ಕಾಲೇಜು ಪ್ರೇಮಿಗಳಿಗೆ ಕೇರಳ ಹೈಕೋರ್ಟ್ ರಕ್ಷೆ

Update: 2018-07-22 04:27 GMT

ತಿರುವನಂತಪುರ, ಜು.22: "ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ" ಎಂದು ಬಣ್ಣಿಸಿರುವ ಕೇರಳ ಹೈಕೋರ್ಟ್, ಪರಸ್ಪರ ಪ್ರೇಮಿಸಿ ಓಡಿಹೋದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಮಾನತು ಮಾಡಿರುವ ಕಾಲೇಜು ಕ್ರಮವನ್ನು ರದ್ದುಪಡಿಸಿ ತೀರ್ಪು ನೀಡಿದೆ.

ತಮ್ಮನ್ನು ಕಾಲೇಜಿನಿಂದ ಅಮಾನತು ಮಾಡಿರುವ ಕಾಲೇಜಿನ ಕ್ರಮದ ವಿರುದ್ಧ ವರ್ಕಳ ಸಿಎಚ್‌ಎಂಎಂ ಕಾಲೇಜ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ಬಿಬಿಎ ವಿದ್ಯಾರ್ಥಿನಿ ಮಾಳವಿಕಾ ಬಾಬು (20) ಹಾಗೂ ಅದೇ ಕಾಲೇಜಿನ ವೈಶಾಖ್ (21) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕಾಲೇಜು ಅಧಿಕಾರಿಗಳು, ನಿಕಟ ವೈಯಕ್ತಿಕ ಸಂಬಂಧವನ್ನು ವೈಯಕ್ತಿಕ ಖಾಸಗಿ ವಿಚಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇದರಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಇವರ ಪ್ರೇಮ ಕಾಲೇಜು ತರಗತಿಗಳನ್ನು ನಡೆಸಲು ಅಡ್ಡಿಯಾಗಿದೆ ಎನ್ನುವುದನ್ನು ಸಮರ್ಥಿಸಲು ಯಾವುದೇ ಪುರಾವೆಗಳು ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರಿಂದ ಇದನ್ನು ಅಶಿಸ್ತು ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ.

 "ಪ್ರೇಮ ಎನ್ನುವುದು ಅವರ ವೈಯಕ್ತಿಕ ವಿಚಾರ ಹಾಗೂ ಅವರ ಸ್ವಾತಂತ್ರ್ಯ. ಈ ಪ್ರಕರಣದಲ್ಲಿ ಕಾಲೇಜು ಅಧಿಕಾರಿಗಳು ಮತ್ತು ಪೋಷಕರು ಈ ಸಂಬಂಧಕ್ಕೆ ಆಕ್ಷೇಪಿಸಿದ್ದರು. ಇದು ತಮ್ಮ ಪ್ರೇಮಕ್ಕೆ ತಡೆಯಾಗುತ್ತದೆ ಎಂಬ ಕಾರಣಕ್ಕೆ ಮಾಳವಿಕಾ ಹಾಗೂ ವೈಶಾಖ್ ಓಡಿಹೋಗಿದ್ದರು. ಮಾಳವಿಕಾ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಇವರನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿದ್ದರು. ಯುವತಿಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿಲ್ಲ ಎನ್ನುವುದು ಖಾತ್ರಿಯಾದ ಬಳಿಕ ನ್ಯಾಯಾಲಯ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಆಕೆಗಿದೆ ಎಂದು ತೀರ್ಪು ನೀಡಿತ್ತು. ಆದರೆ ಕಾಲೇಜು ಅಧಿಕಾರಿಗಳು ಇವರನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News