ಉತ್ತರ ಪ್ರದೇಶದಲ್ಲಿ ಸತ್ತ ಎಮ್ಮೆ ಸಾಗಿಸುತ್ತಿದ್ದ ನಾಲ್ವರಿಗೆ ಗುಂಪು ಥಳಿತ

Update: 2018-07-25 06:59 GMT

ಲಕ್ನೋ, ಜು. 25: ರಾಜಸ್ಥಾನದ ಆಳ್ವಾರ್ ಎಂಬಲ್ಲಿ ಗೋರಕ್ಷಕರಿಂದ ಹಲ್ಲೆಗೀಡಾಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆಯ ಬೆನ್ನಲ್ಲೇ ಸತ್ತ ಎಮ್ಮೆಯೊಂದನ್ನು ಸಾಗಿಸುತ್ತಿದ್ದ ನಾಲ್ಕು ಮಂದಿಯ ಮೇಲೆ ಉತ್ತರ ಪ್ರದೇಶದ ಹಥ್ರಸ್ ಜಿಲ್ಲೆಯಲ್ಲಿ ಗುಂಪೊಂದು ಇಂದು ಮುಂಜಾನೆ ಹಲ್ಲೆ ನಡೆಸಿದೆ.

ಎಮ್ಮೆಗೆ ವಿಷವಿಕ್ಕಿ ಅದು ಸತ್ತ ಮೇಲೆ ಅದನ್ನು ಸಾಗಾಟ ನಡೆಸಲಾಗಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಥಳಿತಕ್ಕೊಳಗಾದವರಲ್ಲಿ ಇಬ್ಬರು ಹಿಂದೂಗಳಾಗಿದ್ದರೆ ಇಬ್ಬರು ಮುಸ್ಲಿಮರಾಗಿದ್ದರು.

ಈ ಘಟನೆಯ ವೀಡಿಯೊವನ್ನು ಸೆರೆ ಹಿಡಿಯಲಾಗಿದ್ದು, ಅದರಲ್ಲಿ ನಾಲ್ಕು ಮಂದಿಯೂ ನೆಲದಲ್ಲಿದ್ದು ಗ್ರಾಮಸ್ಥರು ಅವರ ಸುತ್ತಲೂ ನೆರೆದಿದ್ದರು. ಅವರಲ್ಲೊಬ್ಬ ಗ್ರಾಮಸ್ಥರಲ್ಲಿ ತಾವು ಗೋಕಳ್ಳರಲ್ಲ, ತಮ್ಮನ್ನು ಬಿಟ್ಟುಬಿಡುವಂತೆ ಅಂಗಲಾಚುತ್ತಿರುವುದು ಕಾಣಿಸುತ್ತದೆ. ಸತ್ತ ಎಮ್ಮೆಯನ್ನು ಕೊಂಡು ಹೋಗುವಂತೆ ಗುತ್ತಿಗೆದಾರನೊಬ್ಬ ಹೇಳಿದ್ದರಿಂದ ತಾನು ಗ್ರಾಮಕ್ಕೆ ಹೋಗಿದ್ದೆ ಹಾಗೂ ಗುತ್ತಿಗೆದಾರ ಹೇಳಿದ ಕಡೆಗೆ ಅದನ್ನು ಕೊಂಡೊಯ್ಯುತ್ತಿದ್ದೆ ಎಂದು ಆತ ಹೇಳಿದರೂ ಸೇರಿದ್ದ ಗುಂಪು ಆತನ ಮಾತುಗಳನ್ನು ಕೇಳಲು ಸಿದ್ಧವಿರಲಿಲ್ಲ.

ಗುಂಪಿನಲ್ಲಿದ್ದ ಜನರು ಪೊಲೀಸರನ್ನುದ್ದೇಶಿಸಿ ಏರಿದ ದನಿಯಲ್ಲಿ ಮಾತನಾಡುತ್ತಿರುವುದೂ ವೀಡಿಯೊದಲ್ಲಿ ಕಾಣಿಸುತ್ತದೆ. ಕೊನೆಗೂ ಪೊಲೀಸರು ನಾಲ್ಕು ಮಂದಿಯನ್ನು ಜನರ ಕೈಯ್ಯಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸತ್ತ ಎಮ್ಮೆಯ ಮಾಲಕನನ್ನು ಪೊಲೀಸರು ಠಾಣೆಗೆ ಬರ ಹೇಳಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News