55 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ, ಶೌಚಾಲಯವಿಲ್ಲ, ಕುಡಿಯುವ ನೀರು ಕೂಡ ಇಲ್ಲ!

Update: 2018-07-22 06:13 GMT

ಫೈಝಾಬಾದ್(ಉತ್ತರಪ್ರದೇಶ), ಜು.22: ಕೇಂದ್ರದ ಎನ್‌ಡಿಎ ಸರಕಾರ ಉತ್ತರಪ್ರದೇಶದತ್ತ ಹೆಚ್ಚು ಗಮನ ನೀಡುತ್ತಿರುವ ಹೊರತಾಗಿಯೂ, ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಮೂರು ಬಾರಿ ಭೇಟಿ ನೀಡಿ, ಮೂಲಭೂತ ಸೌಕರ್ಯಕ್ಕಾಗಿ ಸಾವಿರಾರು ಕೋಟಿ ರೂ. ಯೋಜನೆಗಳನ್ನು ಘೋಷಿಸಿದ್ದರೂ ಫೈಝಾಬಾದ್‌ನ ಶಿಥಿಲಗೊಂಡಿರುವ ಶಾಲಾ ಕಟ್ಟಡ ತನ್ನದೇ ಕಥೆಯನ್ನು ಹೇಳುತ್ತಿದೆ. ಇಲ್ಲಿ ಸುಮಾರು 55 ವಿದ್ಯಾರ್ಥಿಗಳು ಓದುತ್ತಿದ್ದು, ಇವರಿಗೆ ಪಾಠ ಹೇಳಲು ಓರ್ವ ಶಿಕ್ಷಕರಿದ್ದಾರೆ. ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿದೆ.

‘‘ಒಟ್ಟು 55 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನಾನು ಒಂದೇ ಕೊಠಡಿಯಲ್ಲಿ ಇವರಿಗೆ ಪಾಠ ಮಾಡುತ್ತಿದ್ದೇನೆ. ಶಾಲೆಯ ಇತರ ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲ. ಶಾಲೆಯಲ್ಲಿ ಶೌಚಾಲಯಗಳಿಲ್ಲ, ಫ್ಯಾನ್ ಆಗಲಿ, ಶುದ್ಧ ಕುಡಿಯುವ ನೀರಾಗಲಿ ಇಲ್ಲ. ಶಾಲೆ ದನದ ಕೊಟ್ಟಿಗೆಯಂತಿದ್ದು ಶಾಲೆಗೆ ತಡೆಬೇಲಿಯಿಲ್ಲ’’ ಎಂದು ಪ್ರಾಥಮಿಕ ಶಾಲೆಯ ಶಿಕ್ಷಕ ಮುಕೇಶ್ ಕುಮಾರ್ ಯಾದವ್ ಹೇಳಿದ್ದಾರೆ.

ಯಾದವ್ ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಶಾಲೆಯ ಶೋಚನೀಯ ಸ್ಥಿತಿಯ ಬಗ್ಗೆ ಫೈಝಾಬಾದ್‌ನ ಹಲವು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಆದರೆ, ಯಾರೂ ಇತ್ತ ಮುಖ ಮಾಡಿಲ್ಲ. ಪ್ರಧಾನಿ ಮೋದಿ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಮೂಲಭೂತ ಯೋಜನೆಗಳನ್ನು ಘೋಷಿಸಿದ್ದರು. ಅವರ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News