ಮಕ್ಕಳ ಕಳ್ಳತನ ವದಂತಿಗೆ ಯುವತಿ ಬಲಿ !

Update: 2018-07-23 03:51 GMT

ಭೋಪಾಲ್, ಜು. 23: ಮಕ್ಕಳ ಕಳ್ಳತನ ಬಗ್ಗೆ ವಾಟ್ಸ್ಆ್ಯಪ್‌ನಲ್ಲಿ ಹರಿದಾಡಿದ ವದಂತಿಗೆ ಮತ್ತೊಂದು ಜೀವ ಬಲಿ ಪಡೆದಿದೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಮೊರ್ವಾ ಪ್ರದೇಶದಲ್ಲಿ ಉದ್ರಿಕ್ತರ ಗುಂಪು ಯುವತಿಯೊಬ್ಬಳನ್ನು ಹತ್ಯೆ ಮಾಡಿದೆ. ಅಂಗಾಂಗ ಮಾರಾಟ ಜಾಲ ಹಾಗೂ ಮಕ್ಕಳ ಮಾರಾಟ ಜಾಲದ ಬಗೆಗಿನ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಕ್ರಮ ಕೈಗೊಂಡು ಕಳೆದ ಒಂದು ತಿಂಗಳಲ್ಲಿ ಇಂಥ ನಾಲ್ಕು ಹತ್ಯೆಗಳನ್ನು ತಡೆಯಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಜೂನ್ 29ರಂದು ಮಕ್ಕಳ ಕಳ್ಳರು ಎಂಬ ಶಂಕೆಯಿಂದ ಮಹಿಳಾ ಅರಣ್ಯಾಧಿಕಾರಿ ಮತ್ತು ಅರಣ್ಯ ರಕ್ಷಕನೊಬ್ಬನನ್ನು ಉದ್ರಿಕ್ತರ ಗುಂಪು ಥಳಿಸಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಅವರ ಜೀವ ಉಳಿದಿತ್ತು. ಆದರೆ ಈ ಬಾರಿ ಪೊಲೀಸರು ಆಗಮಿಸುವ ವೇಳೆ ಯುವತಿಯನ್ನು ಹೊಡೆದು ಸಾಯಿಸಲಾಗಿತ್ತು. ಮೃತ ಯುವತಿ 25 ವರ್ಷದವಳಾಗಿದ್ದು, ಗುರುತು ಪತ್ತೆಯಾಗಬೇಕಿದೆ ಎಂದು ಎಸ್ಪಿ ರಿಯಾಝ್ ಇಕ್ಬಾಲ್ ಹೇಳಿದ್ದಾರೆ.

"ವದಂತಿಯ ಹಿನ್ನೆಲೆಯಲ್ಲೇ ಈ ಹತ್ಯೆ ನಡೆದಿದೆ. ಮಹಿಳೆ ಮಕ್ಕಳ ಕಳ್ಳಿ ಎಂಬ ಅನುಮಾನದಿಂದ ಸ್ಥಳೀಯರು ಪ್ರಶ್ನಿಸಲಾರಂಭಿಸಿದ್ದಾರೆ. ಬಳಿಕ ಆಕೆಯನ್ನು ಹೊಡೆದು ಸಾಯಿಸಿದ್ದಾರೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭೋಸ್ ಗ್ರಾಮದ ಅರಣ್ಯ ಇಲಾಖೆ ನರ್ಸರಿ ಬಳಿ ಆಕೆಯ ಮೃತದೇಹ ಪತ್ತೆಯಾಗಿದೆ. ಹತ್ತಕ್ಕೂ ಅಧಿಕ ಮಂದಿ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರಿಗಾಗಿ ಶೋಧ ನಡೆದಿದೆ. ಮಹಿಳೆಯ ಗುರುತು ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News