ಮಾಲಿನ್ಯ‌ ನಿಯಂತ್ರಣಕ್ಕೆ ಕಠಿಣ ಕಾನೂನು‌ ಜಾರಿ ಅಗತ್ಯ: ಪರಮೇಶ್ವರ್

Update: 2018-07-31 12:13 GMT

ಬೆಂಗಳೂರು, ಜು.31: ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಲೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ’ಹೊಸ ಕಾನೂನು’ ರೂಪಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ಅರಮನೆ ರಸ್ತೆಯ ಖಾಸಗಿ ಹೊಟೇಲ್ನಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಯೋಜಿಸಿದ್ದ, ‘ಸಿ-40 ನಗರಗಳಲ್ಲಿ ಗ್ಲೋಬಲ್ ಏರ್ ಕ್ವಾಲಿಟಿ ಫೋರಂ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ನಗರ ವಾಯುಮಾಲಿನ್ಯದಲ್ಲಿ ಟಾಪ್ 10ರ ಪಟ್ಟಿಯಲ್ಲಿ ಇಲ್ಲದಿದ್ದರೂ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ತರುವ ಅಗತ್ಯವಿದೆ. ಕಳೆದ 30 ವರ್ಷದಲ್ಲಿ ಇಡೀ ಪ್ರಪಂಚದ ಚಿತ್ರಣ ಬದಲಾಗಿದೆ. ಜಾಗತೀಕರಣದ ಬಳಿಕ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಇದರೊಟ್ಟಿಗೆ ಪರಿಸರ, ವಾಯು ಮಾಲಿನ್ಯ ಮಿತಿ ಮೀರಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಸುತ್ತಲೂ ಮರಗಳೇ ಕಾಣುತ್ತಿದ್ದವು. ಸ್ವಚ್ಛಂದ ವಾತಾವರಣವಿತ್ತು. ಉಷ್ಣಾಂಶ ಗರಿಷ್ಠವೆಂದರೆ ಶೇ.27 ಇರುತ್ತಿತ್ತು. ಸಾಮಾನ್ಯವಾಗಿ ಶೇ.23ರಷ್ಟು ಇರುತ್ತದೆ. ಇದರಿಂದ ಇತರೆ ಜಿಲ್ಲೆ, ರಾಜ್ಯಗಳಿಂದ ಜನರು ಇಲ್ಲಿಗೆ ನೆಮ್ಮದಿಯಿಂದ ಜೀವನ ನಡೆಸಲು ಬರುತ್ತಿದ್ದರು ಎಂದು ಅವರು ವಿವರಿಸಿದರು.

ಬೆಂಗಳೂರು ಕಳೆದ 10 ವರ್ಷದ ಬಳಿಕ ಸಾಕಷ್ಟು ಬದಲಾಗಿದೆ. ಜನರ ವಲಸೆಯಿಂದಾಗಿ ನಗರದ ಜನಸಂಖ್ಯೆ 1.3 ಕೋಟಿ ಮೀರಿದೆ. ನಿತ್ಯ 72 ಲಕ್ಷ ವಾಹನ ಸಂಚರಿಸುತ್ತಿವೆ. ಇದರಿಂದ ಮೂಲಸೌಕರ್ಯ ಹೆಚ್ಚಿಸುವ ಭರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು. ಬೆಂಗಳೂರುನಗರ ಕಳೆದ 10 ವರ್ಷದಲ್ಲಿ ಸಾಕಷ್ಟು ಬೆಳೆದಿದೆ. ಶೇ.23ರಷ್ಟಿದ್ದ ಜನಸಂಖ್ಯೆ, ಈಗ ಶೇ.36 ಹೆಚ್ಚಳವಾಗಿದೆ. ಇದರೊಂದಿಗೆ ನಗರದ ಮೂಲಸೌಕರ್ಯ ಕೂಡ ಹೆಚ್ಚಿಸಿದ್ದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ಈ ಮೂಲಕವೂ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಒಟ್ಟಾರೆ, ಶಾಂತಿಯುತ ಹಾಗೂ ಮಾಲಿನ್ಯ ಮುಕ್ತ ನಗರವನ್ನು ನಾವೆಲ್ಲಾ ನಿರ್ಮಿಸಬೇಕೆಂದು ಅವರು ಆಶಿಸಿದರು.

ಭಾರತದಲ್ಲಿ ಮಾಲಿನ್ಯ ಪ್ರಮಾಣ 60 ಯುನಿಟ್ ಮೀರಿರಬಾರದು. ಆದರೆ, ದೆಹಲಿ 292, ಫರಿದಾಬಾದ್ 272, ವಾರಣಾಸಿ 262 ಯುನಿಟ್ ಇದೆ. ಸಾಮರ್ಥ್ಯಕಿಂತಲೂ ಹೆಚ್ಚಿನ ಮಾಲಿನ್ಯದಿಂದ ಈ ರಾಜ್ಯಗಳು ಮಾಲಿನ್ಯದ ಸಮಸ್ಯೆ ಎದುರಿಸುತ್ತಿವೆ. ಸಂತಸದ ವಿಚಾರವೆಂದರೆ ಬೆಂಗಳೂರು ಟಾಪ್ 10 ಮಾಲಿನ್ಯ ಪಟ್ಟಿಯಲ್ಲಿಲ್ಲದಿದ್ದರೂ 60-70 ಪ್ರಮಾಣದಲ್ಲಿ ಇದೆ. ಹೀಗಾಗಿ ಈಗಲೆ ನಗರವನ್ನು ಮಾಲಿನ್ಯ ಮುಕ್ತಗೊಳಿಸಲು ಕಠಿಣ ಕಾನೂನು ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು.

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ವಿಶೇಷ ಕಾರ್ಯಾಗಾರದಲ್ಲಿ ಲಂಡನ್, ಬರ್ಲಿನ್, ಜೊಹಾನ್ಸ್ ಬರ್ಗ್, ಪೋರ್ಟ್ ಲ್ಯಾಂಡ್, ಲಾಸ್ ಎಂಜಲೀಸ್, ಜೆರಸುಲೇಂ ನಗರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಮಾಲಿನ್ಯ ನಿಯಂತ್ರಣದ ಕುರಿತ ವಿಚಾರಸಂಕಿರಣ, ಸಂವಾದ ಜರುಗಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೇಯರ್ ಸಂಪತ್‌ರಾಜ್, ಬ್ರಿಟಿಷ್ ಉಪ ಆಯುಕ್ತ ಡೊಮಿನಿಕ್, ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರಿದ್ದರು. ಬಾಕ್ಸ್

ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಟ್ಟಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಯೋಜನೆ ವಿಷಯವಾಗಿ ಪ್ರಾತ್ಯಕ್ಷಿಕೆಯನ್ನು ಪರಿಶೀಲನೆ ಮಾಡಲಾಗಿದೆ. ಯೋಜನೆಯ ಸ್ವರೂಪ, ಅಂದಾಜು ವೆಚ್ಚ ಮತ್ತು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಮತ್ತು ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
-ಡಾ.ಜಿ.ಪರಮೇಶ್ವರ್ ,ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News