ಗರಿಷ್ಠ ಸ್ಥಾನ ಜಯಿಸಿದ ಮಿತ್ರ ಪಕ್ಷಗಳ ನಾಯಕರಿಗೆ ಪ್ರಧಾನಿ ಪಟ್ಟ.. ಕಾಂಗ್ರೆಸ್ ನ ಹೊಸ ಅಸ್ತ್ರ !

Update: 2018-07-25 06:27 GMT

ಹೊಸದಿಲ್ಲಿ, ಜು.25: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೈಯಿಂದ ಕೇಂದ್ರದಲ್ಲಿ  ಅಧಿಕಾರವನ್ನು ಕಿತ್ತುಕೊಳ್ಳುವ ಸಂಕಲ್ಪ ಮಾಡಿರುವ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಮಿತ್ರಪಕ್ಷಗಳ ನಾಯಕರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವ ಚಿಂತನೆ ನಡೆಸಿದೆ.

ಕಾಂಗ್ರೆಸ್ ಪಕ್ಷ  ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಮರುದಿನವೇ ತನ್ನ ನಿಲುವನ್ನು ಬದಲಾಯಿಸಿದೆ. ಯುಎಪಿ ಮಿತ್ರ ಪಕ್ಷಗಳ ನಾಯಕರಿಗೆ ಪ್ರಧಾನಿ ಹುದ್ದೆಗೇರುವ ಮುಕ್ತ ಅವಕಾಶದ ಬಾಗಿಲನ್ನು ತೆರೆದುಕೊಂಡಿದೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ಹಿನ್ನೆಲೆ  ಹೊಂದಿರದ ಯಾರಾದರೂ  ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೆ ತನ್ನ  ಅಭ್ಯಂತರವಿಲ್ಲ ಕಾಂಗ್ರೆಸ್ ಮಂಗಳವಾರ ಹೇಳಿದೆ.

ಕಾಂಗ್ರೆಸ್ ನ ಈ ನಿರ್ಧಾರದಿಂದಾಗಿ ಟಿಎಂಸಿ, ಬಿಎಸ್ಪಿ, ಎಸ್ಪಿ ಮತ್ತು ಆರ್ ಜೆಡಿಗೆ ಪ್ರಧಾನಿ ರೇಸ್ ಗೆ ತಯಾರಾಗಲು ಅವಕಾಶ ಸಿಕ್ಕಿದೆ. ಲಭ್ಯ ಮಾಹಿತಿಯ ಪ್ರಕಾರ ಕಾಂಗ್ರೆಸ್ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಬಿಎಸ್ಪಿಯ ಮಾಯಾವತಿ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಗಳನ್ನಾಗಿ ಬಿಂಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್ ಡಿಎ ವಿರುದ್ಧ ಸೆಣಸಾಡಿ ಅಧಿಕಾರವನ್ನು ಕಿತ್ತುಕೊಳ್ಳಲು  ಈಗಿನ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ಸಾಧ್ಯವಿಲ್ಲ ಎಂಬ ವಿಚಾರವನ್ನು ಕಾಂಗ್ರೆಸ್ ನ ನಾಯಕರು ಅರಿತುಕೊಂಡಿದ್ದಾರೆ. ಕಾಂಗ್ರೆಸ್ ನ ಹೊಸ ಅಸ್ತ್ರ ಎಷ್ಟರ ಮಟ್ಟಿಗೆ ಫಲ ನೀಡಿತೇ ? ಎನ್ನುದನ್ನು ಕಾದು ನೋಡಬೇಕಾಗಿದೆ.

ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಇವರಲ್ಲಿ ಯಾರು ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೋ ಅವರಿಗೆ ಪ್ರಧಾನಿ ಪಟ್ಟ ಒಲಿಯಲಿದೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಆಯ್ಕೆ ಮಾಡಿದ್ದರೂ, ಅವರಿಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಬಹುಮತ ಗಳಿಸಿದರೆ ಮಾತ್ರ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟರ ತನಕ ಅವರು ಕಾಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.


 

                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News