದಲ್ಲೂ ಆರು ಜನ ವಿದೇಶಿ ಪ್ರಜೆಗಳನ್ನು ಮಾದಕ ವಸ್ತು ಆರೋಪದಡಿ ಬಂಧಿಸಲಾಗಿದ್ದು, 650 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News