ಬಿಜೆಪಿ ವಕ್ತಾರನಿಗೆ ತಿರುಗುಬಾಣವಾಯ್ತು ಮೋದಿಯನ್ನು ಅಧಿಕಾರಕ್ಕೆ ತರಲು ಸಲಹೆ ನೀಡಿ ಎಂದ ಟ್ವೀಟ್!

Update: 2018-07-29 13:58 GMT

ಹೊಸದಿಲ್ಲಿ, ಜು.29: 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯನ್ನು ಅಧಿಕಾರಕ್ಕೆ ತರಲು ಸಲಹೆಗಳನ್ನು ನೀಡಿ ಎಂಬ ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾರ ಟ್ವೀಟ್ ಪಕ್ಷಕ್ಕೆ ಮುಜುಗರ ಸೃಷ್ಟಿಸಿದೆ. ಇದಾದ ನಂತರ ಬಗ್ಗಾ ತಮ್ಮ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಡಿಆ್ಯಕ್ಟಿವೇಟ್ ಮಾಡಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಬಗ್ಗಾ ಟ್ವಿಟರಿಗರಲ್ಲಿ ಸಲಹೆಗಳನ್ನು ಕೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, Phirdildomodiko@gmail.comಗೆ ಸಲಹೆಗಳನ್ನು ಕಳುಹಿಸುವಂತೆ ಕೋರಿದ್ದರು. ಆದರೆ ಈ ಟ್ವೀಟ್ ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗದೆ, ಈ ಇಮೇಲ್ ಐಡಿ ಟ್ವಿಟರಿಗರಿಗೆ ತಮಾಷೆಯ ವಿಷಯವಾಯಿತು. ಪರಿಣಾಮ ಬಗ್ಗಾ ತಾತ್ಕಾಲಿಕವಾಗಿ ತನ್ನ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡಿದ್ದಾರೆ.

ಬಗ್ಗಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ @ladywithflaws ಎಂಬ ಖಾತೆ Phirdildomodiko@gmail.com ನಿಂದ Dildo (ಲೈಂಗಿಕ ಆಟಿಕೆ) ಏನೆಂದು ಪ್ರಶ್ನಿಸಿತ್ತು. ತಕ್ಷಣವೇ ಟ್ವಿಟರ್ ನಲ್ಲಿ #PhirDildoModiKo ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗತೊಡಗಿತು. ಈ ಬೆಳವಣಿಗೆಗಳ ನಂತರ ಬಗ್ಗಾ ಇಮೇಲ್ ಐಡಿ ಹೆಸರನ್ನು ಬದಲಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಒಬ್ಬರು, “ಇಷ್ಟು ವೇಗದಲ್ಲಿ ಇಮೇಲ್ ಐಡಿ ಹೆಸರು ಬದಲಾಗುವುದನ್ನು ನಾನು ನೋಡಿಲ್ಲ” ಎಂದಿದ್ದರೆ, ಮತ್ತೊಬ್ಬರು, “ಸೈಬರ್ ಸ್ಪೇಸ್ ನಲ್ಲಿ #PhirDildoModiKo ವೈರಲ್ ಆಗುತ್ತಿದ್ದಂತೆ, ತಜೀಂದರ್ ಬಗ್ಗಾರಿಗೆ ಮೋದಿಯ ಕರೆ ಬಂದಿದೆ ಎಂದು ನಮ್ಮ ಮೂಲಗಳು ತಿಳಿಸಿವೆ. ಆದರೆ ಕೆಲ ವಿಚಿತ್ರ ಕಾರಣಗಳಿಂದ ಅವರು ಟ್ವಿಟರ್ ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಿದ್ದಾರೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News