ಟ್ರಂಪ್ ವಾಕ್ ಆಫ್ ಫೇಮ್ ಸ್ಟಾರ್ ಹಾನಿಗೈದ ದುಷ್ಕರ್ಮಿ

Update: 2018-07-26 07:49 GMT

ಲಾಸ್ ಏಂಜಲಿಸ್, ಜು. 26 : ಹಾಲಿವುಡ್ ವಾಕ್ ಆಫ್ ಫೇಮ್ ನಲ್ಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಟಾರ್ ಅನ್ನು ವ್ಯಕ್ತಿಯೊಬ್ಬ ಬುಧವಾರ ಕೊಡಲಿಯೊಂದರ ಸಹಾಯದಿಂದ ನಾಶಪಡಿಸಿದ್ದಾನೆ.

ಆಸ್ಟಿನ್ ಕ್ಲೇ (24) ಎಂಬಾತನನ್ನು ದಾಂಧಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಆತ ತನ್ನ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿಸಿಲ್ಲವೆಂದು ತನಿಖಾಕಾರರು ಹೇಳಿದ್ದಾರೆ. ಆತ 20,000 ಡಾಲರ್ ಬಾಂಡ್ ನೀಡಿದಲ್ಲಿ ಮಾತ್ರ ಆತನಿಗೆ ಜಾಮೀನು ದೊರೆಯುವುದೆಂದು ಹೇಳಲಾಗಿದೆ.

ನಾಶಗೊಂಡ ಟ್ರಂಪ್ ಅವರ ಸ್ಟಾರ್ ನ ಫೋಟೋವನ್ನು ಹಲವರು ಕ್ಲಿಕ್ಕಿಸುತ್ತಿದ್ದಾರೆ. ಈ ವಾಕ್ ಆಫ್ ಫೇಮ್ ನ ಸ್ಟಾರ್ ಇರುವ ವ್ಯಕ್ತಿಗಳ ಬಗ್ಗೆ ಅಸಹನೆಯಿದ್ದಲ್ಲಿ ಅದನ್ನು ಈ ರೀತಿ ಹಾನಿಗೈಯ್ಯದೆ ಆಕ್ರೋಶವನ್ನು ಬೇರೆ ರೀತಿ ತೋರ್ಪಡಿಸುವುದು ಸೂಕ್ತ ಎಂದು ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಗೂ ಸಿಇಒ ಲೆರೊನ್ ಗುಬ್ಲೆರ್ ಹೇಳಿದ್ದಾರೆ.

ಈ ಹಿಂದೆ ರಿಯಾಲಿಟಿ ಟಿವಿ ತಾರೆಯಾಗಿದ್ದ ಟ್ರಂಪ್ ರಾಜಕೀಯ ಪ್ರವೇಶಿಸಿದಂದಿನಿಂದ ಅವರ ಸ್ಟಾರ್ ಆಗಾಗ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಈ ಹಿಂದೆ ಈ ಸ್ಟಾರ್ ಸಮೀಪ ನಿಂತು ಜನರು ತಮ್ಮ ಅಸಹನೆ ವ್ಯಕ್ತಪಡಿಸುವುದನ್ನು, ಅದಕ್ಕೆ ಬಣ್ಣ ಹಚ್ಚಿ ವಿರೂಪಗೊಳಿಸುವುದನ್ನು ಹಾಗೂ ನಾಯಿಯೊಂದನ್ನು ಅದರ ಮೇಲೆ ಉಚ್ಚೆ ಹೊಯ್ಯಲು ಬಿಟ್ಟಿರುವುದನ್ನು ತಾನು ನೋಡಿದ್ದಾಗಿ ಒಬ್ಬ ವ್ಯಕ್ತಿ ಹೇಳಿದ್ದ.

ಕಲಾವಿದನೊಬ್ಬ ಜುಲೈ 2016ರಲ್ಲಿ ಟ್ರಂಪ್ ಸ್ಟಾರ್ ಸುತ್ತ ಒಂದು ಸಣ್ಣ ಗೋಡೆ ಕಟ್ಟಿದ್ದರೆ ಅದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಒಬ್ಬ ವ್ಯಕ್ತಿ ಈ ಸ್ಟಾರ್ ಅನ್ನು ಹಾನಿಗೊಳಿಸಿದ್ದಕ್ಕೆ ಪೊಲೀಸರಿಂದ ಬಂಧಿತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News