ಗುಂಪು ಹಿಂಸಾಚಾರ, ಹತ್ಯೆ: ಕಾನೂನು ರಚನೆಗೆ ಅಡ್ಡಿಯೇನು?

Update: 2018-07-26 04:37 GMT

ದೇಶಾದ್ಯಂತ ಹೆಚ್ಚುತ್ತಿರುವ ಗುಂಪು ಹಿಂಸಾಚಾರ ಮತ್ತು ಹತ್ಯೆಯ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ‘‘ಅಗತ್ಯವಿದ್ದರೆ ಕಾನೂನು ರಚನೆ’’ ಎಂದು ಹೇಳಿದ್ದಾರೆ. ಅಂದರೆ, ದೇಶಾದ್ಯಂತ ಗುಂಪು ಹತ್ಯೆಗಳನ್ನು ತಡೆಯುವ ಅಗತ್ಯ ಇದೆ ಎಂದು ಸರಕಾರಕ್ಕೆ ಮನವರಿಕೆಯಾಗಿಲ್ಲ ಎನ್ನುವುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಅಂತಹದೊಂದು ಕಾನೂನನ್ನು ರಚಿಸಲು ದೇಶದ ಅಗತ್ಯಕ್ಕಿಂತಲೂ ಬಿಜೆಪಿಯ ಅಗತ್ಯ ಇಲ್ಲಿ ಮುಖ್ಯವಾಗಿದೆ. ಈ ದೇಶದ ಗೃಹ ಸಚಿವರು ಇಂತಹದೊಂದು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲೇ, ಅತ್ತ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ‘‘ಗೋಮಾಂಸ ತಿನ್ನುವುದನ್ನು ನಿಲ್ಲಿಸಿದರೆ ಗುಂಪು ಹತ್ಯೆ ನಿಲ್ಲಬಹುದು’’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬ ಬಿಜೆಪಿ ಶಾಸಕ ‘‘ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸದ ಹೊರತು ಗುಂಪು ಹಲ್ಲೆ ನಿಲ್ಲದು’’ ಎಂದು ಹೇಳಿದ್ದಾರೆ. ಆರೆಸ್ಸೆಸ್ ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿರುವುದು ಗುಟ್ಟಾಗಿರುವ ವಿಷಯವೇನೂ ಅಲ್ಲ. ಒಂದೆಡೆ ಆರೆಸ್ಸೆಸ್ ‘‘ಯಾವುದೇ ಕಾನೂನಿನಿಂದ ಗುಂಪು ಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ’’ ಎನ್ನುವುದನ್ನು ಹೇಳುತ್ತಿದೆ. ಗುಂಪು ಹತ್ಯೆ ನಿಲ್ಲಬೇಕಾದರೆ ಈ ದೇಶದ ಬಹುಸಂಖ್ಯಾತರು ಗೋಮಾಂಸವನ್ನು ತಿನ್ನುವುದನ್ನು ನಿಲ್ಲಿಸುವುದಷ್ಟೇ ಪರಿಹಾರ ಎಂದು ಅವರು ಹೇಳುತ್ತಿರುವಾಗ, ಕೇಂದ್ರ ಸರಕಾರಕ್ಕೆ ಕಾನೂನು ರಚನೆ ಅಗತ್ಯವಾಗಿ ಕಂಡು ಬರಲು ಸಾಧ್ಯವೇ ಇಲ್ಲ.

ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹಿನ್ನೆಲೆ ಏನು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತಿದೆ. ಸ್ಫೋಟ ಪ್ರಕರಣವೊಂದರಲ್ಲಿ ಈತನ ಪಾತ್ರವನ್ನು ಹೇಮಂತ್ ಕರ್ಕರೆ ತನಿಖಾ ತಂಡ ಗುರುತಿಸಿತ್ತು. ಉಗ್ರವಾದಿ ಸಂಘಟನೆಗಳಿಗೂ ಆರೆಸ್ಸೆಸ್‌ಗೂ ನಂಟಿರುವುದನ್ನು ಕರ್ಕರೆ ತಂಡ ತನಿಖೆ ಮಾಡುತ್ತಿರುವಾಗಲೇ ಇಡೀ ತಂಡ ನಿಗೂಢವಾಗಿ ಹತ್ಯೆಗೀಡಾಯಿತು. ಇಂದ್ರೇಶ್ ಹೆಸರನ್ನು ಆರೋಪ ಪಟ್ಟಿಯಿಂದ ಕೈ ಬಿಡಲು ರಾಜಕಾರಣಿಗಳ ಹಸ್ತಕ್ಷೇಪ ನಡೆದಿದೆ ಎನ್ನುವ ಆರೋಪ ಇಂದಿಗೂ ಜೀವಂತವಿದೆ. ಇಂತಹ ಮನುಷ್ಯ ಈ ದೇಶದ ಬಹುಜನರು ಸೇವಿಸುವ ಆಹಾರವನ್ನೇ ಪ್ರಶ್ನಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇಂದು ಕೇರಳ, ಗೋವಾ ಮತ್ತು ಈಶಾನ್ಯ ಭಾರತದಲ್ಲಿ ಇದೇ ಬಿಜೆಪಿ ಸರಕಾರ ಗೋಮಾಂಸಾಹಾರವನ್ನು ಪ್ರೋತ್ಸಾಹಿಸುತ್ತಿದೆ. ‘ಗೋ ಮಾಂಸವನ್ನು ತಡೆಯುವ ಪ್ರಶ್ನೆಯೇ ಇಲ್ಲ’ ಎಂದು ಪದೇ ಪದೇ ಹೇಳುತ್ತಾ ಬಂದಿದೆ. ಯಾಕೆಂದರೆ, ಈ ದೇಶದಲ್ಲಿ ಮುಸ್ಲಿಮರಷ್ಟೇ ಗೋಮಾಂಸವನ್ನು ಸೇವಿಸುವವರಲ್ಲ. ಕೇರಳದಲ್ಲಿ ಗೋಮಾಂಸ, ಕೋಳಿ-ಆಡಿನಷ್ಟೇ ಜನಪ್ರಿಯ. ಈಶಾನ್ಯ ಭಾರತದಲ್ಲೂ ಗೋಮಾಂಸಾಹಾರ ತೀರಾ ಸಹಜ.ಕಡಿಮೆ ದರದಲ್ಲಿ ಹೆಚ್ಚು ಪೌಷ್ಟಿಕ ಆಹಾರ ಇದಾಗಿರುವುದರಿಂದ, ಇದಕ್ಕೆ ಸದಾ ಬೇಡಿಕೆ ಹೆಚ್ಚು. ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳೂ ಸೇರಿದಂತೆ ಶೇ. 75ರಷ್ಟು ಜನರು ಸೇವಿಸುವ ಪೌಷ್ಟಿಕ ಆಹಾರವೊಂದನ್ನು ಸೇವಿಸುವ ಕಾರಣಕ್ಕಾಗಿಯೇ, ಈ ದೇಶದಲ್ಲಿ ಗುಂಪು ಹತ್ಯೆಯನ್ನು ಆರೆಸ್ಸೆಸ್ ನಡೆಸುತ್ತಿದೆ ಎನ್ನುವುದು ಇಂದ್ರೇಶ್ ಕುಮಾರ್ ಹೇಳಿಕೆಯಿಂದ ಬಹಿರಂಗವಾಗಿದೆ. ಅಂದರೆ, ಒಂದು ನಿರ್ದಿಷ್ಟ ಹಿತಾಸಕ್ತಿ ಗುಂಪು ಹತ್ಯೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರಾಯೋಜಿಸುತ್ತಿದೆ. ಆ ಹಿತಾಸಕ್ತಿ ಯಾವುದು ಎನ್ನುವುದು ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ತಿಳಿಯದ ವಿಷಯವೇನೂ ಅಲ್ಲ. ಗುಂಪು ಹತ್ಯೆಗೆ ಆರೆಸ್ಸೆಸ್ ಮಾತ್ರವಲ್ಲ, ಸರಕಾರದೊಳಗಿರುವ ಬಿಜೆಪಿ ನಾಯಕರೇ ಬಹಿರಂಗವಾಗಿ ಬೆಂಬಲ ಕೊಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಒಂದು ವೇಳೆ ಕೇಂದ್ರ ಸರಕಾರ ಕಾನೂನು ರಚನೆ ಮಾಡಿದ್ದೇ ಆದರೆ ಅದರಿಂದ ಶಿಕ್ಷೆಗೊಳಪಡುವವರು ಸಂಘಪರಿವಾರದ ಕಾರ್ಯಕರ್ತರೇ ಆಗಿರುತ್ತಾರೆ ಎನ್ನುವುದೂ ಬಿಜೆಪಿಗೆ ಗೊತ್ತಿದೆ. ಈ ದುಷ್ಕರ್ಮಿಗಳೆಲ್ಲ ಜೈಲಲ್ಲಿ ಮುದ್ದೆ ಮುರಿಯುತ್ತಾ ಇದ್ದರೆ, ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸುವವರು ಯಾರು? ಸಂಘಪರಿವಾರದ ಜನರನ್ನು ಈ ಕಾನೂನು ನಿಯಂತ್ರಿಸ ತೊಡಗಿದರೆ ಅವರೆಲ್ಲ ನಿರುದ್ಯೋಗಿಗಳಾಗಬೇಕಾಗುತ್ತದೆ. ಆಗ ಅವರು ಸರಕಾರವನ್ನೇ ಪ್ರಶ್ನಿಸಲಾರಂಭಿಸಬಹುದು. ಆದುದರಿಂದ ಗುಂಪು ಹಿಂಸಾಚಾರದ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಗೆ ಕಾಟಾಚಾರಕ್ಕಷ್ಟೇ ಸರಕಾರ ಪ್ರತಿಕ್ರಿಯಿಸಿದೆ. ಯೋಗಿ ಆದಿತ್ಯನಾಥ್‌ನಂತಹ ರಾಜಕೀಯ ನಾಯಕರು ಹುಟ್ಟಿಕೊಂಡದ್ದೇ ಇಂತಹ ಗುಂಪು ಹಿಂಸಾಚಾರ, ಉದ್ವಿಗ್ನಕಾರಿ ಭಾಷಣಗಳ ಮೂಲಕ. ಉಳಿದಂತೆ ಒಂದು ರಾಜ್ಯವನ್ನು ಆಳುವ ಯಾವ ಯೋಗ್ಯತೆಯೂ ಇವರಿಗಿಲ್ಲ. ಗುಂಪು ಹತ್ಯೆಗಳ ಮೂಲಕ ಹುಟ್ಟಿಕೊಂಡ ನಾಯಕರು, ಗುಂಪು ಹತ್ಯೆಯ ವಿರುದ್ಧ ಕಾನೂನು ರಚನೆ ಮಾಡುತ್ತಾರೆ ಎನ್ನುವುದೇ ಅತ್ಯಂತ ಹಾಸ್ಯಾಸ್ಪದ. ಅಗತ್ಯ ಬಿದ್ದರೆ ಕಾನೂನು ರಚನೆ ಎನ್ನುತ್ತಿರುವ ಗೃಹ ಸಚಿವರಿಗೆ, ಅಗತ್ಯವಿದೆ ಎಂದು ಮನವರಿಕೆ ಮಾಡಲು ದೇಶದಲ್ಲಿ ಇನ್ನೇನು ಸಂಭವಿಸಬೇಕು? ಗುಂಪು ಹತ್ಯೆ ‘ಗೋಕಳ್ಳತನ’ ನೆಪದಿಂದ ಇದೀಗ ‘ಮಕ್ಕಳ ಕಳ್ಳತನ’ಕ್ಕೆ ವಿಸ್ತರಿಸಿದೆ. ಮಧ್ಯ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯನ್ನೇ ಕ್ರಿಮಿನಲ್ ತಂಡ ಥಳಿಸಿ ಕೊಂದಿದೆ. ಮುಂದೊಂದು ದಿನ, ಗುಂಪು ಹತ್ಯೆಯ ಪ್ರಕರಣದಲ್ಲಿ ಆರೋಪಿಗಳಾದವರನ್ನು ಬಂಧಿಸಲು ಹೊರಟ ಪೊಲೀಸರನ್ನೇ ಕೊಂದು ಹಾಕುವ ಘಟನೆಗಳು ಸಂಭವಿಸಬಹುದು. ಅಷ್ಟೇ ಅಲ್ಲ, ಅದನ್ನು ಪ್ರಶ್ನಿಸುವ ರಾಜಕೀಯ ನಾಯಕರನ್ನು ಗುಂಪುಗಳು ಸೇರಿ ಕೊಂದು ಹಾಕುವ ದಿನಗಳು ದೂರವಿಲ್ಲ. ನ್ಯಾಯಾಲಯ, ಪೊಲೀಸ್ ಠಾಣೆಗಳನ್ನೇ ಗುಂಪುಗಳು ತನ್ನ ಸುಪರ್ದಿಗೆ ತೆಗೆದುಕೊಳ್ಳುವವರೆಗೆ ರಾಜನಾಥ್ ಸಿಂಗ್ ಕಾಯುತ್ತಿದ್ದಾರೆ ಎಂದು ದೇಶ ಭಾವಿಸಬೇಕೇ? ಒಂದು ರೀತಿಯಲ್ಲಿ ಕೇಂದ್ರ ಸರಕಾರ, ತಾನೇ ಹೆಣೆದ ಬಲೆಗೆ ಬಿದ್ದು ಒದ್ದಾಡುತ್ತಿದೆ. ಅಧಿಕಾರ ಹಿಡಿಯಲು ಹಿಂಸಾಚಾರ ಬೇಕು. ಅದರೆ ಈ ದೇಶವನ್ನು ನಡೆಸುವ ಸಂದರ್ಭದಲ್ಲಿ ಹಿಂಸಾಚಾರ ಅತಿ ದೊಡ್ಡ ಅಡ್ಡಿಯಾಗಿ ಮಾರ್ಪಟ್ಟಿದೆ. ತಾನೇ ಹುಟ್ಟಿಸಿ, ಸಾಕಿ ಬೆಳೆಸಿದ ಗುಂಪು ಹತ್ಯೆಗಳ ಕುಡಿಗಳನ್ನು ತಾನೇ ಕೈಯಿಂದ ಹಿಚುಕಿ ಹಾಕುವಂತಿಲ್ಲ. ಯಾಕೆಂದರೆ, ಒಂದು ವೇಳೆ ಹಾಗೆ ಮಾಡಲು ಹೊರಟರೆ ಅವುಗಳು ತನ್ನನ್ನೇ ಬಲಿ ತೆಗೆದುಕೊಳ್ಳಬಹುದು ಎನ್ನುವ ಆತಂಕವಿದೆ. ಆದುದರಿಂದ ಬರೇ ಬಾಯಿ ಮಾತಿನಲ್ಲೇ ಗುಂಪು ಹತ್ಯೆಯ ವಿರುದ್ಧ ಸಮರ ಹೂಡುತ್ತಿದೆ. ಇದು ದೇಶದ ಪಾಲಿಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿದ ಸರಕಾರವೇ ಈ ಮೂಲಕ ದೇಶವನ್ನು ನಿಧಾನಕ್ಕೆ ಗೂಂಡಾಗಳ ಕೈಗೆ ಸ್ವತಃ ಒಪ್ಪಿಸುತ್ತಿದೆ. ಕಾನೂನಿನ ಅಸಹಾಯಕತೆ ಗುಂಪು ಹಂತಕರಿಗೆ ಮನವರಿಕೆಯಾದರೆ ಅದು ಇನ್ನಷ್ಟು ವೀರಾವೇಶದಿಂದ ತನ್ನ ಕೃತ್ಯ ಮುಂದುವರಿಸುತ್ತದೆ. ಪೊಲೀಸರೂ ಹೊರಗೆ ಬರದಂತಹ ವಾತಾವರಣ ನಿರ್ಮಾಣವಾಗಲಿದೆ. ಯುವಕರಿಗೆ ಈ ಗುಂಪು ಹತ್ಯೆ ಆಕರ್ಷಣೀಯ ವೃತ್ತಿಯಾಗಿ ಭಾಸವಾಗಬಹುದು. ದನಸಾಕಿ ಗೋರಕ್ಷಣೆ ಮಾಡುವುದಕ್ಕಿಂತ, ಯಾರದೋ ಗೋವಿನ ಹೆಸರಲ್ಲಿ ಗೂಂಡಾಗಿರಿ ಮಾಡಿ ಬದುಕು ಸಾಗಿಸುವುದು ಸುಲಭದಾರಿಯಾಗಿ ಅವರಿಗೆ ಕಾಣಬಹುದು. ಇದು ಹೀಗೆ ಮುಂದುವರಿದರೆ ನಿಧಾನಕ್ಕೆ ಹೈನೋದ್ಯಮ ಈ ದೇಶದಿಂದ ಅಳಿಯಲಿದೆ. ಗೋರಕ್ಷಕರ ಸಂತತಿ ಮಾತ್ರ ಬೆಳೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News