ಬಲಿದಾನಗೈದ ಯೋಧರಿಗೆ ಶಾಸಕ ಯತ್ನಾಳ್ ಅವಮಾನ

Update: 2018-07-28 04:30 GMT

ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಒಬ್ಬೊಬ್ಬರಾಗಿ ಬಂಧನವಾಗುತ್ತಿರುವ ಹೊತ್ತಿನಲ್ಲೇ, ‘‘ನಾನು ಗೃಹ ಸಚಿವನಾಗಿದ್ದಿದ್ದರೆ, ಬುದ್ಧಿಜೀವಿಗಳ ವಿರುದ್ಧ ಸಾಮೂಹಿಕ ಗುಂಡಿನ ದಾಳಿ ನಡೆಸುತ್ತಿದ್ದೆ’’ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಹಿರಂಗ ಸಭೆಯೊಂದರಲ್ಲಿ ಆಡಿದ್ದಾರೆ. ಯತ್ನಾಳ್ ಹೇಳಿಕೆ ಹಲವು ಅರ್ಥಗಳನ್ನು ಧ್ವನಿಸಿದೆ. ಮುಖ್ಯವಾಗಿ ಗೌರಿಲಂಕೇಶ್ ಹತ್ಯೆಯನ್ನು ಅವರು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಪೊಲೀಸರು ಹತ್ಯೆ ಆರೋಪಿಗಳನ್ನು ಬಂಧಿಸುತ್ತಿರುವುದರ ವಿರುದ್ಧ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲಿರುವ ವಿಚಾರವಾದಿಗಳನ್ನು, ಚಿಂತಕರನ್ನು ಕೊಲೆ ಮಾಡುವುದಕ್ಕೆ ಅವರು ಪರೋಕ್ಷವಾಗಿ ಕುಮ್ಮಕ್ಕನ್ನು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಲೆಗೆಟ್ಟವರಂತೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿರುವ ಯತ್ನಾಳ್, ಆ ಮೂಲಕ ತನ್ನ ಬುದ್ಧಿಹೀನತೆಯ ಮಟ್ಟವನ್ನು ಪ್ರದರ್ಶಿಸುತ್ತಿದ್ದಾರೆ. ಇಷ್ಟಕ್ಕೂ ಬುದ್ಧಿಜೀವಿಗಳೆಂದರೆ ಯಾರು? ಈ ದೇಶದ ಸ್ವಾತಂತ್ರ ಹೋರಾಟದ ಹಿಂದಿರುವವರು ಬುದ್ಧಿಜೀವಿಗಳೇ ಹೊರತು, ಆರೆಸ್ಸೆಸ್‌ನೊಳಗಿರುವ ಬುದ್ಧಿರಹಿತ ಜೀವಿಗಳಲ್ಲ ಎನ್ನುವುದನ್ನು ಯತ್ನಾಳ್‌ರಂತಹ ಜನಪ್ರತಿನಿಧಿಗಳು ನೆನಪಿಟ್ಟುಕೊಳ್ಳಬೇಕು. ಒಂದು ದೇಶವನ್ನು ವಿಶ್ವ ಗುರುತಿಸುವುದು ಅಲ್ಲಿರುವ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಮಾನದಂಡವಾಗಿಟ್ಟುಕೊಂಡು. ಸ್ವಾತಂತ್ರಾನಂತರ ಈ ದೇಶ ಆಧುನಿಕ ಜಗತ್ತಿಗೆ ತೆರೆದುಕೊಳ್ಳುವಲ್ಲಿ ವೈಚಾರಿಕ ಚಿಂತನೆಗಳ ಕೊಡುಗೆ ಅಪಾರ. ಸ್ವಾತಂತ್ರ ಹೋರಾಟದಲ್ಲಿ ಗುರುತಿಸಿಕೊಂಡ ಬಹುತೇಕ ಹೋರಾಟಗಾರರು ಬುದ್ಧಿಜೀವಿಗಳಾಗಿದ್ದರು. ಇಂಗ್ಲೆಂಡ್‌ನಲ್ಲಿ ಕಲಿತು ಬಂದವರು, ಭಾರತದ ಏಳಿಗೆಯ ಬಗ್ಗೆ ಚಿಂತೆ ಮಾಡಿದರು. ಬ್ರಹ್ಮ ಸಮಾಜ ಸ್ಥಾಪನೆಯಾದುದು ಇದೇ ಬುದ್ಧಿ ಜೀವಿಗಳಿಂದ. ರಾಜಾರಾಮ್ ಮೋಹನ್ ರಾಯ್‌ರಂತಹ ಬುದ್ಧಿಜೀವಿಗಳಿದ್ದುದರಿಂದಲೇ, ಸತಿ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟಗಳು ತೊಲಗುವಂತಾಯಿತು. ಅವರು ನಡೆಸಿದ ಚಳವಳಿ ಭಾರತಕ್ಕೆ ಅಂಟಿದ ಹಲವು ಕಳಂಕಗಳನ್ನು ತೊಡೆದು ಹಾಕಿತು.

ಆರೆಸ್ಸೆಸ್‌ನಂತಹ ಸಂಘಟನೆಗಳು ಹಿಂದೂ ಧರ್ಮದ ಅಸ್ಪಶ್ಯತೆಯ ಬಗ್ಗೆ ಬಗ್ಗೆ ವೌನವಾಗಿದ್ದವು. ಸ್ವಾಮಿ ವಿವೇಕಾನಂದರೂ ಬುದ್ಧಿಜೀವಿಯೇ ಆಗಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ನಿಲುವು ಮತ್ತು ಆರೆಸ್ಸೆಸ್‌ನ ನಿಲುವುಗಳಿಗೆ ಅಜಗಜಾಂತರವಿದೆ. ಗೋರಕ್ಷಣೆಯ ಚಳವಳಿಯಲ್ಲಿ ತೊಡಗಿದ್ದ ಜನರಿಗೆ, ಮೊದಲು ಮನುಷ್ಯರ ರಕ್ಷಣೆಯಾಗಲಿ ಎಂದು ಕರೆ ನೀಡಿದವರು ವಿವೇಕಾನಂದರು. ಅತ್ಯಂತ ಕ್ರಾಂತಿಕಾರಕವಾಗಿ, ನಿಷ್ಠುರವಾಗಿ ಹಿಂದೂ ಧರ್ಮವನ್ನು ಟೀಕಿಸಿದವರಲ್ಲಿ ವಿವೇಕಾನಂದರು ಒಬ್ಬರು. ಬಹುಶಃ ಒಂದು ವೇಳೆ ವಿವೇಕಾನಂದರು ಇಂದು ಬದುಕಿದ್ದಿದ್ದರೆ ಸಂಘಪರಿವಾರದ ಗೂಂಡಾಗಳು ಅಗ್ನಿವೇಶ್ ಅವರಿಗೆ ಥಳಿಸಿದಂತೆ ನಡು ಬೀದಿಯಲ್ಲಿ ಥಳಿಸುತ್ತಿದ್ದರು ಅಥವಾ ಯತ್ನಾಳ್‌ನಂತಹ ಜನಪ್ರತಿನಿಧಿಗಳು ವಿವೇಕಾನಂದರಿಗೆ ಗುಂಡಿಕ್ಕಲು ಬಹಿರಂಗವಾಗಿ ಆದೇಶ ನೀಡುತ್ತಿದ್ದರು. ಬ್ರಿಟಿಷರ ವಿರುದ್ಧ ನೇಣಿಗೆ ಕೊರಳೊಡ್ಡಿದ್ದ ಭಗತ್ ಸಿಂಗ್ ಕೂಡ ಅಪ್ರತಿಮ ಬುದ್ಧಿಜೀವಿಯಾಗಿದ್ದರು. ಜೈಲಿನಲ್ಲಿ ಕುಳಿತು ‘ನಾನೇಕೆ ನಾಸ್ತಿಕನಾದೆ’ ಎಂಬ ಕೃತಿಯನ್ನು ಬರೆದವರು ಭಗತ್ ಸಿಂಗ್. ಜೈಲಿನಲ್ಲೇ ಅನೇಕ ಬುದ್ಧಿಜೀವಿ ಚಿಂತಕರ ಕೃತಿಗಳನ್ನು ಓದಿ ಅಪಾರ ಜ್ಞಾನವನ್ನು ಸಣ್ಣ ವಯಸ್ಸಿನಲ್ಲೇ ತನ್ನದಾಗಿಸಿಕೊಂಡವರು. ಅವರು ಸ್ವಾತಂತ್ರಕ್ಕಾಗಿ ತನ್ನ ಪ್ರಾಣವನ್ನೇ ಕೊಟ್ಟರು. ಇದೇ ಸಂದರ್ಭದಲ್ಲಿ ಯತ್ನಾಳ್‌ರಿಗೆ ಪ್ರಾತಃಸ್ಮರಣೀಯರಾಗಿರುವ ವೀರಸಾವರ್ಕರ್, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರವನ್ನು ಬರೆದು, ಅವರೊಂದಿಗೆ ಕ್ಷಮೆಯಾಚಿಸಿ ಶಿಕ್ಷೆಯಿಂದ ಪಾರಾದರು.

ಈ ದೇಶ ಬಿಡುಗಡೆಯನ್ನು ಕಂಡದ್ದು, ಭಗತ್ ಸಿಂಗ್, ಅಂಬೇಡ್ಕರ್, ಸುಭಾಶ್ಚಂದ್ರಬೋಸ್‌ರಂತಹ ಬುದ್ಧಿಜೀವಿಗಳಿಂದಲೇ ಹೊರತು, ಸಾವರ್ಕರ್, ಗೋಡ್ಸೆ, ಹೆಡಗೇವಾರ್‌ರಂತಹ ಮನುವಾದಿಗಳಿಂದಲ್ಲ. ಅವರನ್ನು ನೆಚ್ಚಿಕೊಂಡಿದ್ದರೆ ಈ ದೇಶ ಇಂದಿಗೂ ಸ್ವತಂತ್ರವಾಗುತ್ತಿರಲಿಲ್ಲ ಮತ್ತು ಈ ದೇಶದ ಶೂದ್ರರು, ದಲಿತರು ಇಂದಿಗೂ ವೈದಿಕರ ಗುಲಾಮಗಿರಿ ಮಾಡಿಕೊಂಡು ಬದುಕಿರಬೇಕಾಗಿತ್ತು. ಬುದ್ಧಿಜೀವಿಗಳ ವಿರುದ್ಧ ತುಚ್ಛ ಮಾತುಗಳನ್ನಾಡಲು ಯತ್ನಾಳ್ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಮೂಲಕ, ಹುತಾತ್ಮ್ಮ ಯೋಧರ ಬಲಿದಾನಗಳಿಗೆ ಅವಮಾನಮಾಡಿದ್ದಾರೆ. ಈ ದೇಶವನ್ನು ಕಟ್ಟಲು ಅಸಂಖ್ಯ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರೆಲ್ಲ ಗಡಿಯಲ್ಲಿ ನಿಂತು ಪಾಕಿಸ್ತಾನದ ವಿರುದ್ಧ ಕೋವಿ ಚಲಾಯಿಸಿದವರಲ್ಲ. ಅವರಲ್ಲಿ ಈ ದೇಶದ ವೌಢ್ಯತೆಯ ವಿರುದ್ಧ, ಅನ್ಯಾಯಗಳ ವಿರುದ್ಧ ಜಮೀನ್ದಾರರ ಶೋಷಣೆಗಳ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದವರೂ ಇದ್ದಾರೆ. ಜನಸಾಮಾನ್ಯರ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಯಾವುದೇ ಸಾಮಾಜಿಕ ಕಾರ್ಯಕರ್ತ ದೇಶದ ಪಾಲಿಗೆ ಯೋಧನೇ ಆಗಿದ್ದಾನೆ.

ಇಂದು ಗಡಿಯಲ್ಲಿ ಯೋಧರು ಶತ್ರು ದೇಶದ ವಿರುದ್ಧ ಹೋರಾಡುತ್ತಿದ್ದರೆ, ದೇಶದೊಳಗೆ ನಡೆಯುವ ಅಕ್ರಮಗಳ ವಿರುದ್ಧ ಮಾನವ ಹಕ್ಕು, ಮಾಹಿತಿ ಹಕ್ಕು ಹೋರಾಟಗಾರರು ಹೋರಾಡುತ್ತಾ ಬಂದಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ ಹಲವರು ಪ್ರಾಣವನ್ನೇ ಅರ್ಪಿಸಿದ್ದಾರೆ. ವೌಢ್ಯಗಳ ವಿರುದ್ಧ ಹೋರಾಡಿದ ಪನ್ಸಾರೆ, ದಾಭೋಲ್ಕರ್, ವೈದಿಕ ಶೋಷಣೆಗಳನ್ನು ಹಿಡಿದೆತ್ತಿದ ಕಲಬುರ್ಗಿ, ಆರೆಸ್ಸೆಸ್ ಸಂಘಪರಿವಾರದ ಹಿಂಸಾಚಾರಗಳ ವಿರುದ್ಧ ಧ್ವನಿಯೆತ್ತಿದ ಗೌರಿಲಂಕೇಶ್‌ರಂತಹ ಶಕ್ತಿಗಳು ಯಾವ ಯೋಧರಿಗೂ ಕಡಿಮೆಯಿಲ್ಲ. ತಮ್ಮ ಸಿದ್ಧಾಂತಕ್ಕಾಗಿ ಇವರು ಪ್ರಾಣವನ್ನೇ ಅರ್ಪಿಸಿದವರು. ಇಂತಹ ಚಿಂತಕರ ಸಾವುಗಳನ್ನು ಬಯಸುವ ಯತ್ನಾಳ್‌ರಂತಹ ಜನಪ್ರತಿನಿಧಿಗಳು ಈ ದೇಶದ ನಿಜವಾದ ಶತ್ರುವಾಗಿದ್ದಾರೆ. ವಿವೇಕಾನಂದರಂತಹ ಚಿಂತಕರು ವಿಶ್ವಕ್ಕೆ ಪ್ರತಿಪಾದಿಸಿದ ಹಿಂದೂ ಧರ್ಮವನ್ನು ವಿರೂಪಗೊಳಿಸಲು ಹೊರಟಿರುವ ಯತ್ನಾಳ್‌ರಂತಹ ಜನರೇ ಹಿಂದೂ ಧರ್ಮದ ಸದ್ಯದ ಅತಿ ದೊಡ್ಡ ಶತ್ರು. ಹಿಂದೂಧರ್ಮದ ಕುರಿತಂತೆ ವಿಶ್ವದ ಮಂದಿ ತಪ್ಪು ಕಲ್ಪನೆ ಹೊಂದಲು ಇವರೇ ಕಾರಣವಾಗಿದ್ದಾರೆ. ಸದ್ಯಕ್ಕೆ ಯತ್ನಾಳ್ ನೀಡಿರುವ ಹೇಳಿಕೆ, ಇನ್ನಷ್ಟು ಚಿಂತಕರನ್ನು ವಿಚಾರವಾದಿಗಳನ್ನು ಕೊಂದು ಹಾಕಲು ಸಂಘಪರಿವಾರದ ದುಷ್ಕರ್ಮಿಗಳಿಗೆ ನೀಡಿದ ಕರೆಯಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಗೌರಿ ಹತ್ಯೆ ತನಿಖೆಗೆ ಅಡ್ಡಿ ಮಾಡಿದ ಮತ್ತು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದ ಆರೋಪದಲ್ಲಿ ಪೊಲೀಸರು ಸ್ವಯಂ ಮೊಕದ್ದಮೆ ದಾಖಲಿಸಿ ಬಂಧಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯತ್ನಾಳ್ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ, ಯತ್ನಾಳ್‌ರ ಹೇಳಿಕೆಯನ್ನು ಬಿಜೆಪಿ ವೌನವಾಗಿ ಸಮ್ಮತಿಸಿದೆ ಎಂದೇ ನಾಡಿನ ಜನತೆ ತಿಳಿಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News