ಬೆಂಗಳೂರನ್ನು ‘ಔಷಧ ತಯಾರಿಸುವ ಹಬ್’ ಮಾಡಿ: ಡಾ.ಜಿ.ಪರಮೇಶ್ವರ್

Update: 2018-07-21 13:34 GMT

ಬೆಂಗಳೂರು, ಜು.21: ರಾಜ್ಯದಲ್ಲಿರುವ ಔಷಧ ಕಂಪೆನಿಗಳು ಸರಕಾರದ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಭವಿಷ್ಯದಲ್ಲಿ ಬೆಂಗಳೂರನ್ನು ಉತ್ತಮ ಔಷಧಿಗಳನ್ನು ತಯಾರಿಸುವ ನಗರ(ಹಬ್)ವನ್ನಾಗಿ ಬೆಳೆಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ಶನಿವಾರ ನಗರದ ಅರಮನೆ ರಸ್ತೆಯಲ್ಲಿ ಔಷಧ ನಿಯಂತ್ರಣ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಔಷಧ ಉತ್ಪಾದನಾ ವೆಚ್ಚವು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ಇಲ್ಲಿ ಔಷಧ ಉತ್ಪಾದನೆಗೆ ಪ್ರೋತ್ಸಾಹ ನೀಡಿದರೆ, ಬೆಂಗಳೂರನ್ನು ಔಷಧ ಉತ್ಪಾದನಾ ಹಬ್ ಮಾಡಬಹುದು ಎಂದರು.

ಔಷಧ ನಿಯಂತ್ರಣ ಇಲಾಖೆಯು ಸಮಾಜದಲ್ಲಿ ಬಹಳ ಜನರ ಅಳಿವು ಉಳಿವಿನ ಜವಾಬ್ದಾರಿ ಹೊಂದಿದೆ. ಒಂದು ಔಷಧ ತಯಾರಿಸಲು ಬಹಳ ಪರಿಶ್ರಮವಿರುತ್ತದೆ. ಔಷಧಿಯನ್ನು ಪ್ರಯೋಗ ಮಾಡಿದ ನಂತರ ಹೊರಗಡೆ ಉಪಯೋಗಕ್ಕೆ ಬರುತ್ತದೆ. ಅನುಮಾನಾಸ್ಪದವಾಗಿ ಕಂಡು ಬರುವ ಔಷಧಿಗಳನ್ನು ಪರೀಕ್ಷಿಸಲು ನಿಮ್ಮ ಬಳಿ ಒಂದು ಸುಸಜ್ಜಿತವಾದ ಪ್ರಯೋಗಾಲಯವು ಇರಬೇಕಾಗುತ್ತದೆ ಎಂದು ಅವರು ಹೇಳಿದರು.

ಔಷಧಗಳ ವ್ಯತ್ಯಾಸದಿಂದ ನಮ್ಮ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇತರ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಶಾಸಕರ ಸಮಿತಿಯೊಂದಕ್ಕೆ ಸದಸ್ಯನಾಗಿದ್ದೆ. ಆಗ ಅವಿನ್ಯೂ ರಸ್ತೆಯ ಚಿಕ್ಕ ಅಂಗಡಿಯೊಂದರಲ್ಲಿ ಔಷಧಿಗಳನ್ನು ಸಿದ್ಧಪಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಸಿಬಿಐ ತನಿಖೆ ನಡೆದು ಆತನಿಗೆ ಶಿಕ್ಷೆಯೂ ಆಗಿತ್ತು ಎಂದು ಅವರು ಹೇಳಿದರು.

ಪೊಲೀಸರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸುಮಾರು 5 ಕೋಟಿ ರೂ.ಮೌಲ್ಯದ ಮಾದಕದ್ರವ್ಯದ ಗುಳಿಗೆಗಳನ್ನು ವಶಪಡಿಸಿ ಕೊಂಡಿದ್ದರು. ನಾನು ಹೊರದೇಶಗಳಿಂದ ಈ ವಸ್ತುಗಳು ಬಂದಿರಬಹುದು ಎಂದು ಭಾವಿಸಿದ್ದೆ. ಆದರೆ, ಪೊಲೀಸರನ್ನು ವಿಚಾರಿಸಿದಾಗ ಇದು ಬೆಂಗಳೂರು ನಗರದಲ್ಲೆ ಸಿದ್ಧಪಡಿಸಿದ್ದು ಎಂದಾಗ ಆಶ್ಚರ್ಯವಾಯಿತು ಎಂದು ಪರಮೇಶ್ವರ್ ತಿಳಿಸಿದರು.

ಚಿಕ್ಕ ಚಿಕ್ಕ ಮನೆಗಳಲ್ಲಿ ಫಾರ್ಮಸಿಗಳ ಫಲಕಗಳನ್ನು ಹಾಕಿಕೊಂಡು ಇಂತಹ ಮಾದಕ ದ್ರವ್ಯ ಗುಳಿಗೆಗಳನ್ನು ತಯಾರಿಸುವ ಜಾಲ ಪತ್ತೆಯಾಗಿದೆ. ಕೆಲವು ಔಷಧ ಅಂಗಡಿಗಳಲ್ಲಿ ನಿಷೇಧಿತ ಔಷಧಿಗಳನ್ನು ಮಾರಾಟ ಮಾಡಲಾಗುತ್ತದೆ. ಅವರಿಗೆ ಇಂತಹ ಔಷಧಿಗಳು ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ತಡೆಗಟ್ಟಬೇಕಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಸದನದಲ್ಲಿ ಒಬ್ಬ ಶಾಸಕರು ತಮ್ಮ ಮಗ ಬೆಂಗಳೂರಿನ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮಾದಕದ್ರವ್ಯ ವ್ಯಸನಿಯಾಗಿದ್ದಾನೆ ಎಂದು ಅಳಲು ತೋಡಿಕೊಂಡರು. ಮಾದಕದ್ರವ್ಯಗಳಿಗೆ ಕಡಿವಾಣ ಹಾಕದಿದ್ದರೆ, ನಮ್ಮ ಮುಂದಿನ ಯುವ ಪೀಳಿಗೆಯ ಭವಿಷ್ಯ ಆತಂಕಕಾರಿಯಾಗಲಿದೆ ಎಂದು ಅವರು ಹೇಳಿದರು.

ಪಂಜಾಬ್‌ನಲ್ಲಿ ಮಾದಕದ್ರವ್ಯ ದಂಧೆಯಲ್ಲಿ ಭಾಗಿಯಾಗುವವರ ವಿರುದ್ಧ ಗೂಂಡಾ ಕಾಯ್ದೆ ಬಳಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದೇ ಮಾದರಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ. ಔಷಧ ನಿಯಂತ್ರಕರು ಈ ನಿಟ್ಟಿನಲ್ಲಿ ಸಕ್ರಿಯವಾದರೆ, ಪೊಲೀಸರಿಗೂ ಕ್ರಮ ಕೈಗೊಳ್ಳಲು ಸಹಾಯವಾಗಲಿದೆ ಎಂದು ಪರಮೇಶ್ವರ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಮಾತನಾಡಿ, ಮಾದಕ ದ್ರವ್ಯಗಳಂತೆಯೆ, ಸಾಮಾನ್ಯ ಔಷಧಿಗಳ ಕುರಿತು ಜನಸಾಮಾನ್ಯರು ಅನುಮಾನಪಡುವ ಪರಿಸ್ಥಿತಿ ಬರಬಾರದು. ಔಷಧಿಗಳನ್ನು ಯಾರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೂ ಗಮನವಿಟ್ಟಿರಬೇಕು ಎಂದರು. ನಮ್ಮ ರಾಜ್ಯವು ಈಗಾಗಲೆ ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ಸೇವೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ. ಔಷಧಿ ಕಂಪೆನಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಆರಂಭಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯವನ್ನು ಔಷಧಿಗಳ ಉತ್ಪಾದನಾ ಹಬ್ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಿವಾನಂದಪಾಟೀಲ್ ಹೇಳಿದರು.

ಈ ಸರಕಾರಿ ಕಟ್ಟಡವು ಇಲಾಖೆಗೆ ಹಸ್ತಾಂತರಾಗಿ ಆರು ತಿಂಗಳಾದರೂ ಉದ್ಘಾಟನೆ ಕಂಡಿರಲಿಲ್ಲ. 25-26 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವನ್ನು ಸದ್ಬಳಕೆ ಮಾಡಲು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್, ಅಪರ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News