ಸಿಖ್ಖರ ಕುರಿತು ಅಮೆರಿಕನ್ ವಿದ್ಯಾರ್ಥಿಗಳಿಗೆ ಕಲಿಸಲಿರುವ ನ್ಯೂಯಾರ್ಕ್ ಶಾಲೆಗಳು

Update: 2018-07-22 17:15 GMT

 ನ್ಯೂಯಾರ್ಕ್,ಜು.22: ಶೇ. 70 ಅಮೆರಿಕನ್ನರು ಸಿಖ್ ಧರ್ಮದ ಬಗ್ಗೆ ನಿರ್ಲಕ್ಷಧೋರಣೆ ಹೊಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕದ ನ್ಯೂಯಾರ್ಕ್‌ನ ಶಾಲೆಗಳು ಸಿಖ್ ಧರ್ಮದ ಮತ್ತು ಅದರ ಆಚರಣೆಗಳ ಕುರಿತು ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮುಂದಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯುನೈಟೆಡ್ ಸಿಖ್ಸ್ ಎಂಬ ಲಾಭರಹಿತ ಸಂಸ್ಥೆ ನ್ಯೂಯಾರ್ಕ್ ನಗರದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಸಿಖ್ ಧರ್ಮದ ಬಗ್ಗೆ ಶಿಕ್ಷಣ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಬಗ್ಗೆ ಮಾತುಕತೆ ನಡೆಸಿರುವ ಸಂಸ್ಥೆ ಮತ್ತು ಇಲಾಖೆಯ ಅಧಿಕಾರಿಗಳು ಐದನೇ ಮತ್ತು ಆರನೇ ತರಗತಿಯ ಪಠ್ಯಪುಸ್ತಕದಲ್ಲಿ ಸಿಖ್ ಧರ್ಮದ ಬಗ್ಗೆ ಪಾಠವನ್ನು ಸೇರಿಸಲು ನಿರ್ಧರಿಸಿವೆ. ತನ್ನ ಸಂಸ್ಥೆ ಸಮೀಕ್ಷೆ ಮಾಡಿದ ಶೇ. 70ರಷ್ಟು ಅಮೆರಿಕನ್ನರಿಗೆ ಸಿಖ್ ಧರ್ಮದ ಬಗ್ಗೆ ಮಾಹಿತಿಯಿರಲಿಲ್ಲ. ಅಮೆರಿಕನ್ ವಿದ್ಯಾರ್ಥಿಗಳಿಗೆ ತಮ್ಮ ಸಿಖ್ ಸಹಪಾಠಿಗಳ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಅವರನ್ನು ರೇಗಿಸುವ ಮತ್ತು ರ್ಯಾಗಿಂಗ್ ಮಾಡುವುದು ನಡೆಯುತ್ತಿತ್ತು ಎಂದು ಯುನೈಟೆಡ್ ಸಿಖ್ಸ್‌ನ ಹಿರಿಯ ನೀತಿ ಸಲಹೆಗಾರ ಪ್ರೀತ್ಪಾಲ್ ಸಿಂಗ್ ತಿಳಿಸಿದ್ದಾರೆ.

 ಅವರಿಗೆ ನಾವು ಯಾರು, ನಮ್ಮ ಮೂಲ ಯಾವುದು ಎಂಬುದು ತಿಳಿದಿಲ್ಲ. ನಾವು ಯಾವ ದೇಶದಿಂದ ಬಂದಿದ್ದೇವೆ ಎಂಬುವುದೂ ತಿಳಿದಿಲ್ಲ. ನಾವು ಭಾರತೀಯರು ಎಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ಸಿಖ್ ಕುರಿತ ಪಠ್ಯದ ಬಗ್ಗೆ ಅಧಿಕೃತ ಘೋಷಣೆಯನ್ನು ಶುಕ್ರವಾರ ಮಾಡಲಾದರೂ ನಗರದ ಕೆಲವು ಶಾಲೆಗಳಲ್ಲಿ 2016ರ ಸೆಪ್ಟೆಂಬರ್‌ನಿಂದಲೂ ಸಿಖ್ ಧರ್ಮದ ಪಾಠವನ್ನು ಆರಂಭಿಸಲಾಗಿದೆ. ಈ ಶೈಕ್ಷಣಿಕ ವರ್ಷದ ಕೊನೆಯಿಂದ ಶಾಲೆಗಳ ಐದನೇ ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಖ್ ಧರ್ಮದ ಕುರಿತ ಪಾಠ ಆರಂಭಿಸಲಾಗುವುದು ಎಂದು ನ್ಯೂಯಾರ್ಕ್ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News