ಅಖಿಲೇಶ್ ಕೈಕೆಳಗೆ ಮಾಯಾವತಿ ಕಾರ್ಯನಿರ್ವಹಿಸುವರೇ: ಆದಿತ್ಯನಾಥ್ ಪ್ರಶ್ನೆ

Update: 2018-07-28 04:41 GMT

ಲಕ್ನೋ, ಜು.28: ಉತ್ತರ ಪ್ರದೇಶದಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಕೂಟ ವೈರುದ್ಧ್ಯಗಳಿಂದ ಕೂಡಿದ್ದು, ಹೆಚ್ಚು ಕಾಲ ಬಾಳದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಭವಿಷ್ಯ ನುಡಿದಿದ್ದಾರೆ.

"ಟೈಮ್ಸ್ ಆಫ್ ಇಂಡಿಯಾ"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಅಖಿಲೇಶ್ ಕೈ ಕೆಳಗೆ ಮಾಯಾವತಿ ಕಾರ್ಯನಿರ್ವಹಿಸಲು ಸಾಧ್ಯವೇ" ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 75ಕ್ಕೂ ಅಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ತಮ್ಮ ಯೋಜನೆಯನ್ನು ಅವರು ಬಹಿರಂಗಪಡಿಸಿದ್ದಾರೆ.

ಎಸ್ಪಿ- ಬಿಎಸ್ಪಿ ಮೈತ್ರಿಕೂಟದಿಂದ ಬಿಜೆಪಿ ಕನಸಿಗೆ ಧಕ್ಕೆಯಾಗದೇ ಎಂಬ ಪ್ರಶ್ನೆಗೆ, "ಈ ಮೈತ್ರಿ ಸ್ವಾರ್ಥ ಹಾಗೂ ಸ್ವಹಿತಾಸಕ್ತಿಯಿಂದ ಕೂಡಿದ್ದು, ವಾಸ್ತವವಾಗಿ ರಾಜಕೀಯ ಎನ್ನುವುದು ಸೇವೆ. ಆ ಮೈತ್ರಿ ಸುಸ್ಥಿರವಲ್ಲ ಹಾಗೂ ಹೆಚ್ಚುಕಾಲ ಬಾಳದು. ಅದು ತಲೆ ಇಲ್ಲದ ಮೈತ್ರಿ" ಎಂದು ಆದಿತ್ಯನಾಥ್ ಉತ್ತರಿಸಿದ್ದಾರೆ.

ಉಪಚುನಾವಣೆಯಲ್ಲಿನ ಮೈತ್ರಿ ಅಪವಿತ್ರ ಎಂದು ನೀವು ಹೇಳುತ್ತಿರುವ ಮಧ್ಯೆಯೇ ನಾಲ್ಕು ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ, "ಮೈತ್ರಿ ಬಗೆಗಿನ ನನ್ನ ಹೇಳಿಕೆಗೆ ನಾನು ಬದ್ಧ. ಯಾರ ಅಧೀನದಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ಅವರು ಮೊದಲು ಬಗೆಹರಿಸಿಕೊಳ್ಳಲಿ. ಅಖಿಲೇಶ್ ನೇತೃತ್ವದಲ್ಲಿ ಮಾಯಾವತಿ ಕೆಲಸ ಮಾಡಲು ಸಿದ್ಧರಿದ್ದಾರೆಯೇ? ಅಥವಾ ರಾಹುಲ್‌ ಗಾಂಧಿ ನಾಯಕತ್ವವನ್ನು ಅಖಿಲೇಶ್ ಯಾದವ್ ಸ್ವೀಕರಿಸುತ್ತಾರೆಯೇ?" ಎಂದು ಅವರು ಪ್ರತಿಕ್ರಿಯಿಸಿದರು.

ಬಿಹಾರ ಮಾದರಿಯ ಮಹಾಘಟಬಂಧನ ಸಾಧ್ಯತೆ ಬಗ್ಗೆ ಕೇಳಿದಾಗ, "ಉತ್ತರ ಪ್ರದೇಶದಲ್ಲಿ ಅವರು ಏನೂ ಮಾಡಲಾಗದು. ಅವರಿಗೆ ಬಿಜೆಪಿಯ ಭಯ ಇದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರಸ್ಪರ ಕೈಜೋಡಿಸುತ್ತಿದ್ದಾರೆ. ಆದರೆ ಪರಸ್ಪರರ ನಾಯಕತ್ವ ಸ್ವೀಕರಿಸುವ ಸ್ಥಿತಿಯಲ್ಲಿ ಅವರು ಇಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿ ದೊಡ್ಡ ವಿಜಯ ಸಾಧಿಸಲಿದೆ" ಎಂಬ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News