ಮಕ್ಕಳ ಕಳ್ಳಿಯರೆಂಬ ಶಂಕೆ: ಮಹಿಳೆಯರನ್ನು ವಿವಸ್ತ್ರಗೊಳಿಸಿದ ಗುಂಪು

Update: 2018-07-24 03:27 GMT

ಕೊಲ್ಕತ್ತಾ, ಜು. 24: ಮಕ್ಕಳ ಕಳ್ಳಿಯರೆಂಬ ಶಂಕೆಯಿಂದ ನಾಲ್ವರು ಮಹಿಳೆಯರಿಗೆ ಥಳಿಸಿ, ಇಬ್ಬರನ್ನು ಅರೆನಗ್ನಗೊಳಿಸಿದ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

"ಉದ್ರಿಕ್ತರ ಗುಂಪಿನಿಂದ ಮಹಿಳೆಯರನ್ನು ರಕ್ಷಿಸಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ" ಎಂದು ಧೂಪಗುರಿ ಠಾಣೆಯ ಇನ್‌ಸ್ಪೆಕ್ಟರ್ ಸಂಜಯ್ ದತ್ತ ಹೇಳಿದ್ದಾರೆ.

ಮಕ್ಕಳ ಕಳ್ಳತನದ ಶಂಕೆಯಿಂದ ದೇಶಾದ್ಯಂತ ನಡೆಯುತ್ತಿರುವ ಹಲ್ಲೆ ಹಾಗೂ ಹತ್ಯಾ ಸರಣಿಯ ಮುಂದುವರಿದ ಭಾಗ ಇದಾಗಿದೆ. ಹಲ್ಲೆಗೊಳಗಾದ ಮೂವರು ಮಹಿಳೆಯರು ಧೂಪಗುರಿ ಪಟ್ಟಣದವರಾಗಿದ್ದು, ಒಬ್ಬ ಮಹಿಳೆ ಸಿಲಿಗುರಿ ಪಟ್ಟಣದವರು. ಧೂಪಗುರಿಯಿಂದ ಐದು ಕಿಲೋಮೀಟರ್ ದೂರದ ದೌಕಿಮರಿ ಗ್ರಾಮದ ಸಂತೆಗೆ ನಾಲ್ವರು ಮಹಿಳೆಯರು ತೆರಳಿದ್ದರು.

ಇಬ್ಬರು ಮೈಕ್ರೊ ಫೈನಾನ್ಸ್ ಕಂಪನಿ ಕಚೇರಿಗೆ ಹೋಗಿದ್ದರೆ, ಮತ್ತೊಬ್ಬಾಕೆ ಸಂಬಂಧಿಕರ ಮನೆಗೆ ಹಾಗೂ ಇನ್ನೊಬ್ಬರು ಬಟ್ಟೆ ಮಾರಾಟಕ್ಕೆ ತೆರಳಿದ್ದರು ಎನ್ನಲಾಗಿದೆ. ಕೆಲ ಮಂದಿ ಈ ಮಹಿಳೆಯರನ್ನು ಮಕ್ಕಳ ಕಳ್ಳಿಯರೆಂದು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದರು. ತಕ್ಷಣ ಜನ ಗುಂಪು ಸೇರಿ ಮಹಿಳೆಯರನ್ನು ಚೆನ್ನಾಗಿ ಥಳಿಸಿತು. ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಲಾಯಿತು. ಬಳಿಕ ಮಹಿಳೆಯರನ್ನು ಸ್ಥಳೀಯ ಕ್ಲಬ್‌ಗೆ ಒಯ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿಚಾರ್ಜ್ ಮಾಡಿ ಗುಂಪು ಚದುರಿಸಿ, ಮಹಿಳೆಯರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News