ಅಸ್ಸಾಮಿನಲ್ಲಿ ಭೀಕರ ಹಿಂಸಾಚಾರಕ್ಕೆ ಮುನ್ನುಡಿ ಬರೆಯುತ್ತಿರುವ ಎನ್‌ಆರ್‌ಸಿ

Update: 2018-07-31 18:31 GMT

ದೇಶವನ್ನು ಒಡೆಯುವುದಕ್ಕೆ ಮೊದಲು ಮನಸ್ಸನ್ನು ಒಡೆಯಬೇಕು ಎನ್ನುವುದನ್ನು ಸಂಘಪರಿವಾರ ಮತ್ತು ಬಿಜೆಪಿ ಚೆನ್ನಾಗಿಯೇ ಅರಿತುಕೊಂಡಿದೆ. ಸ್ವಾತಂತ್ರ ಪೂರ್ವದಲ್ಲೇ ಇಂತಹದೊಂದು ತಂತ್ರವನ್ನು ಪ್ರಯೋಗಿಸಿ ಅವರು ಯಶಸ್ವಿಯಾಗಿದ್ದಾರೆ. ಇಡೀ ದೇಶ ಸ್ವಾತಂತ್ರಕ್ಕಾಗಿ ಒಂದಾಗುತ್ತಿರುವಾಗ, ಭಾರತದೊಳಗೆ ಎರಡು ದೇಶವನ್ನು ಕಂಡವರು ಹಿಂದುತ್ವ ರಾಷ್ಟ್ರೀಯವಾದಿಗಳು. ಗಾಂಧೀಜಿ ನೇತೃತ್ವದಲ್ಲಿ ದೇಶ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತ್ತಿರುವಾಗ ಹಿಂದೂ ಮಹಾ ಸಭಾ, ಧರ್ಮದ ಹೆಸರಲ್ಲಿ ದೇಶವನ್ನು ಒಡೆಯುವ ನಕ್ಷೆ ರೂಪಿಸುತ್ತಿತ್ತು. ಸ್ವತಂತ್ರ ಭಾರತ ಹಿಂದೂ ದೇಶವಾಗಬೇಕು ಎನ್ನುವ ದುರುದ್ದೇಶದಿಂದಲೇ ಇಲ್ಲಿನ ಮುಸ್ಲಿಮರೊಳಗೆ ಅಭದ್ರತೆಯನ್ನು ಹುಟ್ಟಿಸಿ ತಮಗೆ ಪ್ರತ್ಯೇಕ ದೇಶವನ್ನು ಕೇಳುವಂತಹ ಸ್ಥಿತಿ ನಿರ್ಮಾಣಮಾಡಿದರು.

ಎರಡು ದೇಶಗಳ ಕಲ್ಪನೆಯ ಬೀಜ ಬಿತ್ತಿದ್ದು ಲಾಲಲಜಪತರಾಯ್‌ರಂತಹ ಮೃದು ಹಿಂದುತ್ವವಾದಿಳು. ಹಾಗೆಯೇ ಬಾಲಗಂಗಾಧರ ತಿಲಕ್‌ರಂತಹ ನಾಯಕರೂ ಸ್ವಾತಂತ್ರಹೋರಾಟದ ನೆಪದಲ್ಲೇ ಈ ದೇಶದಲ್ಲಿ ಮನುವಾದಿ ಚಿಂತನೆಗಳನ್ನು ಮತ್ತೆ ಬಿತ್ತಿ ಬೆಳೆಸಲು ಹವಣಿಸಿದರು. ಮಹಿಳೆಯರ ವಿದ್ಯಾಭ್ಯಾಸದ ಕುರಿತಂತೆ ಅವರಿಗಿದ್ದ ನಿಲುವು, ಅವರ ಒಟ್ಟು ಚಿಂತನೆಯ ಹಿನ್ನೆಲೆಯನ್ನು ಹೇಳುತ್ತದೆ. ಮಹಿಳೆಯರು ಶಿಕ್ಷಣ ಕಲಿಯುವುದನ್ನು, ಸ್ವಾವಲಂಬಿಗಳಾಗುವುದನ್ನು ತಿಲಕರು ಸಂಪೂರ್ಣ ವಿರೋಧಿಸಿದ್ದರು. ಮಹಾತ್ಮಾಗಾಂಧೀಜಿ, ನೆಹರೂ, ಅಂಬೇಡ್ಕರ್‌ರಂತಹ ಮಹಾನ್ ನಾಯಕರ ದೆಸೆಯಿಂದಾಗಿ ದೇಶವನ್ನು ಹಿಂದೂಸ್ಥಾನ ಅಥವಾ ವೈದಿಕ ಸ್ಥಾನವಾಗಿಸುವ ಹಿಂದೂ ಮಹಾಸಭಾದ ಸಂಚು ವಿಫಲಗೊಂಡಿತು. ಆ ಸಿಟ್ಟಿನಿಂದಲೇ ನಾಥೂರಾಂ ಗೋಡ್ಸೆ ಮೂಲಕ ಗಾಂಧೀಜಿಯನ್ನು ಕೊಲ್ಲಿಸಲಾಯಿತು. ಸ್ವಾತಂತ್ರಾನಂತರ ಸಂಘಪರಿವಾರ ದೇಶವನ್ನು ವಿಭಜಿಸಲು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಾ ಬಂದಿದೆ. ರಾಮಜನ್ಮಭೂಮಿ, ಗೋಮಾತೆ, ಭಯೋತ್ಪಾದನೆ, ಉಗ್ರವಾದ, ಕಾಶ್ಮೀರ ಪಂಡಿತರು ಹೀಗೆ...ಜನರನ್ನು ಭಾವನಾತ್ಮಕವಾಗಿ ಒಡೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಇದೀಗ ಅದು, ಈ ದೇಶದೊಳಗೆ ಯಾರು ಭಾರತೀಯರು, ವಲಸಿಗರು ಎಂಬ ಹೊಸ ಅಂಕಿಅಂಶಗಳ ಮೂಲಕ ಜನರನ್ನು ಪರಸ್ಪರ ಒಡೆದು ಅವರನ್ನು ಸಂಘರ್ಷಕ್ಕೆ ಇಳಿಸುವ ಪ್ರಯತ್ನವನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಈಶಾನ್ಯ ಭಾಗದಲ್ಲಿ ನಾಗರಿಕರು ಮತ್ತು ವಲಸಿಗರು ಎಂಬ ಹೆಸರಿನಲ್ಲಿ ಅಂಕಿ ಅಂಶಗಳನ್ನು ಪ್ರಕಟಿಸಿ ಜನರನ್ನು ಪರಸ್ಪರ ಸರಕಾರವೇ ಕಾದಾಟಕ್ಕೆ ಇಳಿಸಲು ಹೊರಟಿದೆ.

ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್‌ಆರ್‌ಸಿ)ನ ಅಂತಿಮ ಪರಿಷ್ಕೃತ ಕರಡನ್ನು ಸೋಮವಾರ ಅಸ್ಸಾಮಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಎನ್‌ಆರ್‌ಸಿ ಕರಡು ಅಸ್ಸಾಂ ಒಪ್ಪಂದಕ್ಕೆ ಅನುಗುಣವಾಗಿದೆ ಮತ್ತು ಎನ್‌ಆರ್‌ಸಿಗೆ ಅಂದಿನ ರಾಜೀವ್‌ಗಾಂಧಿಯವರೇ ಪೀಠಿಕೆ ಹಾಕಿದ್ದರು ಎನ್ನುವುದನ್ನು ಇಂದು ಬಿಜೆಪಿ ಹೇಳುತ್ತಿದೆಯಾದರೂ, ಬಿಜೆಪಿ ಮತ್ತು ಸಂಘಪರಿವಾರ ಈ ಎನ್‌ಆರ್‌ಸಿಯನ್ನು ದೇಶದಲ್ಲಿ ಜನರನ್ನು ಒಡೆಯುವ ಕೆಲಸದ ಭಾಗವಾಗಿ ಬಳಸಿಕೊಂಡಿರುವುದು ಈಗಾಗಲೇ ಬಯಲಾಗಿದೆ. ಅಸ್ಸಾಮಿನಲ್ಲಿ ವಲಸಿಗರು ಮತ್ತು ಮೂಲನಿವಾಸಿಗಳು ಎಂಬ ಭೇದವನ್ನು ಉಲ್ಬಣಗೊಳಿಸಿ, ಕೋಮುಗಲಭೆಗೆ ಕುಮ್ಮಕ್ಕು ನೀಡಿದ್ದ ಬಿಜೆಪಿ, ಇದೀಗ ಅದಕ್ಕೆ ತುಪ್ಪ ಸುರಿಯಲು ಎನ್‌ಆರ್‌ಸಿಯನ್ನು ದುರುಪಯೋಗಗೊಳಿಸುತ್ತಿದೆ. ಇಂದು ಅಸ್ಸಾಮಿನಲ್ಲಿ ಸಂಘಪರಿವಾರ ಯಾರನ್ನು ವಲಸಿಗರು ಎಂದು ಹಣೆ ಪಟ್ಟಿ ಅಂಟಿಸಲು ಸರ್ವ ಪ್ರಯತ್ನವನ್ನು ನಡೆಸುತ್ತಿದೆಯೋ ಅವರೆಲ್ಲರೂ ಅಕ್ರಮವಾಗಿ ನುಸುಳಿ ಈ ದೇಶವನ್ನು ನಾಶ ಮಾಡಲು ಬಂದವರಲ್ಲ. ಹಲವು ದಶಕಗಳ ಹಿಂದೆಯೇ ಕಾರ್ಮಿಕರಾಗಿ ವಲಸೆ ಬಂದವರು ಮತ್ತು ಹಲವು ತಲೆಮಾರುಗಳಿಂದ ಅವರಲ್ಲಿ ಬದುಕುತ್ತಿದ್ದಾರೆ.

ಅಮೆರಿಕದಲ್ಲಿ ಹತ್ತು ವರ್ಷ ಬದುಕಿ, ಬಳಿಕ ಆ ದೇಶದ ನಾಗರಿಕತೆಗಾಗಿ ಅರ್ಜಿ ಹಾಕುವ ಲಕ್ಷಾಂತರ ಅನಿವಾಸಿ ಭಾರತೀಯರು ಇದ್ದಾರೆ. ಇದೇ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾಗಿ ಈ ದೇಶಕ್ಕೆ ವಲಸೆ ಬಂದು ಎರಡು ತಲೆಮಾರುಗಳಿಂದ ಈ ನೆಲದಲ್ಲಿ ಭಾರತೀಯರಾಗಿ ಬದುಕುತ್ತಿರುವ ಜನರನ್ನು ವಲಸಿಗರು, ವಿದೇಶಿಯರು ಎಂದು ಗುರುತಿಸಲು ಹೊರಟಿರುವುದು ವಿಪರ್ಯಾಸವೇ ಸರಿ. ಇದು ಈಶಾನ್ಯ ಭಾರತವನ್ನು ಒಡೆಯುವ ಬಿಜೆಪಿಯ ಇನ್ನೊಂದು ಸಂಚಾಗಿದೆ. ಈಗಾಗಲೇ ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಆಡಳಿತ ನಡೆಸಿ ಅಲ್ಲಿನ ರಾಜಕೀಯವನ್ನು ರಾಡಿ ಎಬ್ಬಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಇದೀಗ ಈಶಾನ್ಯ ಭಾರತದ ಕಡೆಗೆ ತನ್ನ ದೃಷ್ಟಿಯನ್ನು ಹರಿಸಿದೆ. ಎನ್‌ಆರ್‌ಸಿಯ ಅಂತಿಮ ಉದ್ದೇಶ, ಅಸ್ಸಾಮಿನ ರಾಜಕೀಯವನ್ನು ವಲಸೆಗಾರರು ಮತ್ತು ಮೂಲನಿವಾಸಿಗಳು ಎಂದು ಸ್ಪಷ್ಟವಾಗಿ ವಿಂಗಡಿಸುವುದು. ಆ ಮೂಲಕ ಸ್ಥಳೀಯರನ್ನು ಎನ್‌ಆರ್‌ಸಿ ದಾಖಲೆಯಲ್ಲಿಲ್ಲದವರ ವಿರುದ್ಧ ಎತ್ತಿ ಕಟ್ಟಿಸುವುದು. ಅಸ್ಸಾಮಿನಲ್ಲಿ ಇನ್ನೊಂದು ರೊಹಿಂಗ್ಯಾವನ್ನು ಸೃಷ್ಟಿಸಿ, ಜನಸಾಮಾನ್ಯರನ್ನು ಬೀದಿಪಾಲು ಮಾಡುವುದು. ರೋಹಿಂಗ್ಯಾ ಹಿಂಸಾಚಾರದಲ್ಲಿ ವಲಸಿಗರೆಂದು ಗುರುತಿಸಲ್ಪಟ್ಟವರು ಸುಮಾರು 20 ಲಕ್ಷ ಜನರಿದ್ದರೆ, ಅಸ್ಸಾಮಿನ ಪೌರತ್ವದಿಂದ ಹೊರಗಿರುವವರು 40 ಲಕ್ಷಕ್ಕೂ ಅಧಿಕ ಜನರು. ವಿಪರ್ಯಾಸವೆಂದರೆ ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದವರೂ ಈ ಬಾರಿ ಅಕ್ರಮ ವಲಸಿಗರಾಗಿ ಗುರುತಿಸಲ್ಪಡುತ್ತಿದ್ದಾರೆ. ಆಧಾರ್ ದಾಖಲೆಗಳಿದ್ದವರ ಹೆಸರುಗಳೂ ಕರಡಿನಿಂದ ಬಿಟ್ಟು ಹೋಗಿವೆೆ. ಎಲ್ಲಕ್ಕಿಂತ ದುರಂತವೆಂದರೆ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಕುಟುಂಬದವರ ಹೆಸರುಗಳೂ ಈ ಪಟ್ಟಿಯಲ್ಲಿ ಕಾಣುತ್ತಿಲ್ಲ.

ಇವರ ಸ್ಥಿತಿಯೇ ಹೀಗಿದ್ದ ಮೇಲೆ, ಕೂಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಸ್ಥಿತಿ ಹೇಗಿರಬಹುದು? ಆಧಾರ್ ಕಾರ್ಡ್‌ಗಳಿಲ್ಲದೆ ರೇಷನ್ ಪಡೆಯಲು ಅಸಾಧ್ಯವಾಗಿ ಮೃತಪಟ್ಟ ಹಲವು ಘಟನೆಗಳನ್ನು ನಾವು ದೇಶಾದ್ಯಂತ ನೋಡಿದ್ದೇವೆ. ಆಧಾರ್ ಕಾರ್ಡ್ ಬಿಡಿ, ವೋಟರ್ ಐಡಿ, ರೇಶನ್‌ಕಾರ್ಡ್‌ಗಳೂ ಇಲ್ಲದೆ ಅನಾಮಿಕರಾಗಿ ಬದುಕುತ್ತಿರುವ ಕೂಲಿ ಕಾರ್ಮಿಕರು ದೇಶದಲ್ಲಿ ಲಕ್ಷಾಂತರ ಜನರಿದ್ದಾರೆ. ಅವರು ಗ್ರಾಮಗಳಲ್ಲಿ, ಕೊಳೆಗೇರಿಗಳಲ್ಲಿ, ನಗರಗಳ ಸಂದುಗಳಲ್ಲಿ ಸದ್ದಿಲ್ಲದೆ ಜೀವಿಸುತ್ತಿದ್ದಾರೆ. ಅವರನ್ನೆಲ್ಲ ಭಾರತೀಯರಲ್ಲ ಎಂದು ಸರಕಾರ ಹೇಳುತ್ತದೆಯೇ? ಅವರನ್ನು ಗುರುತಿಸಿ ಅವರಿಗೆ ಭಾರತೀಯತೆಯ ದಾಖಲೆಗಳನ್ನು ಒದಗಿಸುವುದು ಸರಕಾರದ ಕರ್ತವ್ಯವೇ ಹೊರತು, ಅವರನ್ನು ಭಾರತೀಯರಲ್ಲವೆಂದು ಸುಟ್ಟು ಕೊಂದು ಹಾಕುವುದಲ್ಲ. ನಾಲ್ಕು ದಶಕಗಳಿಂದ ಒಂದು ರಾಜ್ಯದಲ್ಲಿ ಬದುಕುತ್ತಿರುವ ಜನರನ್ನು ಯಾವುದೋ ದಾಖಲೆಗಳು ಸರಿಯಾಗಿಲ್ಲ ಎಂಬ ನೆಪ ತೆಗೆದು ಅವರಿಂದ ನಾಗರಿಕತೆಯನ್ನು ಕಿತ್ತುಕೊಳ್ಳಲು ಹೊರಡುವುದು, ಹಿಟ್ಲರ್ ಯಹೂದಿಗಳನ್ನು ಸರ್ವನಾಶ ಮಾಡಲು ಬಳಸಿದ ತಂತ್ರದ ಮುಂದುವರಿದ ಭಾಗವಾಗಿದೆ.

ಆದರೆ ಇದರಿಂದ ಭಾರತಕ್ಕೆ ಒಳಿತಾಗುವ ಬದಲು ತೀವ್ರ ಕೆಡುಕಾಗಲಿದೆ. ಬಾಂಗ್ಲಾದ ಅಕ್ರಮ ವಲಸಿಗರಿಂದ ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತವೆ ಎನ್ನುವುದು ದಶಕಗಳಿಂದ ಕೇಳಿ ಬರುತ್ತಿರುವ ರಾಜಕೀಯ ಆರೋಪಗಳಾಗಿವೆ. ಇದರಲ್ಲಿ ಸತ್ಯ ಇಲ್ಲದಿಲ್ಲ. ಆದರೆ ಅದಕ್ಕಾಗಿ ಅಸ್ಸಾಮಿನಲ್ಲಿ ಹಲವು ದಶಕಗಳಿಂದ ಬದುಕು ಸವೆಸಿಕೊಂಡು ಬರುತ್ತಿರುವ ಕೂಲಿ ಕಾರ್ಮಿಕರನ್ನು ಉಗ್ರರಾಗಿ ಗುರುತಿಸಿ ಅವರ ವಿರುದ್ಧ ದಾಳಿ ನಡೆಸುವುದು ಪರೋಕ್ಷವಾಗಿ ಭಾರತದ ಮೇಲೆಯೇ ದಾಳಿ ನಡೆಸಿದಂತೆ. ಇದು ದೇಶದಲ್ಲಿ ಉಗ್ರವಾದ, ಹಿಂಸೆಯನ್ನು ಹೆಚ್ಚಿಸಬಹುದೇ ಹೊರತು, ದೇಶವನ್ನು ಶಾಂತಿ, ಅಹಿಂಸೆಯೆಡೆಗೆ ಮುನ್ನಡೆಸಲಾರದು. ಬಹುಶಃ ಸಂಘಪರಿವಾರಕ್ಕೂ ತನ್ನ ಅಜೆಂಡಾ ಸಾಧಿಸಲು ಈ ಹಿಂಸಾಚಾರದ ತುರ್ತು ಅಗತ್ಯವಿದೆ. ಆ ಅಗತ್ಯವನ್ನು ಪೂರೈಸುವುದಕ್ಕಾಗಿಯೇ ಎನ್‌ಆರ್‌ಸಿ ಮೂಲಕ ಅಸ್ಸಾಮಿನ ಆತ್ಮಕ್ಕೆ ಘಾಸಿ ಮಾಡ ಹೊರಟಿದ್ದಾರೆ. ಜನರ ಮನಸ್ಸನ್ನು ಒಡೆದು ಈಶಾನ್ಯ ಭಾರತವನ್ನು ವಿಭಜಿಸಲು ಸಿದ್ಧರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News