ಇದು 'ಮೋದಿಯ ಕ್ರೂರ ನವ ಭಾರತ' ಎಂದ ರಾಹುಲ್ ಗಾಂಧಿ

Update: 2018-07-23 10:06 GMT

ಹೊಸದಿಲ್ಲಿ, ಜು.23: ಗೋರಕ್ಷಕರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅಕ್ಬರ್ ಖಾನ್ ರನ್ನು ಕೇವಲ ಆರು ಕಿ.ಮೀ. ದೂರದಲ್ಲಿದ್ದ ಆಸ್ಪತ್ರೆಗೆ ಸೇರಿಸಲು ರಾಜಸ್ಥಾನ ಪೊಲೀಸರು 3 ಗಂಟೆಗಳಷ್ಟು ತಡಮಾಡಿದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ಮೋದಿಯ 'ಕ್ರೂರ ನವ ಭಾರತ'ವನ್ನೇ ರಾಜಸ್ಥಾನ ಪೊಲೀಸರ ಕಠೋರತೆಗೆ ದೂರಬೇಕಾಗಿದೆ'' ಎಂದಿದ್ದಾರೆ.

``ಮೋದಿಯ ಈ ನವ ಭಾರತದಲ್ಲಿ ಮಾನವೀಯತೆಯ ಬದಲು ದ್ವೇಷವಿದೆ ಹಾಗೂ ಜನರನ್ನು ಅಪ್ಪಚ್ಚಿಗೊಳಿಸಿ ಸಾಯಲು ಬಿಡಲಾಗುತ್ತದೆ'' ಎಂದು ರಾಹುಲ್ ಹೇಳಿದ್ದಾರೆ. ಗುಂಪು ಥಳಿತ ಸಂತ್ರಸ್ತನನ್ನು ಹತ್ತಿರದ ರಾಮಘರ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಸೇರಿಸಲು ಮೂರು ಗಂಟೆ ಬೇಕಾಯಿತು ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಸಚಿವ ಗುಲಾಬ್ ಚಂದ್ ಕಟಾರಿಯಾ ಈ ಮಾಹಿತಿಯನ್ನು ದೃಢೀಕರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಘಟನೆ ನಡೆದ ನಂತರ ಅಕ್ಬರ್ ಖಾನ್ ರನ್ನು ಆಸ್ಪತ್ರೆಗೆ ಸಾಗಿಸುವುದಕ್ಕಿಂತ ಹೆಚ್ಚಾಗಿ ಪೊಲೀಸರಿಗೆ ವಶಪಡಿಸಿಕೊಳ್ಳಲಾದ ಎರಡು ದನಗಳ ರಕ್ಷಣೆಯೇ ಹೆಚ್ಚಾಗಿತ್ತೆನ್ನಲಾಗಿದೆ. ಸಂತ್ರಸ್ತನನ್ನು ಆಸ್ಪತ್ರೆಗೆ ಸೇರಿಸುವ ಮುಂಚೆಯೇ ಹತ್ತು ಕಿಮೀ ದೂರದಲ್ಲಿದ್ದ ಗೋಶಾಲೆಗೆ ಈ ದನಗಳನ್ನು ಸಾಗಿಸಲಾಗಿತ್ತು.

ರಾಮಘರ್ ಸಮುದಾಯ ಆರೋಗ್ಯ ಕೇಂದ್ರದ ರಿಜಿಸ್ಟರ್ ನಲ್ಲಿರುವ ಮಾಹಿತಿಯಂತೆ ಸಂತ್ರಸ್ತನನ್ನು 4 ಗಂಟೆಗೆ ಅಲ್ಲಿಗೆ ತರಲಾಗಿತ್ತು. ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿಯನ್ನು ಗೋರಕ್ಷಕನೊಬ್ಬ ಅಪರಾಹ್ನ  12.41ಕ್ಕೆ ನೀಡಿದ್ದನೆನ್ನಲಾಗಿದ್ದು ಪೊಲೀಸರು ಸ್ಥಳಕ್ಕೆ 15ರಿಂದ 20 ನಿಮಿಷಗಳೊಳಗಾಗಿ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News