ಟ್ರಾಯ್ ಅಧ್ಯಕ್ಷರ ಬ್ಯಾಂಕ್ ಖಾತೆಗೆ 1 ರೂ. ವರ್ಗಾಯಿಸಿದ ಹ್ಯಾಕರ್ ಗಳು!

Update: 2018-07-30 07:19 GMT

ಬೆಂಗಳೂರು, ಜು.30: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಎಸ್.ಆರ್.ಶರ್ಮ ಅವರ ಬ್ಯಾಂಕ್ ಖಾತೆ ವಿವರಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿರುವ ಕೆಲ ಎಥಿಕಲ್ ಹ್ಯಾಕರ್ ಗಳು ಅವುಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶರ್ಮ ಅವರ ಖಾತೆಗೆ ಆಧಾರ್ ಎನೇಬಲ್ಡ್ ಪೇಮೆಂಟ್ಸ್ ಸರ್ವಿಸ್ ಮುಖಾಂತರ ಭೀಮ್ ಮತ್ತು ಪೇಟಿಎಂ ಆ್ಯಪ್  ಹಾಗೂ ಐಎಂಪಿಎಸ್ ಬಳಸಿ 1 ರೂ. ಕಳುಹಿಸಿದ ಸ್ಕ್ರೀನ್ ಶಾಟ್ ಗಳನ್ನೂ ಪೋಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ ಟ್ರಾನ್ಸಾಕ್ಷನ್ ಐಡಿಯನ್ನೂ ಪೋಸ್ಟ್ ಮಾಡಲಾಗಿದೆ.

ಶನಿವಾರ  ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆ ಪೋಸ್ಟ್ ಮಾಡಿ  ತನಗೆ ತೊಂದರೆಯುಂಟು ಮಾಡುವುದು ಸಾಧ್ಯವಾದರೆ ಹಾಗೆಯೇ ಮಾಡುವಂತೆ ಆಧಾರ್ ಟೀಕಾಕಾರರಿಗೆ ಸವಾಲೆಸೆದಿದ್ದರು.

ರವಿವಾರ ಎಥಿಕಲ್ ಹ್ಯಾಕರುಗಳಾದ ಇಲಿಯಟ್ ಅಲ್ಡರ್ಸನ್, ಪುಷ್ಪೇಂದ್ರ ಸಿಂಗ್, ಕನಿಷ್ಕ್ ಸಜ್ನನಿ, ಅನಿವರ್ ಅರವಿಂದ್ ಹಾಗೂ ಕರಣ್ ಸೈನಿಯಿಂದ ಇಲ್ಲಿಯ ತನಕ ಒಟ್ಟು 14 ವಿವರಗಳು ಸೋರಿಕೆಯಾಗಿವೆ. ಇವುಗಳು ಶರ್ಮ ಅವರ ಮೊಬೈಲ್ ಸಂಖ್ಯೆ, ವಿಳಾಸ, ಜನನ  ದಿನಾಂಕ, ಪ್ಯಾನ್, ಮತದಾರರ ಗುರುತು ಚೀಟಿ ಸಂಖ್ಯೆ ಟೆಲಿಕಾಂ ಸೇವಾ ಪೂರೈಕೆದಾರರ ಮಾಹಿತಿ, ಫೋನ್ ಮಾಡೆಲ್ ಹಾಗೂ ಏರ್ ಇಂಡಿಯಾದ ಫ್ರೀಕ್ವೆಂಟ್ ಫ್ಲಯರ್ ಐಡಿ.

ಅವರ ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಆಫ್ ಇಂಡಿಯಾ, ಎಸ್‍ಬಿಐ, ಕೋಟಕ್ ಮಹೀಂದ್ರ ಮತ್ತು ಐಸಿಐಸಿಐ ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್ ಕೂಡ ತಮಗೆ ತಿಳಿದಿದೆ ಎಂದು ಹ್ಯಾಕರ್ ಗಳು ಹೇಳಿ ಅವುಗಳನ್ನು ಪ್ರದರ್ಶಿಸಿದ್ದಾರೆ.

ಡಿಮ್ಯಾಟ್ ಅಕೌಂಟ್ ಮಾಹಿತಿ, ತಮ್ಮ ಎಸ್‍ಬಿಐ ಡೆಬಿಟ್ ಕಾರ್ಡ್ ಮುಖಾಂತರ ಅವರು ಬಲಪಂಥೀಯ ವೆಬ್ ತಾಣವೊಂದರ ಮೂರು ವರ್ಷದ ಚಂದಾ ಹಣ ಪಾವತಿ ಮಾಡಿರುವುದರ ಬಗ್ಗೆಯೂ  ಹ್ಯಾಕರ್ ಗಳು ಮಾಹಿತಿ ಸೋರಿಕೆ ಮಾಡಿದ್ದಾರೆ

ಶರ್ಮ ಅವರ ಟ್ವಿಟರ್ ಸವಾಲು ಇದೀಗ ದೊಡ್ಡ ಟ್ವಿಟರ್ ಯುದ್ಧವಾಗಿಯೇ ಪರಿಣಮಿಸಿದೆ. ರವಿವಾರ ಹಲವಾರು ಮಂದಿ ತಮ್ಮ ಆಧಾರ್ ಸಂಖ್ಯೆಗಳನ್ನು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News