ಬೆಂಗಳೂರು: ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಯುವಕ ಮೃತ್ಯು

Update: 2018-07-29 12:23 GMT

ಬೆಂಗಳೂರು, ಜು. 29: ಶರವೇಗದಲ್ಲಿ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಇಲ್ಲಿನ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವಕನನ್ನು ನಿಶಾದ್ ಎಂದು ಗುರುತಿಸಲಾಗಿದೆ. ಕೇರಳ ಮೂಲದ ನಿಶಾದ್ ಕೋರಮಂಗಲದಲ್ಲಿ ವಾಸವಾಗಿದ್ದಾನೆ. ರವಿವಾರ ಮುಂಜಾನೆ ನಗರದಿಂದ ದೇವನಹಳ್ಳಿ ತಾಲೂಕಿನ ನಂದಿಬೆಟ್ಟಕ್ಕೆ ಬೈಕ್ ರೈಡಿಂಗ್ ತಂಡದೊಂದಿಗೆ ತೆರಳುತ್ತಿದ್ದ ವೇಳೆ ಕೊಡಿಗೇಹಳ್ಳಿ ಮೇಲುಸೇತುವೆ ಬಳಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ಢಿಕ್ಕಿ ಹೊಡೆದ ರಭಸಕ್ಕೆ ಸುಮಾರು 30 ಮೀಟರ್ ದೂರದಲ್ಲಿ ನಿಶಾದ್ ದೇಹ ಬಿದ್ದಿದೆ. ಘಟನೆಯಲ್ಲಿ ಮತ್ತೊಬ್ಬ ಸವಾರ ನವೀದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಸ್ತೆ ಅಪಘಾತದ ನಂತರ ವಿಮಾನ ನಿಲ್ದಾಣ ರಸ್ತೆಯಲ್ಲಿ 1ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಹೇಳಲಾಗಿದೆ.

ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಹಿಮ್ಮುಖವಾಗಿ ಕೊಡಿಗೇಹಳ್ಳಿ ಗೇಟ್ ಮೂಲಕ ವಿಮಾನ ನಿಲ್ದಾಣ ಮಾರ್ಗಕ್ಕೆ ತೆರಳಿದರು. ಒಂದೇ ರಸ್ತೆಯಲ್ಲಿ ಹಿಮ್ಮುಖ ವಾಹನ ಚಲಾವಣೆಯಿಂದ ಮತ್ತಷ್ಟು ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಸಂಬಂಧ ಹೆಬ್ಬಾಳ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News