ಸಾಹಿತ್ಯದ ಓದುಗರ ಸಂಖ್ಯೆ ಕಡಿಮೆ: ಪ್ರೊ.ಚಂಪಾ

Update: 2018-07-29 11:58 GMT

ಬೆಂಗಳೂರು, ಜು.29: ಇತ್ತೀಚಿನ ವಾತಾವರಣದಲ್ಲಿ ಸಾಹಿತ್ಯದ ಓದುಗರ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಅದರಲ್ಲಿಯೂ ಕಾವ್ಯದ ಓದುಗರ ಸಂಖ್ಯೆ ಇನ್ನೂ ಕಡಿಮೆಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತೆಲುಗು ಜಂಗಮ ವಿದ್ಯಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಪ್ರದಾನ ಹಾಗೂ ಕಾವ್ಯ ಕುಸುಮಾಂಜಲಿ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದಾಗಿ ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಹಲವು ವಿಷಯಗಳಲ್ಲಿ ಉತ್ತಮವಾದ ಕೃತಿಗಳು ಹೊರಬರುತ್ತಿದ್ದರೂ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನದಿಂದ ಹಾಗೂ ಟಿವಿ ಮಾಧ್ಯಮಗಳ ಭರಾಟೆಯಲ್ಲಿ ಸಂಖ್ಯೆ ಕಡಿಮೆಯಾಗುತ್ತಿದೆ. ಓದು ಎಂಬುದು ತಪಸ್ಸು ಇದ್ದಂತೆ. ಉತ್ತಮವಾದ ಸಾಹಿತ್ಯ ಓದುವ ಮೂಲಕ ಅರಿವಿನ ವಿಸ್ತಾರ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ, ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ಚಂಪಾ ಸಲಹೆ ನೀಡಿದರು.

ಡಾ.ಎಚ್.ನರಸಿಂಹಯ್ಯ ಮೂಢನಂಬಿಕೆಗಳನ್ನು ಧಿಕ್ಕರಿಸಿದ ವ್ಯಕ್ತಿ. ಅಲ್ಲದೆ, ಬೇರೆ ಯಾರು ಕಲಿಯಬಾರದು ಎಂಬ ನಿರ್ಬಂಧಕ್ಕೊಳಪಡಿಸಿದ್ದ ಸಂಸ್ಕೃತ ಭಾಷೆಯನ್ನು ಕಲಿತು, ಸಂಸ್ಕೃತದ ಸಾಹಿತ್ಯದ ಪೂರ್ಣ ತಿರುಳನ್ನು ಕನ್ನಡಕ್ಕೆ ನೀಡಿದರು ಎಂದ ಅವರು, ಎಚ್.ಎನ್. ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ನೆಲದ ಜೊತೆಗೆ ಸಂಬಂಧವಿರುವವರಲ್ಲಿ ಮತ್ತೊಬ್ಬರನ್ನು ಪ್ರೀತಿಸುವ ಗುಣವಿರುತ್ತದೆ. ನಮ್ಮ ನಾಡಿನ ಶ್ರಮಿಕರು, ಕೃಷಿಕರಲ್ಲಿ ಅಂತಹ ಗುಣಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ರೈತರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹೈಜಾಕ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ರೈತ ಹೋರಾಟದ ಹೆಸರಿನಲ್ಲಿ ನಡೆದ ಹೋರಾಟದಲ್ಲಿ ಹಸಿರು ಶಾಲು ಇರಬೇಕಾದ ಸ್ಥಳದಲ್ಲಿ ಕೇಸರಿ ಶಾಲು ಹೊದಿಸಿಕೊಂಡಿದ್ದರು. ಅಂದರೆ, ತಮ್ಮ ಸ್ವಾರ್ಥಕ್ಕಾಗಿ ಚಳವಳಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದ ಅವರು, ಜಾತಿ-ಜಾತಿಗಳ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಪಿತೂರಿ ನಾಗಪುರದಿಂದ ನಡೆಯುತ್ತಿದೆ ಎಂದು ದೂರಿದರು.

ರೈತ ಸಮುದಾಯ ಎಲ್ಲರನ್ನೂ ಒಳ ಹುಟ್ಟಿದವರು ಎಂಬಂತೆ ಅಣ್ಣ-ತಮ್ಮ, ಅಪ್ಪ-ಅಮ್ಮ ಎಂಬ ಸಂಬಂಧವಾಚಕ ಪದಗಳಿಂದ ಇಂದಿಗೂ ಕರೆಯುತ್ತಾರೆ. ಅವರಿಗೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ. ಆದರೆ, ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಶ್ರಮಿಕರ ನಡುವೆ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ. ನಾವೆಲ್ಲ ಹಿಂದೂಗಳು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಸಾಹಿತಿ ಪ್ರೊ.ನಾರಾಯಣಘಟ್ಟಗೆ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಹಾಗೂ ಬಿ.ಆರ್.ಲೋಕೇಶ್, ಎಸ್.ವಿಜಯಲಕ್ಷ್ಮಿ, ಎಸ್.ಆರ್. ವನಜಾಕ್ಷಮ್ಮ, ಶಂಕರ್ ಹೂಗಾರ್, ಕೆ.ದೇವರಾಜು, ಡಾ.ಎಂ.ಪ್ರಸನ್ನಗೆ ಡಾ.ಎಚ್. ನರಸಿಂಹಯ್ಯ ಪುರಸ್ಕಾರ ಮತ್ತು ಸಚಿನ್, ಬಿ.ಆರ್.ಯೋಗಿತಾ, ಎಸ್.ಮನೋಜ್ ಕುಮಾರ್, ವಿ.ಸಹನರಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಪ್ರಾಧ್ಯಾಪಕ ಕಾ.ವೆಂ.ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News