ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ

Update: 2018-08-02 12:09 GMT

ಕರ್ನಾಟಕದ ಕೆಲವೆಡೆ ಅತಿವೃಷ್ಟಿಯಿಂದ ಆಸ್ತಿಪಾಸ್ತಿಗಳಿಗೆ ನಷ್ಟವುಂಟಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ತೀವ್ರ ಮಳೆಯ ಅಭಾವ ಉಂಟಾಗಿದೆ. ಇಂತಹ 12 ಜಿಲ್ಲೆಗಳನ್ನು ಗುರುತಿಸಿ ಪರಿಹಾರ ಕ್ರಮಗಳಿಗೆ ಯೋಜನೆ ರೂಪಿಸುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಉತ್ತರಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಇನ್ನೊಂದು ತಿಂಗಳಲ್ಲಿ ಮಳೆ ಬೀಳದಿದ್ದರೆ ಬರಗಾಲದ ಕರಾಳ ಛಾಯೆ ಕವಿಯುವ ಲಕ್ಷಣ ಇದೆ. ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಜೂನ್, ಜುಲೈ ತಿಂಗಳಲ್ಲಿ ಬೀಳಬೇಕಾದಷ್ಟು ಮಳೆ ಬಿದ್ದಿಲ್ಲ. ಶೇ.50ರಷ್ಟು ಮಳೆಯ ಕೊರತೆ ಕಂಡುಬರುತ್ತಿದೆ. ಹೈದರಾಬಾದ್ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಭಾವ ಉಂಟಾಗಿದೆ. ಮುಂಗಾರು ಆರಂಭವಾಗಿ ಎರಡು ತಿಂಗಳು ಗತಿಸಿದರೂ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದ ರೈತರಲ್ಲಿ ಆತಂಕ ಉಂಟಾಗಿರುವುದು ಸಹಜ. ಹಳ್ಳ, ಕೊಳ್ಳ, ಕೆರೆಗಳಲ್ಲಿ ಕೂಡಾ ಹನಿ ನೀರು ಇಲ್ಲದಂತಾಗಿದೆ. ಪ್ರಾಣಿ ಪಕ್ಷಿಗಳು ಕೂಡಾ ನೀರಿಲ್ಲದೆ ಕಂಗಾಲಾಗುವಂತಹ ಪರಿಸ್ಥಿತಿ ಇದೆ.

ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆಯ ಆರು ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ಶೇ.80ರಷ್ಟು ಪ್ರದೇಶದಲ್ಲಿ ಬಿತ್ತನೆಯನ್ನು ಮಾಡಲಾಗಿದೆ. ಮಳೆ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಜನ ಆಕಾಶದತ್ತ ಮುಖಮಾಡಿ ನಿಂತಿದ್ದಾರೆ. ಆದರೆ, ಜನರ ನಿರೀಕ್ಷೆ ಹುಸಿಯಾಗುತ್ತಿದೆ. ಮೇ ತಿಂಗಳ ಕೊನೆಯಲ್ಲಿ ಮತ್ತು ಜೂನ್ ಮೊದಲ ವಾರದಲ್ಲಿ ಒಂದಿಷ್ಟು ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆಯ ಸುಳಿವಿಲ್ಲ. ಹೈದರಾಬಾದ್ ಕರ್ನಾಟಕದ ಪ್ರಮುಖ ನದಿಗಳಾದ ಕಾಜಿನ, ಮುಳ್ಳಾಮಾರಿ, ಕಮಲಾವತಿ, ಅಮರ್ಜಾ ಮತ್ತು ಭೀಮಾ ನದಿಗಳು ಒಣಗಿ ಹೋಗಿವೆ. ಮಳೆಯಾಗುತ್ತದೆ ಎಂದು ಭೂಮಿಗೆ ಬೀಜ ಮತ್ತು ಗೊಬ್ಬರ ಸುರಿದ ರೈತರು ಕಂಗಾಲಾಗಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಯಂತೆ 120 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಈಗ ಶೇ.60ರಷ್ಟು ಮಳೆಯ ಕೊರತೆ ಕಂಡು ಬರುತ್ತಿದೆ. ಕಲಬುರಗಿ ಮಾತ್ರವಲ್ಲ ವಿಜಯಪುರದ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿಯೂ ಮಳೆಯ ಅಭಾವ ಎದ್ದುಕಾಣುತ್ತಿದೆ. ಕುಡಿಯುವ ನೀರಿಗೆ ಜನ ಬವಣೆ ಪಡುತ್ತಿದ್ದಾರೆ. ಉತ್ತರ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಕರ್ನಾಟಕದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂದು ವರದಿಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೋಮವಾರ ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಸೂಕ್ತ ಪರಿಹಾರವನ್ನು ನೀಡುವ ಸಲುವಾಗಿ ವಿಪತ್ತು ನಿರ್ವಹಣೆ ಮಾರ್ಗಸೂಚಿಗೆ ತಿದ್ದುಪಡಿ ತರಲಾಗುವುದು ಎಂದು ಅವರು ಹೇಳಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿರುವ ಪ್ರದೇಶಗಳಲ್ಲಿ ವಿವಿಧ ರೀತಿಯ ನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು. ಈ ನಿಟ್ಟಿನಲ್ಲಿ ರಾಜ್ಯಸರಕಾರವು ವಿಪತ್ತು ನಿರ್ವಹಣಾ ನಿಧಿಗೆ ಈಗಾಗಲೇ 43 ಕೋಟಿ ರೂ. ಬಿಡುಗಡೆ ಮಾಡಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬರಗಾಲದ ಭೀತಿ ಉಂಟಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರ್ಯಾಯ ಯೋಜನೆಯ ಬಗ್ಗೆ ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ. ಉತ್ತರಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಈ ರೀತಿ ಬಿಗಡಾಯಿಸಿದ್ದರೆ, ಕೆಲ ಅತೃಪ್ತ ರಾಜಕಾರಣಿಗಳು ಮುಖ್ಯವಾಗಿ ಬಿಜೆಪಿಗೆ ಸೇರಿದವರು ಪ್ರತ್ಯೇಕ ಉತ್ತರ ಕರ್ನಾಟಕದ ಅಪಸ್ವರ ತೆಗೆದಿದ್ದಾರೆ. ಬಳ್ಳಾರಿಯ ಗಣಿಗಾರಿಕೆಯಿಂದ ಸಾವಿರಾರು ಕೋಟಿ ರೂ. ದೋಚಿದವರು ಮತ್ತು ಬಿಜೆಪಿಯ ಕೆಲ ಅತೃಪ್ತ ನಾಯಕರು ಈ ಪ್ರತ್ಯೇಕತೆಯ ಧ್ವನಿಯ ಹಿಂದೆ ಇದ್ದಾರೆ. ಒಂದೆಡೆ ಈ ಪ್ರತ್ಯೇಕತೆಯ ಧ್ವನಿ ಕೇಳಿ ಬರುತ್ತಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮನಗರದಲ್ಲಿ ಆಡಿದರೆನ್ನಲಾದ ಮಾತನ್ನು ಮಾಧ್ಯಮಗಳು ಪ್ರಚೋದಕವಾಗಿ ಬಿಂಬಿಸಿದ್ದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಬರಗಾಲದ ಭೀತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಹೋಗಬೇಕಾದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಪ್ರತ್ಯೇಕ ಉತ್ತರ ಕರ್ನಾಟಕ ಚಳವಳಿಗೆ ಒಳಗಿಂದೊಳಗೇ ಪ್ರಚೋದನೆ ನೀಡುತ್ತಾ ಸಮ್ಮಿಶ್ರ ಸರಕಾರವನ್ನು ಉರುಳಿಸುವ ಮಾತನ್ನು ಆಡುತ್ತಿದ್ದಾರೆ.

ಕರ್ನಾಟಕ ರಾಜ್ಯ ನಿರ್ಮಾಣವಾದ ಬಳಿಕ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅಭಿವೃದ್ಧಿ ಕಾರ್ಯದಲ್ಲಿ ಅನ್ಯಾಯವಾಗಿದೆ ಎಂಬುದು ನಿಜ. ಅದಕ್ಕೆ ಉತ್ತರ ಕರ್ನಾಟಕದಿಂದ ಗೆದ್ದುಬಂದ ಮಂತ್ರಿಗಳು ಮತ್ತು ಶಾಸಕರು ಕಾರಣರಲ್ಲದೆ, ಬೇರಾರೂ ಅಲ್ಲ. ಉತ್ತರ ಕರ್ನಾಟಕದಿಂದ ಗೆದ್ದು ಬಂದ ಸುಮಾರು 100 ಮಂದಿ ಶಾಸಕರು ಈ ಭಾಗದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡುವುದೇ ಇಲ್ಲ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ಆ ಭಾಗದಿಂದ ಗೆದ್ದು ಬರುವ ಬಹುತೇಕ ಶಾಸಕರು ಬೆಂಗಳೂರಿನಲ್ಲಿ ಮನೆ ಕಟ್ಟಿಸಿ, ರಾಜಧಾನಿಯಲ್ಲೇ ಶಾಶ್ವತವಾಗಿ ನೆಲೆಯೂರುತ್ತಾರೆ. ಸಭೆ ಸಮಾರಂಭಗಳಿಗೆ ಮತ್ತು ಚುನಾವಣೆ ಬಂದಾಗ ಮಾತ್ರ ತಮ್ಮ ಮತಕ್ಷೇತ್ರಗಳಿಗೆ ಹೋಗುತ್ತಾರೆ ಎಂಬ ಆರೋಪವೂ ಇದೆ. ಈ ರೀತಿ ಉತ್ತರಕರ್ನಾಟಕ ಕಡೆಗಣಿಸಲ್ಪಡಲು ಅಲ್ಲಿನ ಜನಪ್ರತಿನಿಧಿಗಳು ಕಾರಣವೆಂದರೆ ಅತಿಶಯೋಕ್ತಿಯಲ್ಲ. ಹೀಗೆ ಉತ್ತರಕರ್ನಾಟಕ ಪ್ರತ್ಯೇಕತೆಗಾಗಿ ಜನರನ್ನು ಪ್ರಚೋದಿಸುತ್ತಿರುವ ಬಿಜೆಪಿ ನಾಯಕರು ಮಹಾದಾಯಿ ಯೋಜನೆಗಾಗಿ ಧಾರವಾಡ ಜಿಲ್ಲೆಯ ರೈತರು ಹೋರಾಟ ನಡೆಸಿದಾಗ ವರ್ತಿಸಿದ ರೀತಿ ಎಲ್ಲರಿಗೂ ಗೊತ್ತಿದೆ. ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಿ ತಮ್ಮದೇ ಪಕ್ಷದ ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಕರೆದು ಸಂಧಾನ ಮಾತುಕತೆ ನಡೆಸಿದ್ದರೆ ಮಹಾದಾಯಿ ಸಮಸ್ಯೆ ಎಂದೋ ಇತ್ಯರ್ಥವಾಗುತ್ತಿತ್ತು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋದರೂ ಆಗ ಪ್ರಧಾನಿ ಸ್ಪಂದಿಸಲಿಲ್ಲ. ಆ ನಿಯೋಗದಲ್ಲಿದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ವೌನವಾಗಿದ್ದರು. ಈಗ ಅವರಿಗೆ ಒಮ್ಮಿಂದೊಮ್ಮೆಲೇ ಉತ್ತರಕರ್ನಾಟಕದ ಬಗ್ಗೆ ಕಾಳಜಿ ಉಂಟಾಗಿದೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕರ್ನಾಟಕ ರಾಜ್ಯವನ್ನು ವಿಭಜಿಸುವ ಪ್ರಯತ್ನ ಎರಡೂ ಕಡೆ ನಡೆದಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಉತ್ತರಕರ್ನಾಟಕದ ಜನರನ್ನು ರಾಜ್ಯ ಸರಕಾರದ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿರುವುದು ಖಂಡನೀಯವಾಗಿದೆ. ಬಿಜೆಪಿ ನಾಯಕರು ಇನ್ನು ಮುಂದಾದರೂ ಪ್ರತ್ಯೇಕತಾ ಚಟುವಟಿಕೆಗಳಿಗೆ ಪ್ರಚೋದನೆ ನೀಡದೆ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಬೇಕು. ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಈ ಬಾರಿ ಮಳೆಯ ಅಭಾವ ಎದ್ದುಕಾಣುತ್ತಿರುವುದು ಕಳವಳಕಾರಿ ಸಂಗತಿಯಾಗಿರುವುದರಿಂದ ಬರ ಪರಿಹಾರಕ್ಕಾಗಿ ಕೇಂದ್ರದ ನೆರವನ್ನು ಪಡೆಯಲು ರಾಜ್ಯ ಸರಕಾರದ ಜೊತೆಗೆ ಸಹಕರಿಸಬೇಕು. ಬರಪರಿಹಾರದಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು. ಕರ್ನಾಟಕ ಈ ವರ್ಷ ಬಹಳ ವಿಚಿತ್ರ ಸನ್ನಿವೇಶವನ್ನು ಎದುರಿಸುತ್ತಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನರಿಗೆ ಅತಿವೃಷ್ಟಿಯಿಂದ ತೊಂದರೆಯಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದ ಜನರು ತೊಂದರೆಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜಕಾರಣಿಗಳು ಜನರ ನೆರವಿಗೆ ಧಾವಿಸಬೇಕಾಗಿದೆ. ಇತ್ತೀಚೆಗೆ ತಾನೇ ಚುನಾವಣೆ ಮುಗಿದಿದೆ. ಜನತೆ ತಮ್ಮ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಗೆ ಇದು ಇಷ್ಟವಿಲ್ಲದಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಸಮರ್ಥ ಪ್ರತಿಪಕ್ಷವಾಗಿ ಸರಕಾರದ ಲೋಪದೋಷಗಳನ್ನು ಬಯಲಿಗೆಳೆಯಬೇಕು. ಆದರೆ, ಸರಕಾರವನ್ನು ಉರುಳಿಸುವ ಚಟವಟಿಕೆಯಲ್ಲಿ ತೊಡಗಿರುವುದು ಸರಿಯಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆ ಕೈಬಿಟ್ಟು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿರುವ ಜನರ ನೆರವಿಗೆ ಎಲ್ಲ ಪಕ್ಷಗಳೂ ಒಂದಾಗಿ ಧಾವಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News