ಗಾಂಧೀಜಿಗೆ ಆಡು ತಾಯಿಯಂತೆ. ಹಾಗಾಗಿ ಹಿಂದೂಗಳು ಮಟನ್ ತಿನ್ನಬೇಡಿ ಎಂದ ಬಿಜೆಪಿ ಮುಖಂಡ !

Update: 2018-07-31 12:39 GMT

ಕೋಲ್ಕತ್ತಾ, ಜು.31: ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಹಾಗು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಬಿಜೆಪಿ ಹಾಗು ಸಂಘ ಪರಿವಾರಕ್ಕೆ ಹೊಸ ತಲೆನೋವು ತಂದಿಟ್ಟಿದ್ದಾರೆ. ಸಂಘ ಪರಿವಾರದ ಗೋಮಾತೆ, ಗೋರಕ್ಷಣೆ ಹಾಗು ಅದರ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಕೇಂದ್ರ ಸರಕಾರದ ಬೀಫ್ ರಫ್ತು ಕುರಿತು ಈಗಾಗಲೇ ದೇಶಾದ್ಯಂತ ಬಿರುಸಿನ ಚರ್ಚೆ ನಡೆಯುತ್ತಿದೆ. ಅದರ ನಡುವೆಯೇ ಚಂದ್ರ ಬೋಸ್ ವಿಚಿತ್ರ ಹೇಳಿಕೆ ನೀಡಿ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದಾರೆ. 

ಚಂದ್ರ ಬೋಸ್ ಪ್ರಕಾರ ಹಿಂದೂಗಳು ಮಟನ್ ಅಂದರೆ ಕುರಿ, ಆಡಿನ ಮಾಂಸ ತಿನ್ನಬಾರದು ! ಏಕೆಂದರೆ ಗಾಂಧೀಜಿ ಆಡಿನ ಹಾಲು ಕುಡಿಯುತ್ತಿದ್ದರು ಮತ್ತು ಆಡನ್ನು ಮಾತೆ ಎಂದು ಗೌರವಿಸುತ್ತಿದ್ದರು. 

ಇತ್ತೀಚಿಗೆ ಅವರು ಹೀಗೆ ಟ್ವೀಟ್ ಮಾಡಿದ್ದಾರೆ :"Gandhi ji used to stay in my grandfather -Sarat Chandra Bose's house at 1 WoodburnPark in Kolkata. He demanded goat's milk! Two goats brought to the house for this purpose. Gandhi protector of Hindus treated goats as Mata by consuming goats milk. Hindus stop eating goat's meat".

ಗೋವನ್ನು ಮಾತೆ ಎಂದು ಬೀಫ್ ತಿನ್ನುವುದನ್ನು ಕಟುವಾಗಿ ವಿರೋಧಿಸುವ ಬಿಜೆಪಿ ಹಾಗು ಸಂಘ ಪರಿವಾರ ಹಾಗು ಅದರ ಬೆಂಬಲಿಗರಿಗೆ ಇದು ದೊಡ್ಡ ತಲೆನೋವಾಗಿದೆ. ಹಿಂದೂಗಳ ತಟ್ಟೆಯಿಂದ ಮಟನ್ ಅನ್ನೂ ಕಿತ್ತುಕೊಳ್ಳಲು ಹೊರಟಿರುವ ಚಂದ್ರ ಬೋಸ್ ವಿರುದ್ಧ ಬಿಜೆಪಿ ನಾಯಕರೇ ಹರಿಹಾಯ್ದಿದ್ದಾರೆ. 

ಹಿರಿಯ ಬಿಜೆಪಿ ಮುಖಂಡ, ತ್ರಿಪುರ ರಾಜ್ಯಪಾಲ ತಥಾಗಥ ರಾಯ್ ಅವರು ಚಂದ್ರ ಬೋಸ್ ಗೆ ತಿರುಗೇಟು ನೀಡುವ ಟ್ವೀಟ್ ಮಾಡಿದ್ದಾರೆ. " ಗಾಂಧೀಜಿ ಆಗಲಿ, ನೇತಾಜಿ ಬೋಸ್ ಆಗಲಿ ಆಡನ್ನು ಮಾತೆ ಎಂದು ಕರೆದಿಲ್ಲ. ಅದು ನಿಮ್ಮ ತೀರ್ಪು. ಇನ್ನು ಅವರನ್ನು ಹಿಂದೂಗಳ ರಕ್ಷಕರು ಎಂದು ನೀವು ಹೇಳಿರುವುದೂ ತಪ್ಪು. ಹಾಗಾಗಿ ಇಂತಹ ಸುಳ್ಳುಗಳನ್ನು ಹರಡಬೇಡಿ" ಎಂದು ಹೇಳಿದ್ದಾರೆ ರಾಯ್ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News