ಎರಡು ಹನಿ ಕಂಬನಿ ಗೆಳೆಯ....

Update: 2018-07-21 18:44 GMT

ಆ ದಿನಗಳ ಕವಿಕತೆಗಾರರ ಸಾಲಿನಲ್ಲಿ ಜಾಗ ಗಿಟ್ಟಿಸಿಕೊಂಡ. ವ್ಯಾಸ ರಾವ್ ಬರವಣಿಗೆ ಶುರುಮಾಡಿದ ಕಾಲಘಟ್ಟದಲ್ಲಿ ನವ್ಯದ ಪ್ರಭಾವ ಲೇಖಕನ ಸ್ವಂತದೃಷ್ಟಿಯನ್ನು ಮಂಜಾಗಿಸುವಷ್ಟು ದಟ್ಟವಾಗಿತ್ತು. ಈ ಪ್ರಭಾವದಿಂದ ಬೆಳೆಯತೊಡಗಿದ ಎಷ್ಟೋ ಮಂದಿ ಮುಂದೆ ನವ್ಯದ ದಿಗಂತದಿಂದ ಉದುರಿದ ಉಲ್ಕೆಗಳಾದರು. ಆದರೆ ವ್ಯಾಸ ರಾವ್ ಮೋಹಕ ಪ್ರಲೋಭನೆಯ ತಾರಾ ಲೋಕಕ್ಕೆ ಜಾರಿಕೊಂಡದ್ದು ಅವರ ಸೃಜನಶೀಲ ಬರವಣಿಗೆಯಲ್ಲಿ ಪಲ್ಲಟವನ್ನುಂಟುಮಾಡಿತು. ಸಿನೆಮಾ ಎಂಬ ಮೋಹಿನಿ ಅವರನ್ನು ಹಿಡಿದುಕೊಂಡಳು, ಪುಟ್ಟಣ್ಣರ ರೂಪದಲ್ಲಿ. ಕವಿತೆ/ಕಥೆ ಬರೆದು ಕೊಂಡು ತನ್ನದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿದ್ದ ಕವಿ ವ್ಯಾಸ ರಾವ್ ಅವರನ್ನು ‘ಶುಭ ಮಂಗಳ’ದ(1975) ಮೂಲಕ ಪುಟ್ಟಣ್ಣ ಕಣಗಾಲರು ಝಗಮಗಿಸುವ ಚಲಚಿತ್ರ ಸಾಹಿತ್ಯಲೋಕದ ಗ್ಲ್ಯಾಮರ್ ಪೋಸ್ಟ್‌ನಲ್ಲಿ ಪ್ರತಿಷ್ಠಾಪಿಸಿಬಿಟ್ಟರು.


ವ್ಯಾಸರು,
-ಅಂದರೆ ಹುಬ್ಬೇರಿಸಬೇಡಿ. ನಾನೀಗ ಬರೆಯುತ್ತಿರುವುದು ದ್ವಾಪರ ಯುಗದ ವ್ಯಾಸ ಮಹರ್ಷಿಗಳ ಬಗ್ಗೆಯೂ ಅಲ್ಲ ಅಥವಾ ಕಲಿಯುಗದ ಕುಮಾರ ವ್ಯಾಸನ ಬಗ್ಗೆಯೂ ಅಲ್ಲ. ಇಪ್ಪತ್ತು-ಇಪ್ಪತ್ತೊಂದನೆಯ ಶತಮಾನದಲ್ಲಿ ನಮ್ಮ ನಡುವೆ ಕ್ರಿಯಾಶೀಲರಾಗಿದ್ದ ಇಬ್ಬರು ವ್ಯಾಸರ ಬಗ್ಗೆ. ಒಬ್ಬರು ಕಾಸರಗೋಡಿನ ಕತೆಗಾರ ಎಂ.ವ್ಯಾಸ, ಇನ್ನೊಬ್ಬರು ಕಳೆದ ರವಿವಾರ ನಮ್ಮನ್ನು ಅಗಲಿದ ಬೆಂಗಳೂರಿನ ಕವಿ ಎಂ. ಎನ್. ವ್ಯಾಸ ರಾವ್.

 ಎಪ್ಪತ್ತರ ದಶಕದ ಪ್ರಾರಂಭ... ನವ್ಯದ ಕುಮ್ಮಕ್ಕಿನೊಂದಿಗೆ ಕನ್ನಡ ಕಾವ್ಯ ಮತ್ತು ಸಣ್ಣಕಥೆಗಳಲ್ಲಿ ಪ್ರಯೋಗಶೀಲತೆ ಸಮೃದ್ಧವಾಗಿದ್ದ ದಿನಗಳು. ಕನ್ನಡದ ದೊಡ್ಡ ಪತ್ರಿಕೆಯೊಂದರ ಉಪಸಂಪಾದಕನಾಗಿ ಸಾಪ್ತಾಹಿಕ ಪುರವಣಿ ಸಂಪಾದಕರಿಗೆ ಸಾಥ್ ನೀಡುತ್ತಿದ್ದ ಆ ದಿನಗಳಲ್ಲಿ ಪ್ರತಿದಿನ ಅಂಚೆಯಲ್ಲಿ ಬರುವ ಸಣ್ಣ ಕಥೆ/ಕವನಗಳ ರಾಶಿಯಲ್ಲಿ ಕಣ್ಣಾಡಿಸುತ್ತಿದ್ದಾಗಲೆಲ್ಲ ಕಾಸರಗೋಡಿನ ಎಂ. ವ್ಯಾಸರ ಕಥೆಯ ಹಸ್ತಪ್ರತಿ ಮುಖಾಮುಖಿಯಾಗುತ್ತಿತ್ತು. ಆಗ ವ್ಯಾಸರಷ್ಟೇ ಪುಂಖಾನುಪುಂಖವಾಗಿ ಬರೆಯುತ್ತಿದ್ದ ಇನ್ನೊಬ್ಬರು ಮಲೆನಾಡಿನ ಕತೆಗಾರ ಬಿ.ಟಿ.ಶ್ರೀಪಾದ. ಬಹುತೇಕ ಪ್ರತಿವಾರ ಇವರ ಕತೆ ಅಂಚೆಯಲ್ಲಿ ಹಾಜರಾಗುತ್ತಿದ್ದವು. ಅತಿಯಾದ ರಮ್ಯತೆ, ಭಾವಾವೇಶ, ಕಲಾತ್ಮಕ ಶಿಸ್ತಿನ ಕೊರತೆ, ಮಿತಿಮೀರಿದ ಪುಟ ಸಂಖ್ಯೆ ಇಂಥ ಹಲವಾರು ಕಾರಣಗಳಿಂದಾಗಿ ಇವು ಪ್ರಕಟನೆಗೆ ಯೋಗ್ಯವಾಗಿರುತ್ತಿರಲಿಲ್ಲ. ಆದರೆ ಸಮಾಜಶಾಸ್ತ್ರಜ್ಞರ/ಮನಶ್ಶಾಸ್ತ್ರಜ್ಞರ ಅಧ್ಯಯನಯೋಗ್ಯವಾದ ವಿಪುಲ ಮಾಹಿತಿ ಇವರ ಕತೆಗಳಲ್ಲಿ ತುಂಬಿರುತ್ತಿತ್ತು.

ವ್ಯಾಸರ ಕತೆಗಳಲ್ಲಿ ಸಮಾಜದಲ್ಲಿನ ಕ್ರೌರ್ಯ ಮತ್ತು ಕೇಡಿಗತನ-ದುಷ್ಟತನಗಳ ಚಿತ್ರಣ, ಈವಿಲ್‌ನ ವಿಜೃಂಭಣೆ ತಂಬಿರುತ್ತಿತ್ತು. ವ್ಯಾಸರನ್ನು ನಾನು ಒಂದೆರಡು ಬಾರಿ ಅವರು ನಮ್ಮ ಕಚೇರಿಗೆ ಬಂದಾಗ ಭೇಟಿಯಾದದ್ದುಂಟು. ಹೆಚ್ಚು ಮಾತಿಲ್ಲದ, ಮ್ಲಾನವದನದ ಅವರು ಯಾವುದೋ ಭೀತಿಯಿಂದ ಕಂಗೆಟ್ಟವರಂತೆ ಕಾಣುತ್ತಿದ್ದರು. ಅವರ ಕುಟುಂಬದಲ್ಲಿ ನಡೆದ ಕೊಲೆಯೊಂದು ಅವರ ಮೇಲೆ ಗಾಢ ಪರಿಣಾಮ ಬೀರಿತ್ತೆಂದು ನಾನು ಕೇಳಿ ತಿಳಿದಿದ್ದೆ. ಭೀತಿ ಮತ್ತು ನೋವುಗಳೇ ಮೂರ್ತಿವೆತ್ತಂತೆ ಅವರು ಮೌನಿಯಾಗಿ ಕೂತಿರುತ್ತಿದ್ದರು. ಇದಕ್ಕೆ ತದ್ವಿರುದ್ಧ ಎಂ. ಎನ್. ವ್ಯಾಸ ರಾವ್. ಸದಾ ಹಸನ್ಮುಖಿ, ಚೂಟಿಯ ವ್ಯಕ್ತಿತ್ವ. ಸಂಕೋಚದಿಂದ ಗಾವುದ ದೂರ. ಅವನೂ ಕವಿ/ಕತೆಗಾರ. ಆದರೆ ಎಂ.ವ್ಯಾಸರಷ್ಟು ಪ್ರೊಲಿಫಿಕ್ ಅಲ್ಲ, ಗಜಗರ್ಭ ಅವನದು. ಕಾಸರಗೋಡಿನ ವ್ಯಾಸ ತೀರಿಕೊಂಡು ಹಲವಾರು ವರ್ಷಗಳಾಗಿವೆ. ಆದರೂ ಅವರು ನನ್ನ ನೆನಪಿನ ಭಾಗವಾಗಿದ್ದಾರೆ, ಏಕೋ ಗೊತ್ತಿಲ್ಲ, ಬಹುಶಃ ಅವರ ಕತೆಗಳಿಂದಾಗಿ, ಅವರ ನಿಗೂಢ ವ್ಯಕ್ತಿತ್ವದಿಂದಾಗಿ.ಈಗಷ್ಟೆ, ಬೇರೊಂದು ಲೋಕದಲ್ಲಿ ಜರೂರು ಕೆಲಸವಿದೆ ಎನ್ನುವ ರೀತಿಯಲ್ಲಿ ಅಗಲಿರುವ ಎಂ.ಎನ್.ವ್ಯಾಸ ರಾವ್ ಕವಿಯಾಗಿ, ಅದಮ್ಯ ಜೀವನೋತ್ಸಾಹಿಯಾಗಿ, ಏಕವಚನದ ಗೆಳೆಯನಾಗಿ ನನ್ನ ಹೃದಯಕ್ಕೆ ಇಳಿದವನು.

ನನ್ನೂರು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿರುವ ಗುಂಬಳ್ಳಿ. ವ್ಯಾಸರಾವ್ ಪಕ್ಕದ ಮಾಂಬಳ್ಳಿಯವನು. ಐವತ್ತು ವರ್ಷಗಳ ಹಿಂದೆ ಮೊದಲಸಲ ಭೇಟಿಯಾದಾಗ ನಾವು ನೆರೆಹೊರೆ ಹಳ್ಳಿಯವರು ಎಂದು ತಿಳಿದು ಯಳಂದೂರಿನ ಜಾಗೀರ್‌ದಾರರಂತೆ ಸಂಭ್ರಮಿಸಿದ್ದೆವು. ಆಗಲೇ ನಾವು ಏಕವಚನದ ಗೆಳೆಯರಾದದ್ದು. ವ್ಯಾಸ ರಾವ್ ಕಾಲೇಜಿಗೆ ಮಣ್ಣುಹೊತ್ತದ್ದು ಮೈಸೂರಿನಲ್ಲಿ. ಶಾರದಾವಿಲಾಸ್ ಕಾಲೇಜಿನ ವಿದ್ಯಾರ್ಥಿ. ಮುಂದಿನ ಬದುಕೆಲ್ಲ ಬೆಂಗಳೂರಿನಲ್ಲಿ, ಬ್ಯಾಂಕ್ ಉದ್ಯೋಗಿಯಾಗಿ, ಸಾಹಿತ್ಯ ವಲಯಗಳಲ್ಲಿ ಕವಿ/ಕತೆಗಾರನಾಗಿ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಚಿರಪರಿಚಿತ ಮುಖವಾಗಿ, ಮಿತ್ರ-ಪರಿಚಿತ-ಅಪರಿಚಿತ ಇತ್ಯಾದಿ ಭೇದಭಾವ ಎಣಿಸದೆ ಎಲ್ಲರಿಗೂ ಸಮಯಕ್ಕೊದಗುವ ಸಹಾಯ ಹಸ್ತವಾಗಿ-ನೂರು ಬಗೆಯ ನೋವುಗಳಿಗೆ ಮಿಡಿಯುತ್ತಿದ್ದ ಕವಿ ಹೃದಯ.

ಸಂವೇದನಾಶೀಲ ಯುವಕ ವ್ಯಾಸನಿಗೆ ಮೈಸೂರಿನಲ್ಲೇ ಸಾಹಿತ್ಯದ ವಾಸನೆ ಅಂಟಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಮೈಸೂರಿನ ಮಣ್ಣಿನ ಗುಣವೇ ಅಂಥಾದ್ದು. ಮಾನಸ ಗಂಗೋತ್ರಿ ಪರಿಸರದ ಪ್ರಭಾವ, ಕುಕ್ಕರಹಳ್ಳಿಯ ಕೆರೆಯ ಮೇಲಣ ಗಾಳಿ ಮೈಮೇಲೆ ಬಂದರೆ ಸಾಕು ಪ್ರೀತಿಪ್ರೇಮಗಳು ಕಚಗುಳಿ ಇಡಲಾರಂಭಿಸುತ್ತವೆ. ಕಾವ್ಯಕನ್ನಿಕೆಯೊಂದಿಗೆ ಕೋರ್ಟ್‌ಶಿಪ್ ಶುರುವಾಗುತ್ತದೆ. ಹಸಿಬಿಸಿ ಪ್ರೇಮಕಾವ್ಯಗಳು ಹುಟ್ಟುತ್ತವೆ. ನಮ್ಮ ವ್ಯಾಸನೂ ಇದಕ್ಕೆ ಹೊರತಾಗಿರಲಿಲ್ಲ. ಮೈಸೂರಿನಲ್ಲಿ ಕೊನರಿದ ಪ್ರೇಮ ಅಲ್ಲೇ ಉಳಿದರೂ ಕಾವ್ಯ ಬೆಂಗಳೂರಿನ ಪರಿಸರದಲ್ಲೂ ದಾಂಗುಡಿ ಇಡಲಾರಂಭಿಸಿತು. 1971-72ರಲ್ಲಿ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ ‘ಸಾಕ್ಷಿ’ಯಲ್ಲಿ ‘ಏರ್‌ಹೋಸ್ಟೆಸ್’, ‘ಹಾವು’, ‘ತಿಮಿಂಗಲಗಳು’ ಮೊದಲಾದ ಕವನಗಳು ಪ್ರಕಟವಾದದ್ದೇ ತಡ, ಎಂ. ಎನ್. ವ್ಯಾಸ ರಾವ್ ಎಂಬ ಕವಿ ನವ್ಯಕಾವ್ಯ ದಿಗಂತದಲ್ಲಿ ಮೂಡಿಯಾಗಿತ್ತು. ವ್ಯಾಸನೊಳಗಣ ಕವಿಯ ಆಗಮನ ಹೀಗೆ ಅದ್ದೂರಿಯಾಗಿ ಘೋಷವಾದದ್ದೇ ಅವನ ಸೃಜನಶೀಲತೆಗೆ ಹೊಸ ಹುರುಪು ಬಂತು. ವ್ಯಾಸನ ಸೃಜನಶೀಲತೆಯ ಪರಿಧಿ ಸಣ್ಣಕಥೆ/ಕಾದಂಬರಿ ಪ್ರಕಾರಗಳಿಗೂ ಹಬ್ಬಿತು.

ಎಂ. ಎನ್. ವ್ಯಾಸ ರಾವ್ ಆ ದಿನಗಳ ಕವಿಕತೆಗಾರರ ಸಾಲಿನಲ್ಲಿ ಜಾಗ ಗಿಟ್ಟಿಸಿಕೊಂಡ. ವ್ಯಾಸ ರಾವ್ ಬರವಣಿಗೆ ಶುರುಮಾಡಿದ ಕಾಲಘಟ್ಟದಲ್ಲಿ ನವ್ಯದ ಪ್ರಭಾವ ಲೇಖಕನ ಸ್ವಂತದೃಷ್ಟಿಯನ್ನು ಮಂಜಾಗಿಸುವಷ್ಟು ದಟ್ಟವಾಗಿತ್ತು. ಈ ಪ್ರಭಾವದಿಂದ ಬೆಳೆಯತೊಡಗಿದ ಎಷ್ಟೋ ಮಂದಿ ಮುಂದೆ ನವ್ಯದ ದಿಗಂತದಿಂದ ಉದುರಿದ ಉಲ್ಕೆಗಳಾದರು. ಆದರೆ ವ್ಯಾಸ ರಾವ್ ಮೋಹಕ ಪ್ರಲೋಭನೆಯ ತಾರಾ ಲೋಕಕ್ಕೆ ಜಾರಿಕೊಂಡದ್ದು ಅವರ ಸೃಜನಶೀಲ ಬರವಣಿಗೆಯಲ್ಲಿ ಪಲ್ಲಟವನ್ನುಂಟುಮಾಡಿತು. ಸಿನೆಮಾ ಎಂಬ ಮೋಹಿನಿ ಅವರನ್ನು ಹಿಡಿದುಕೊಂಡಳು, ಪುಟ್ಟಣ್ಣರ ರೂಪದಲ್ಲಿ. ಕವಿತೆ/ಕಥೆ ಬರೆದು ಕೊಂಡು ತನ್ನದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿದ್ದ ಕವಿ ವ್ಯಾಸ ರಾವ್ ಅವರನ್ನು ‘ಶುಭ ಮಂಗಳ’ದ(1975) ಮೂಲಕ ಪುಟ್ಟಣ್ಣ ಕಣಗಾಲ್‌ರು ಝಗಮಗಿಸುವ ಚಲನಚಿತ್ರ ಸಾಹಿತ್ಯಲೋಕದ ಗ್ಲ್ಯಾಮರ್ ಪೋಸ್ಟ್ ನಲ್ಲಿ ಪ್ರತಿಷ್ಠಾಪಿಸಿಬಿಟ್ಟರು. ‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು’, ‘ನಾಕೊಂದ್ಲನಾಕೊ’ ಈ ಗೀತೆಗಳು ಬೆಳಗಾಗುವುದರಲ್ಲಿ ವ್ಯಾಸರಾವ್ ಅವರನ್ನು ‘ತಾರೆ’ಯಾಗಿಸಿಬಿಟ್ಟವು. ಮುಂದೆ,
   ‘ಚಂದ್ರಬಿಂಬ ತುಳುಕದಂತೆ ಕೊಳದ ತುಂಬ ಹೂವು/
   ನನ್ನ ಎದೆಯ ಆಳದೊಳಗೆ ನೂರುಬಗೆಯ ನೋವು/
   ..............
   ‘ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ/
   ನಡುವೆ ಮೈಚಾಚಿರುವ ವಿರಹ ದಡವು/
   ಯಾವ ದೋಣಿಯು ತೇಲಿ ಎಂದು ಬರುವುದೊ ಕಾಣೆ/
   ನೀನಿರುವ ಬಳಿಯಲ್ಲಿ ನನ್ನ ಬಿಡಲು/

ಇಂತಹ ಭಾವಪ್ರಧಾನವಾದ, ಯುವ ಮನಸ್ಸುಗಳಿಗೆ ಲಗ್ಗೆಹಾಕುವ ಮನೋಹರವಾದ ಹಾಡುಗಳನ್ನು ಬರೆದು ಜನಪ್ರಿಯ ಗೀತರಚನಕಾರರಾದರು. ಚಿತ್ರಗೀತೆಗಳ ಜೊತೆಗೆ ಚಿತ್ರ ಕಥೆ, ಸಂಭಾಷಣೆ, ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ, ಕ್ಯಾಸೆಟ್‌ಗಳಿಗಾಗಿ ಭಾವಗೀತೆಗಳ ರಚನೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಜನಪ್ರಿಯ ಮನೋರಂಜನೆಯ ಈ ಕವಲು ಅವರ ಪ್ರತಿಭೆಯನ್ನು ಸಂಪೂರ್ಣವಾಗಿ ಹೀರಿ ಹಿಂಡಿ ಹಿಪ್ಪೆ ಮಾಡಿಬಿಟ್ಟಿತು. ಹೀಗೆ, ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಡಬಹುದಾದಂಥ ಪ್ರತಿಭೆ ಅಡ್ಡದಾರಿ ಹಿಡಿದು ಪೋಲಾಯಿತು ಎನ್ನುವುದು ಅವರ ಮಿತ್ರ ಕೊರಗು.

ಇದು ಎಂ. ಎನ್. ವ್ಯಾಸ ರಾವ್ ಅವರ ಒಂದು ಮುಖವಾದರೆ, ಇನ್ನೊಂದು ಗೆಳೆಯ ವ್ಯಾಸನ ಅಂತಃಕರಣದ ಮುಖ. ಎಲ್ಲರಿಗೂ ಕೈಲಾದ ಸಹಾಯಮಾಡುವ ಗುಣ ಅವನದು. ತಿಂಗಳ ಕೊನೆಯ ಬರಿಗೈ ತಾಪತ್ರಯದ ಮಿತ್ರರಿಗೆ ಸಣ್ಣಪುಟ್ಟ ಸಾಲದ ನೆರವು, ಜಡ್ಡುಜಾಪತ್ತು ಅಥವಾ ಏನೋ ಕೌಟುಂಬಿಕ ತೊಂದರೆ ಆದವರಿಗೆ ಸಹಾಯ, ಸಭೆಸಮಾರಂಭಗಳನ್ನು ಏರ್ಪಡಿಸುವುದು, ಅತಿಥಿಗಳನ್ನು ಕರೆತರುವುದು ಹೀಗೆ ಎಲ್ಲ ಸಂದರ್ಭಗಳಲ್ಲೂ ನೆರವಿಗೆ ಧಾವಿಸುತ್ತಿದ್ದ ಅಂತಃಕರಣ ಜೀವಿ. ಅಡಿಗರು ಬೆಂಗಳೂರಿಗೆ ಬಂದು ನೆಲೆಸಿದ ಹೊಸತರಲ್ಲಿ ಅವರಿಗೆ ‘ಬಲಗೈ’ ಆದ ಪಟ್ಟ ಶಿಷ್ಯ. ಕೆ.ಎಸ್.ನ. ಕಷ್ಟಕ್ಕೆ ವ್ಯಾಸನೇ ಆಗಬೇಕು. ನಾವೆಲ್ಲ ಸಂಜೆ ಗಾಂಧಿ ಬಝಾರ್ ಸೇರುವ ವೇಳೆಗೆ ಐದಕ್ಕೆ ಬ್ಯಾಂಕ್ ಕೆಲಸ ಮುಗಿಸಿಕೊಂಡು ಆರಕ್ಕೆಲ್ಲ ಅಡಿಗರನ್ನು ಸಾಹಿತ್ಯ ಉಭಯಕುಶಲೋಪರಿಗೆ ತನ್ನ ಬೈಕಿನಲ್ಲಿ ಕರೆತರುತ್ತಿದ್ದ. ಎಂಟು ಗಂಟೆಗೆ ಗೋಷ್ಠಿ ಬರಖಾಸ್ತ್ ಆದ ಮೇಲೆ ತರಕಾರಿ ಚೀಲ ಹಿಡಿದು ಮಾರುಕಟ್ಟೆಯಲ್ಲಿ ಅವರನ್ನು ಸುತ್ತಾಡಿಸಿ, ನಂತರ ಮನೆಗೆ ಮುಟ್ಟಿಸಿ ತಾನು ಒಂಬತ್ತಕ್ಕೋ ಹತ್ತಕ್ಕೋ ಮನೆಸೇರಿಕೊಳ್ಳುತ್ತಿದ್ದ.

ತಿರುಗಿ ಮುಂಜಾನೆ ಅಡಿಗರು ಹೊಸಕವನ ಬರೆದಿದ್ದಾರೆಂಬ ಉದ್ಘೋಷಕ ಮುಂಗೋಳಿಯೂ ವ್ಯಾಸನೇ. ಅಡಿಗರ ಜೊತೆ ಶಿಮ್ಲಾದವರೆಗೆ ಅವನ ಪಯಣ. ಅಡಿಗರಿಗೋ ವ್ಯಾಸನಲ್ಲಿ ಪುತ್ರ ವಾತ್ಸಲ್ಯ. ಈ ಅಂತಃಕರಣದ ಮಿತ್ರನೊಂದಿಗೆ ನಾನು ಜಗಳವಾಡಿದ್ದೂ ಉಂಟು. ಭಾರತೀಯ ಜನತಾ ಪಕ್ಷಕ್ಕೆ ಪ್ರಚಾರ ಗೀತೆಗಳನ್ನು ಬರೆದುಕೊಟ್ಟ ಸಂದರ್ಭದಲ್ಲಿ ಅವನೊಂದಿಗೆ ತಕರಾರು ತೆಗೆದಿದ್ದೆ. ಅಡಿಗರು ಲೋಕಸಭೆಗೆ ಜನಸಂಘದ ಅಭ್ಯರ್ಥಿಯಾದಾಗ ಅಡಿಗರನ್ನು ಬಲಿಪಶುಮಾಡಲಾಗುತ್ತಿದೆ ಎಂದು ನಾನು, ಇಲ್ಲ ಎಂದ ವ್ಯಾಸ ಅವರ ಪರ ಪ್ರಚಾರ ಮಾಡಿದ್ದ. ಮೊನ್ನೆಮೊನ್ನೆ ಅವನು ಮರಣಹೊಂದುವುದಕ್ಕೆ ಕೆಲವು ದಿನ ಮುಂಚೆ ಅವನ ಜೊತೆ ಜಗಳವಾಡುವಷ್ಟು ಸಿಟ್ಟು ಬಂದಿತ್ತು. ಸಾವರ್ಕರ್ ಜೀವನಚರಿತ್ರೆ ಪುಸ್ತಕದ ಬಿಡುಗಡೆಯ ಪರಿವಾರದ ಸಮಾರಂಭವೊಂದರಲ್ಲಿ ಇವನು ಅಧ್ಯಕ್ಷನೋ ಮುಖ್ಯ ಅತಿಥಿಯೋ ಆಗಿದ್ದ. ಆ ಸಮಾರಂಭದಲ್ಲಿ ಮಾತನಾಡಿದ ಮಹನೀಯರೊಬ್ಬರು ಹಿಂಸೆಯನ್ನು ಪ್ರತಿಪಾದಿಸಿದ್ದನ್ನು ಓದಿ ಮನಸ್ಸಿಗೆ ಮುಜುಗರವಾಗಿತ್ತು. ಅಲ್ಲವೋ ವ್ಯಾಸ, ಸಮಾಜಕ್ಕೆ ಸಾಮರಸ್ಯದ ಸಂದೇಶಕೊಡಬೇಕಾದ ಕವಿ ನೀನು. ಹಿಂಸೆ ಪ್ರತಿಪಾದಿಸುವ ಸಭೆಯಲ್ಲಿ ಭಾಗಿಯಾದದ್ದು ಸರಿಯೇ ಎಂದು ಜಗಳವಾಡ ಬೇಕೆಂದಿದ್ದೆ. ಆದರೆ.....

   ಇನ್ನು ಯಾರೊಡನೆ ಜಗಳವಾಡಲಿ ಗೆಳೆಯ....

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News