ಜಿಯೊ ವಿವಿಗೆ 'ಶ್ರೇಷ್ಠ ಸಂಸ್ಥೆ' ಮಾನ್ಯತೆ ಇನ್ನೂ ನೀಡಿಲ್ಲ: ಜಾವಡೇಕರ್

Update: 2018-07-26 16:32 GMT

ಹೊಸದಿಲ್ಲಿ, ಜು.26: ಜಿಯೊ ಸಂಸ್ಥೆಗೆ ಉತ್ಕೃಷ್ಟತೆಯ ಮಾನ್ಯತೆ ನೀಡಲಾಗಿಲ್ಲ . ಆದರೆ ಕೆಲವು ಷರತ್ತುಗಳನ್ನು ವಿಧಿಸಿ ‘ಉದ್ದೇಶದ ಪತ್ರ’ವನ್ನು ಮಾತ್ರ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾವಿಸಿದ ಹಲವು ಸದಸ್ಯರು, ಆಯ್ದ ಸಂಸ್ಥೆಗಳಿಗೆ ಉತ್ಕೃಷ್ಟತೆಯ ಮಾನ್ಯತೆ ಎಂಬ ಪ್ರತಿಷ್ಟಿತ ಗೌರವವನ್ನು ಯಾವ ಮಾನದಂಡದ ಆಧಾರದಲ್ಲಿ ನೀಡಲಾಗಿದೆ ಎಂಬ ಬಗ್ಗೆ ಸರಕಾರದ ಸ್ಪಷ್ಟನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್, ಪರಿಣತರ ತಂಡವನ್ನೊಳಗೊಂಡಿರುವ ಸಮಿತಿಯು ಕೂಲಂಕುಷ ಪರಿಶೀಲನೆ ನಡೆಸಿ ಆಯ್ಕೆ ಮಾಡುತ್ತದೆ ಎಂದು ತಿಳಿಸಿದರು. ಅಲ್ಲದೆ ಜಿಯೊ ಸಂಸ್ಥೆಯನ್ನು ಉತ್ಕೃಷ್ಟತಾ ಸಂಸ್ಥೆ ಎಂದು ಮಾನ್ಯ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟ್ಟಿಟ್ಯೂಟ್ ಆಫ್ ಸೈನ್ಸ್, ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು ಈ ಪ್ರತಿಷ್ಟಿತ ಗೌರವವಕ್ಕೆ ಆಯ್ಕೆಯಾಗಿವೆ .ಅಲ್ಲದೆ ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸಸ್, ಮಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಜಿಯೊ ಇನ್‌ಸ್ಟಿಟ್ಯೂಟ್‌ಗೆ ‘ಉದ್ದೇಶದ ಪತ್ರ’ವನ್ನು ನೀಡಲಾಗಿದೆ ಎಂದು ಸಚಿವರು ವಿವರಿಸಿದರು. ಆದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಐಐಟಿ ಚೆನ್ನೈ ಅಥವಾ ಜೆಎನ್‌ಯುನಂತಹ ಸಂಸ್ಥೆಗಳನ್ನು ಆಯ್ಕೆ ಮಾಡದಿರಲು ಕಾರಣವೇನು ಎಂದು ಸಿಪಿಐ ಮುಖಂಡ ಡಿ.ರಾಜಾ ಸಚಿವರನ್ನು ಪ್ರಶ್ನಿಸಿದರು. ತಜ್ಞರ ಸಮಿತಿ ಪರಿಶೀಲನೆ ನಡೆಸಿ ಆಯ್ಕೆ ಮಾಡುತ್ತದೆ ಮತ್ತು ಸರಕಾರ ಸೂಕ್ತ ಅಂತರ ಕಾಯ್ದುಕೊಳ್ಳುತ್ತದೆ ಎಂದು ಜಾವಡೇಕರ್ ಉತ್ತರಿಸಿದರು.

ಈ ಸಂದರ್ಭ ರಾಜಾ ಮತ್ತೊಂದು ಪೂರಕ ಪ್ರಶ್ನೆ ಕೇಳಿದ್ದು ಇದಕ್ಕೆ ಸಚಿವರು ಉತ್ತರಿಸುವ ಮೊದಲೇ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಸಭಾಪೀಠದ ಮೂಲಕವೇ ಪ್ರಶ್ನೆಗಳು ನಿರ್ದೇಶಿಸಲ್ಪಡಬೇಕು ಎಂದರು. ರಾಜ(ಅರಸು) ಕೇಳಿದ ಮಾತ್ರಕ್ಕೆ ಮಂತ್ರಿ(ಸಚಿವರು) ಉತ್ತರಿಸಬೇಕೆಂದಿಲ್ಲ ಎಂದು ವೆಂಕಯ್ಯ ನಾಯ್ಡು ಲಘುದಾಟಿಯಲ್ಲಿ ನುಡಿದರು. ಸಮಗ್ರ ಶಿಕ್ಷಾ ಯೋಜನೆಯಡಿ 2018ರ ಎಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗಿನ ಅವಧಿಗೆ ಒಟ್ಟು 75 ಸಾವಿರ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು ಹಾಲಿ ನಿಧಿಗಿಂತ ಇದು ಶೇ.20ರಷ್ಟು ಅಧಿಕವಾಗಿದೆ. ಶಾಲೆಗಳ ವಾಚನಾಲಯಗಳ ಅಭಿವೃದ್ಧಿಗೆ ಪ್ರತೀ ಶಾಲೆಗೆ 5 ಸಾವಿರ ರೂ.ನಿಂದ 20 ಸಾವಿರ ರೂ.ವರೆಗೆ, ಅಲ್ಲದೆ ಸಂಯುಕ್ತ ಅನುದಾನವನ್ನು 25 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ನಿಗದಿಗೊಳಿಸಲಾಗಿದೆ(ಈಗ 14,500 ರೂ.ನಿಂದ 50,000 ರೂ.). ಕ್ರೀಡೋಪಕರಣ ಖರೀದಿಗಾಗಿ ಪ್ರತೀ ಪ್ರಾಥಮಿಕ ಶಾಲೆಗಳಿಗೆ ವಾರ್ಷಿಕ 5 ಸಾವಿರ ರೂ. ಹಿರಿಯ ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ರೂ, ಹಿರಿಯ ಮಾಧ್ಯಮಿಕ ಶಾಲೆಗಳಿಗೆ 25 ಸಾವಿರ ರೂ. ನೀಡಲಾಗುವುದು. ವಿಶೇಷ ಅಗತ್ಯದ ಮಕ್ಕಳಿಗೆ ನೀಡಲಾಗುವ ನೆರವನ್ನೂ ಹೆಚ್ಚಿಸಲಾಗಿದೆ. ಒಂದರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಪ್ರತೀ ತಿಂಗಳು 200 ರೂ, 400 ರೂ. ಇದ್ದ ಸಮವಸ್ತ್ರ ಭತ್ತೆಯನ್ನು ವರ್ಷಕ್ಕೆ 600 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News