ಧರ್ಮವನ್ನು ವೈಚಾರಿಕ ದೃಷ್ಟಿಕೋನದಿಂದ ವಿಶ್ಲೇಷಿಸಬೇಕು: ಚಿಂತಕ ಜಿ.ರಾಮಕೃಷ್ಣ

Update: 2018-07-21 16:08 GMT

ಬೆಂಗಳೂರು, ಜು.21: ಧರ್ಮವನ್ನು ವೈಚಾರಿಕ ಮತ್ತು ಐತಿಹಾಸಿಕ ದೃಷ್ಟಿಕೋನದಲ್ಲಿಟ್ಟುಕೊಂಡು ವಿಶ್ಲೇಷಣೆ ಮಾಡಬೇಕು ಎಂದು ಚಿಂತಕ ಡಾ.ಜಿ. ರಾಮಕೃಷ್ಣ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಯಲು ಬಳಗ ಹಾಗೂ ಸಿರಿವರ ಕಲ್ಚರಲ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ವೆಂಡಿ ಡೋನಿಗಲ್’ ಅವರ ‘ಹಿಂದೂಗಳು: ಬೇರೊಂದು ಚರಿತ್ರೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದಲ್ಲಿ ಇತಿಹಾಸದ ಕಲ್ಪನೆಯಿಲ್ಲದೆ ಆಚರಣೆಗಳನ್ನು ಆಚರಿಸುತ್ತಿರುತ್ತಾರೆ. ಸಂಸ್ಕೃತಿ, ಧರ್ಮ, ದೇವರು ಸೇರಿದಂತೆ ಎಲ್ಲ ಆಚರಣೆಗಳ ಬೆಳವಣಿಗೆಗೆ ಚಾಲನೆ ನೀಡಿದವರು ಯಾರು, ಅದರ ಮೂಲ ಯಾವುದು ಎಂಬ ಪ್ರಶ್ನೆಯನ್ನು ಯಾರು ಹಾಕಿಕೊಳ್ಳುತ್ತಿಲ್ಲ. ಮೊದಲಿಗೆ ಪ್ರಾಥಮಿಕ ಜ್ಞಾನವಿಲ್ಲದ ಕಾಲದಲ್ಲಿ ಬದುಕುತ್ತಿದ್ದೇವೆ. ಹೀಗಾಗಿ, ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.

ಹಿಂದೂ ಧರ್ಮಕ್ಕೆ ನಿರ್ದಿಷ್ಟವಾದ ಲಕ್ಷಣಗಳೇ ಇಲ್ಲ. ವರ್ಣಾಶ್ರಮ ವ್ಯವಸ್ಥೆಯನ್ನು ಹೊಂದಿರುವ ಎಲ್ಲವೂ ಹಿಂದೂ ಧರ್ಮದ ಭಾಗ ಎನ್ನುತ್ತಾರೆ ಹೊರತು, ಅದಕ್ಕೆ ಮೂಲ ಲಕ್ಷಣಗಳನ್ನು ಪಟ್ಟಿ ಮಾಡಲಾಗುತ್ತಿಲ್ಲ. ಅಲ್ಲದೆ, ಆಚರಣೆಗಳ ಬಗ್ಗೆ ಪ್ರಸ್ತಾಪವಾಗಿದ್ದರೂ, ಎಲ್ಲಿಯೂ ಇದು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದು ಎಂದು ಪ್ರಸ್ತಾಪವಾಗಿಲ್ಲ. ದ್ವೈತ ಮತ್ತು ಅದ್ವೈತ ಸೇರಿದಂತೆ ಧಾರ್ಮಿಕ ಸಿದ್ಧಾಂತಗಳು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ. ಅವೆಲ್ಲವೂ ಪಂಥಗಳಾಗಿವೆ. ಹೀಗಾಗಿ, ಪೇಜಾವರ ಶ್ರೀಗಳು, ಸಂಘಪರಿವಾರ ಹೇಳುವ ಧರ್ಮ ನಿಜವಾದ ಹಿಂದೂ ಧರ್ಮವಲ್ಲ ಎಂದು ರಾಮಕೃಷ್ಣ ಹೇಳಿದರು.

ನೂರಾರು ವರ್ಷಗಳ ಇತಿಹಾಸವಿರುವ ದೇಶದಲ್ಲಿ ಯಾವ ದೇವರು ದೊಡ್ಡವರು, ಚಿಕ್ಕವರು ಎಂಬ ಚರ್ಚೆ ನಡೆದಿಲ್ಲ. ಅದು ನಡೆದಿದ್ದರೆ, ಯಾರ ಹತ್ಯೆ ನಡೆಯುತ್ತಿತ್ತೋ ಎಂದು ವ್ಯಂಗ್ಯವಾಡಿದ ಅವರು, ನಾವು ಯಾವುದಾದರೂ ಮತ-ಧರ್ಮಕ್ಕೆ ಸೇರಿದ್ದೇವೆ ಎಂದ ಮೇಲೆ ಅದರ ಪ್ರಭಾವ ನಮ್ಮ ಮೇಲೆ ಎಷ್ಟು ಬೀರಿದೆ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ದೇಶದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯೊಬ್ಬರು ಜಾತೀಯತೆ ಇರಬಹುದು. ಆದರೆ, ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ಜಾತಿಯಿಂದ ಯಾರೂ ಅನಾನುಕೂಲ, ನೋವನ್ನು ಅನುಭವಿಸುತ್ತಿಲ್ಲ ಎಂದು ಪುಸ್ತಕ ಬರೆದಿದ್ದಾರೆ. ಮತ್ತೊಂದು ಕಡೆ ನ್ಯಾ.ರಾಮಜೋಯಿಸರು ವಿಷ್ಣು ಪುರಾಣದಲ್ಲಿನ ಪಠ್ಯವನ್ನು ಹೇಳುವ ಮೂಲಕ ಹಿಂದೂ ಧರ್ಮದ ಲಕ್ಷಣಗಳನ್ನು ಗುರುತಿಸಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕೃತಿ ಅಪಾರವಾದ ಜ್ಞಾನವನ್ನು ತುಂಬುತ್ತದೆ ಎಂದು ವಿಶ್ಲೇಷಿಸಿದರು.

ಕೃತಿ ಅನುವಾದಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ದೈವ, ಧರ್ಮ ಎಂಬುದು ಪ್ರಬಲವಾಗಿದೆ ಎಂದು ಅದು ಏಕಾಏಕಿ ಸಂಭವಿಸಿದ್ದಲ್ಲ. ಅದರ ಹಿಂದೆ ನಮ್ಮ ಪೂರ್ವಜರಿದ್ದಾರೆ. ಹರಿಜನ ಮತ್ತು ಗಿರಿಜನ ಸಮುದಾಯಗಳ ದರ್ಶನಗಳು ದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ. ತತ್ವಶಾಸ್ತ್ರ, ಪ್ರಯೋಗಾತ್ಮಕ, ವಿಚಾರಾತ್ಮಕವಾದ ಅಂಶಗಳನ್ನು ಸ್ಥಳೀಯರು ನೀಡಿದ್ದಾರೆ. ಹೀಗಾಗಿ ಸಮಗ್ರವಾದ ಅಧ್ಯಯನದ ಅಗತ್ಯವಿದೆ. ಎಲ್ಲವನ್ನೂ ಅಧ್ಯಯನದಿಂದಲೇ ಪಡೆಯಬೇಕು ಎಂದರು.

ದೇಶದಲ್ಲಿ ಜನಪದರು, ಬುಡಕಟ್ಟು ಸಮುದಾಯಗಳು ಅನುಸರಿಸುತ್ತಿದ್ದ ಪದ್ಧತಿಗಳೇ ಇಂದು ಆಚರಣೆಗಳು, ಧರ್ಮಗಳಾಗಿವೆ. ಆದುದರಿಂದಾಗಿ, ಬದಲಾವಣೆ ಯಾವ ರೀತಿಯಲ್ಲಿ ನಡೆಯಿತು ಎಂಬುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಧರ್ಮ ಅಥವಾ ಆಚರಣೆಯನ್ನು ನಿರಾಕರಣೆ ಮಾಡುವ ಮೂಲಕ ದೇವಸ್ಥಾನ ಪ್ರವೇಶ ಮಾಡದಿರುವುದು ಸರಿಯಾದುದಲ್ಲ. ನಾವು ಒಳ ಪ್ರವೇಶ ಮಾಡಿದ ಸಂದರ್ಭದಲ್ಲಿ ಅಲ್ಲಿಯೂ ನಮ್ಮ ಮೂಲದ ಬಗ್ಗೆ ಹಲವಾರು ಅಂಶಗಳು ಗ್ರಹಿಕೆಗೆ ಬರುತ್ತವೆ ಎಂದ ಅವರು, ಹಿಂದಿನ ಕಾಲಘಟ್ಟದಲ್ಲಿ ನಮ್ಮ ಶಕ್ತಿಯನ್ನು ಕುಗ್ಗಿಸುವ ಸಲುವಾಗಿ ಶೂದ್ರರು, ಮಹಿಳೆಯರು ಏನೂ ಕಲಿಯಬಾರದು ಎಂದು ನಿಷೇಧ ಹೇರುತ್ತಿದ್ದರು ಎಂದು ಹೇಳಿದರು.

ಮೌಲ್ಯವನ್ನು ಕಳೆದುಕೊಳ್ಳುವ ಯಾವ ಧರ್ಮವೂ ಧರ್ಮವಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ಇಂದಿನ ಬಿಜೆಪಿ, ಸಂಘಪರಿವಾರದ ಧರ್ಮ ಪರಿಕಲ್ಪನೆ ಕೇವಲ ರಾಜಕೀಯ ಶಕ್ತಿಯಾಗಿ ಬಳಕೆಯಾಗುತ್ತಿದೆ. ಅದಕ್ಕೆ ಯಾವುದೇ ವೌಲ್ಯವಿಲ್ಲ.
-ಬಂಜಗೆರೆ ಜಯಪ್ರಕಾಶ್, ಚಿಂತಕ

ಇಂದಿನ ಹಿಂದುತ್ವವಾದಿಗಳು ಪ್ರತಿಪಾದಿಸುವ ಧರ್ಮದ ಪರಿಕಲ್ಪನೆಯನ್ನು ಹೈಜಾಕ್ ಮಾಡಲಾಗಿದೆ. ಅದಕ್ಕೆ ಉತ್ತರವನ್ನೂ ನೀಡಲಾಗುತ್ತಿದೆ. ಆದರೆ, ವೈಚಾರಿಕ ಶತ್ರುಗಳೊಂದಿಗೆ ಸಂವಾದ ನಡೆಸಲು, ಚರ್ಚಿಸಲು ಅಗತ್ಯವಾದ ತಿಳುವಳಿಕೆ ನಮ್ಮಲ್ಲಿ ಇಲ್ಲ. ಆದುದರಿಂದಾಗಿ, ಹೆಚ್ಚಿನ ಓದು ಮುಖ್ಯವಾಗುತ್ತದೆ. ಅದಕ್ಕೆ ಇಂತಹ ಕೃತಿಗಳು ಸಹಾಯವಾಗುತ್ತದೆ
-ಪಾರ್ವತೀಶ ಬಿಳಿದಾಳೆ, ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News