ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಜಾರಿಗೆ ಆಗ್ರಹ

Update: 2018-07-25 13:28 GMT

ಬೆಂಗಳೂರು, ಜು.25: ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ರೂಪಿಸಬೇಕೆಂಬ ಕೇಂದ್ರ ಸರಕಾರದ ಶಿಫಾರಸ್ಸನ್ನು ರಾಜ್ಯದಲ್ಲಿ ಕೂಡಲೇ ಜಾರಿ ಮಾಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಕಾರ್ಡಿಯೋಲಜಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಕಾರ್ಡಿಯೋಲಜಿಸ್ಟ್ ಅಸೋಸಿಯೇಷನ್ ಸದಸ್ಯೆ ವಿಜಯಲಕ್ಷ್ಮಿ ಬಾಳೆಕುಂದ್ರಿ, ಮಾದಕ ಪದಾರ್ಥಗಳ ಅಕ್ರಮ ಪೂರೈಕೆ, ಮಾರಾಟ, ಸೇವನೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಮಾದಕ ಜಾಲದ ಪ್ರಮುಖವಾಗಿ ಗುರಿಯಾಗಿಸಿಕೊಂಡಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟ ಮಿತಿ ಮೀರಿ ನಡೆಯುತ್ತಿದೆ. ಸುಲಭವಾಗಿ ಎಲ್ಲೆಂದರಲ್ಲಿ ದೊರಕುತ್ತಿರುವುದರಿಂದ ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಳೆದ ವರ್ಷ ಎಲ್ಲ ರಾಜ್ಯಗಳಿಗೂ ತಂಬಾಕು ಪದಾರ್ಥಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆಯನ್ನು ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅದರ ಪ್ರಕಾರ ಈಗಾಗಲೇ ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 6 ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಸರಕಾರವು ವಿದ್ಯಾರ್ಥಿ-ಯುವಜನರನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಹಿತದೃಷ್ಟಿಯಿಂದ ಪ್ರತ್ಯೇಕ ಪರವಾನಿಗೆಯನ್ನು ಜಾರಿ ಮಾಡಬೇಕು. ಅಲ್ಲದೆ, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೆಡಿಕಲ್ ಅಸೋಸಿಯೇಷನ್‌ನ ಡಾ.ಉಮಾ ಶೇಷಗಿರಿ ಮಾತನಾಡಿ, ತಂಬಾಕು ಪದಾರ್ಥಗಳಲ್ಲಿರುವ ನಿಕೋಟಿನ್ ಹಾಗೂ ಮತ್ತಿತರೆ ಮತ್ತು ನೀಡುವ ಪದಾರ್ಥಗಳಿಂದ ಹೆಚ್ಚಿನ ಜನರು ಅದನ್ನು ಸೇವನೆ ಮಾಡುತ್ತಿದ್ದಾರೆ. ಬಸ್ ನಿಲ್ದಾಣ, ಕಿರಾಣಿ ಅಂಗಡಿಗಳು ಸೇರಿದಂತೆ ಸಾರ್ವಜನಿಕವಾಗಿ ಮಾರಾಟವಾಗುತ್ತಿದೆ. ಯಾವುದೇ ನಿಯಂತ್ರಣಕ್ಕೆ ಒಳಪಡದೇ ಸಿಗುವ ತಂಬಾಕು ಸೇವನೆಯಿಂದಾಗಿ ಯುವಜನತೆ ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News