ಉತ್ತರ ಕರ್ನಾಟಕ ಬಂದ್ ಎನ್ನುವ ವಿಫಲ ನಾಟಕ

Update: 2018-08-03 04:32 GMT

ಅನಗತ್ಯ ಬಂದ್ ಒಂದನ್ನು ರಾಜ್ಯದ ಮೇಲೆ ಹೇರಲು ಹೋಗಿ, ಬಿಜೆಪಿ ಮುಖಭಂಗ ಅನುಭವಿಸಿದೆ. ಸರಕಾರವನ್ನು ಮುಜುಗರಕ್ಕೀಡು ಮಾಡುವ, ಇಕ್ಕಟ್ಟಿಗೆ ಸಿಲುಕಿಸುವ ಒಂದೇ ಒಂದು ಉದ್ದೇಶದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರಹಸನವೊಂದನ್ನು ಬಿಜೆಪಿ ಹಮ್ಮಿಕೊಂಡಿತ್ತು. ಈ ಮೂಲಕ ರಾಜ್ಯದಲ್ಲಿ ಅರಾಜಕತೆ ಉಂಟು ಮಾಡಿ ಸರಕಾರಕ್ಕೆ ತೊಂದರೆ ಕೊಡುವುದು ಅದರ ಉದ್ದೇಶ. ಒಂದೆಡೆ ಬಿಜೆಪಿಯ ಮುಖಂಡರು ‘‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲ’’ ಎನ್ನುತ್ತಲೇ, ಮಗದೊಂದು ದಿಕ್ಕಿನಿಂದ ಉತ್ತರ ಕರ್ನಾಟಕದ ಜನರನ್ನು ರಾಜ್ಯದ ವಿರುದ್ಧ ಎತ್ತಿ ಕಟ್ಟಲು ಹವಣಿಸಿದ್ದರು. ಗುರುವಾರ ನಡೆದ ಉತ್ತರ ಕರ್ನಾಟಕ ಬಂದ್‌ನ ನೇತೃತ್ವವನ್ನು ಬಿಜೆಪಿಯ ನಾಯಕರೇ ವಹಿಸಿದ್ದರು. ಅಖಂಡ ಕರ್ನಾಟಕದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ, ಬೆಂಗಳೂರಿನಲ್ಲಿ ನೆಲೆಸಿದ ಬಿಜೆಪಿ ನಾಯಕರು ಬಂದ್ ಘೋಷಿಸಿದ ಬಿಜೆಪಿ ನಾಯಕರ ಜೊತೆಗೆ ಅಂತರ ಕಾಯ್ದು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಹವಣಿಸಿದರು.

ಒಂದು ವೇಳೆ ಅಂತಹ ಹೇಳಿಕೆ ತಪ್ಪು ಎನ್ನುವುದು ಬಿಜೆಪಿ ಮುಖಂಡರ ಅನಿಸಿಕೆಯಾಗಿದ್ದರೆ, ಪ್ರತ್ಯೇಕ ಕರ್ನಾಟಕಕ್ಕಾಗಿ ಧ್ವನಿಯೆತ್ತಿದ ಬಿಜೆಪಿ ಶಾಸಕರನ್ನು ಕರೆದು ಅವರಿಗೆ ಎಚ್ಚರಿಕೆ ನೀಡಬೇಕಾಗಿತ್ತು ಮತ್ತು ಯಾವ ಕಾರಣಕ್ಕೂ ಬಂದ್‌ಗೆ ಬೆಂಬಲ ನೀಡಬಾರದು ಎಂದು ಹೇಳಬೇಕಾಗಿತ್ತು. ಅಷ್ಟೇ ಅಲ್ಲ, ಬಂದ್ ಬೇಡ ಎಂದು ಪತ್ರಿಕಾಗೋಷ್ಠಿ ಮಾಡಬೇಕಾಗಿತ್ತು. ಆದರೆ ಅದಾವುದನ್ನೂ ಮಾಡದೆ, ‘ಉತ್ತರ ಕರ್ನಾಟಕ ಪ್ರತ್ಯೇಕವಾಗುವುದನ್ನು ಬೆಂಬಲಿಸುವುದಿಲ್ಲ’ ಎಂಬ ಒಂದು ವಾಕ್ಯದ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸಿದರು. ಈ ನಿಟ್ಟಿನಲ್ಲಿ ಇಂದಿನ ಬಂದ್ ಕಳಂಕವನ್ನು ರಾಜ್ಯ ಬಿಜೆಪಿಯೇ ಹೊತ್ತುಕೊಳ್ಳಬೇಕಾಗಿದೆ. ತಕ್ಷಣದ ರಾಜಕೀಯ ಲಾಭಕ್ಕಾಗಿ ರಾಜ್ಯದ ವಿರುದ್ಧ ಸ್ವತಃ ರಾಜ್ಯದೊಳಗಿರುವ ಬಿಜೆಪಿಯೇ ಸಂಚು ನಡೆಸಿದರೆ, ಇನ್ನು ಬೆಳಗಾವಿಗಾಗಿ ಮಹಾರಾಷ್ಟ್ರ, ಕಾವೇರಿಗಾಗಿ ತಮಿಳು ನಾಡು, ಕಾಸರಗೋಡಿಗಾಗಿ ಕೇರಳ ರಾಜಕೀಯ ಮಾಡಿದರೆ ಅದರಲ್ಲೇನಿದೆ ತಪ್ಪು? ಹುಯಿಲಗೋಳ ನಾರಾಯಣ ರಾವ್, ಆಲೂರು, ಶ್ರೀಕಂಠಯ್ಯರಂತಹ ಹಿರಿಯ ಕನ್ನಡಪ್ರೇಮಿಗಳ ಶ್ರಮದಿಂದ ನಿರ್ಮಾಣವಾದ ಕರ್ನಾಟಕವನ್ನು ಒಡೆಯಲು ಕನ್ನಡದ ಹಾಲುಂಡು ಬೆಳೆದವರೇ ಮುಂದಾಗುತ್ತಿರುವುದು ರಾಜ್ಯದ ದುರಂತವಾಗಿದೆ.

ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯಗಳು ಕಿರಿದಾಗುವುದು ದೊಡ್ಡ ಅಪರಾಧವೇನೂ ಅಲ್ಲ. ಆದರೆ ಉತ್ತರ ಕರ್ನಾಟಕ ಇಂದು ಅಭಿವೃದ್ಧಿಯಾಗದೇ ಇರುವುದಕ್ಕೆ ನಿಜಕ್ಕೂ ಕಾರಣರು ಯಾರು? ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿಯಿತೇ? ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿರುವ ಹಲವು ನಾಯಕರು ರಾಜ್ಯವನ್ನಾಳಿದ್ದಾರೆ. ರಾಜ್ಯ ಸರಕಾರದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಹೀಗಿರುವಾಗ, ಬರೇ ದಕ್ಷಿಣ ಕರ್ನಾಟಕವೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಡೆಯಾಗಿದೆ ಎಂದು ನಂಬಿಸಿ, ರಾಜ್ಯವನ್ನು ವಿಂಗಡಿಸುವುದು ಉತ್ತರ ಕರ್ನಾಟಕಕ್ಕೆ ರಾಜಕಾರಣಿಗಳು ಮಾಡುವ ವಂಚನೆಯಾಗಿದೆ.

ಉತ್ತರ ಕರ್ನಾಟಕ ಹಿಂದುಳಿಯಲು ಅದನ್ನು ಪ್ರತಿನಿಧಿಸಿದ ಜನನಾಯಕರೇ ಕಾರಣ ಹೊರತು, ದಕ್ಷಿಣ ಕರ್ನಾಟಕ ಅಲ್ಲ. ಉತ್ತರ ಕರ್ನಾಟಕದಲ್ಲಿ ಅತ್ಯಂತ ಬಲಾಢ್ಯ, ಅತ್ಯಂತ ಶ್ರೀಮಂತ, ಕರ್ನಾಟಕ ರಾಜ್ಯ ರಾಜಕೀಯವನ್ನೇ ನಿಯಂತ್ರಿಸುವ, ದಿಲ್ಲಿಯ ನಾಯಕರಿಗೆ ಕೋಟಿ ಕೋಟಿ ಕಪ್ಪಗಳನ್ನು ಕೊಡುವ ತಾಕತ್ತುಳ್ಳ ನಾಯಕರಿದ್ದಾರೆ. ಇವರೆಲ್ಲ ಆ ದುಡ್ಡನ್ನು ಹೇಗೆ ಸಂಪಾದಿಸಿದರು? ಉತ್ತರ ಕರ್ನಾಟಕ ನಿಜಕ್ಕೂ ಬಡತನದಲ್ಲಿ ನರಳುತ್ತಿದೆ ಎಂದರೆ ರೆಡ್ಡಿ ಸಹೋದರರು, ಶ್ರೀರಾಮುಲುವಿನಂತಹ ನಾಯಕರು, ಜಾರಕಿಹೊಳಿ ಸಹೋದರರು ಈ ಪಾಟಿ ಶ್ರೀಮಂತರಾದುದು ಹೇಗೆ? ಬಳ್ಳಾರಿಯ ಎದೆಯನ್ನು ಬಗೆದು, ಅಕ್ರಮ ಗಣಿಗಾರಿಕೆಯಿಂದ ಉತ್ತರ ಕರ್ನಾಟಕವನ್ನು ದೋಚಿದವರು ಉತ್ತರ ಕರ್ನಾಟಕದ ನಾಯಕರೇ ಆಗಿದ್ದಾರೆ. ಕೋತಿ ಬೆಣ್ಣೆ ಕದ್ದು ಮೇಕೆಯ ಮುಖಕ್ಕೆ ಒರೆಸಿದಂತೆ, ಇಡೀ ಉತ್ತರ ಕರ್ನಾಟಕವನ್ನು ಸರ್ವನಾಶಗೈದು, ಇದೀಗ ಅಲ್ಲಿನ ನಾಯಕರು ದಕ್ಷಿಣ ಕರ್ನಾಟಕದ ಮೇಲೆ ಗೂಬೆಯನ್ನು ಕೂರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಯಾಕೆ ಬಡತನದಿಂದ ಕೂಡಿದೆ ಮತ್ತು ನೀವೇಕೆ ಇಷ್ಟು ಶ್ರೀಮಂತರಾಗಿ ಮೆರೆಯುತ್ತಿದ್ದೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕಾದುದು ಶ್ರೀರಾಮುಲು ಮತ್ತು ಅವರ ಗೆಳೆಯರು. ಆದರೆ ಉತ್ತರ ನೀಡಬೇಕಾದವರೇ, ಪ್ರತ್ಯೇಕ ಉತ್ತರ ಕರ್ನಾಟಕದ ಹೆಸರಿನಲ್ಲಿ ಬಂದ್‌ಗಿಳಿದು ಅಲ್ಲಿನ ಜನರನ್ನು ಮೂರ್ಖರಾಗಿಸಲು ಹೊರಟಿದ್ದಾರೆ.

  ಇಷ್ಟಕ್ಕೂ ಬಿಜೆಪಿ ಅಧಿಕಾರದಲ್ಲಿದ್ದಾಗ ಅದು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆಯಾದರೂ ಏನು? ಅದನ್ನಾದರೂ ಯಡಿಯೂರಪ್ಪ ರಾಜ್ಯದ ಮುಂದಿಡಬೇಕು. ಸುಶ್ಮಾ ಸ್ವರಾಜ್‌ಗೆ ಪ್ರತಿ ವರ್ಷ ರೆಡ್ಡಿ ಸಹೋದರರು ಸೂಟ್‌ಕೇಸ್‌ನಲ್ಲಿ ತುಂಬಿಸಿ ರವಾನಿಸಿದ ಹಣ ಯಾರದು? ಉತ್ತರ ಕರ್ನಾಟಕದ್ದಲ್ಲವೇ? ಅಲ್ಲಿಯ ಜನರನ್ನು ಶೋಷಣೆ ಮಾಡಿ ಸಂಗ್ರಹಿಸಿದ ಹಣವಲ್ಲವೇ? ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಹಲವು ನಾಯಕರು ಉನ್ನತ ಹುದ್ದೆಯನ್ನು ಹೊಂದಿದ್ದರು. ಧರರ್ಂಸಿಂಗ್ ಈ ನಾಡಿನ ಮುಖ್ಯಮಂತ್ರಿಯಾದರು. ಖರ್ಗೆಯವರು ಅತ್ಯುತ್ತಮ ಸ್ಥಾನವನ್ನು ಕಾಂಗ್ರೆಸ್‌ನಲ್ಲಿ ಹೊಂದಿದ್ದಾರೆ. ಹೀಗಿರುವಾಗ ರಾಜಕೀಯವಾಗಿ ಉತ್ತರ ಕರ್ನಾಟಕವನ್ನು ಮೂಲೆಗೊತ್ತಲಾಗಿದೆ ಎನ್ನುವುದು ತಪ್ಪಾಗುತ್ತದೆ. ಉತ್ತರ ಕರ್ನಾಟಕದಿಂದ ಪ್ರತಿನಿಧಿಸುವ ಸಂಸದರು, ಶಾಸಕರು ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ. ಆದರೂ ಇವರೆಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ವಿಫಲವಾದುದು ಯಾಕೆ? ಅಥವಾ ಇವರಿಗೇ ಉತ್ತರ ಕರ್ನಾಟಕ ಅಭಿವೃದ್ಧಿಯಾಗುವುದು ಬೇಕಾಗಿಲ್ಲವೇ? ಒಂದು ವೇಳೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಯಿತು ಎಂದೇ ಇಟ್ಟುಕೊಳ್ಳೋಣ. ಆಗಲೂ ಆ ರಾಜ್ಯವನ್ನು ಪ್ರತಿನಿಧಿಸುವವರು ಇದೇ ಸಂಸದರು, ಇದೇ ಶಾಸಕರೇ ಆಗಿದ್ದಾರೆ. ಉತ್ತರ ಕರ್ನಾಟಕವನ್ನು ದೋಚಿದ ರೆಡ್ಡಿ ಸಹೋದರರು ಅಲ್ಲಿನ ರಾಜಕೀಯದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಾರೆ. ಇಂತಹ ನಾಯಕರು ಉತ್ತರ ಕರ್ನಾಟಕವನ್ನು ಉದ್ಧರಿಸಲು ಸಾಧ್ಯವೇ? ಇಷ್ಟಕ್ಕೂ ಈ ರೆಡ್ಡಿ ಸಹೋದರರು ಒಂದು ಕಾಲನ್ನು ಆಂಧ್ರದ ಮೇಲೂ, ಇನ್ನೊಂದು ಕಾಲನ್ನು ಬಳ್ಳಾರಿಯ ಮೇಲೂ ಇಟ್ಟುಕೊಂಡಿರುವವರು. ಕರ್ನಾಟಕ ಉದ್ಧಾರವಾಗಿ ಇವರಿಗೇನೂ ಆಗಬೇಕಾಗಿಲ್ಲ.

ಇದರ ಜೊತೆಗೆ ಬಿಜೆಪಿಯ ಹಲವು ನಾಯಕರು ಮಹಾರಾಷ್ಟ್ರದ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಕರ್ನಾಟಕ ಇಬ್ಭಾಗವಾಗುವುದು ಮಹಾರಾಷ್ಟ್ರಕ್ಕೂ ಬೇಕಾಗಿದೆ. ಅವರ ಜೊ ಸೇರಿಕೊಂಡು ಕರ್ನಾಟಕ ಒಡೆಯಲು ಸಂಚು ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಕೇಳಿ ಬಂದುದು ಉತ್ತರ ಕರ್ನಾಟಕದಿಂದ. ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಸಂಘಪರಿವಾರಕ್ಕೆ ಬೇಕಾಗಿಲ್ಲ. ಲಿಂಗಾಯತರು ಸ್ವತಂತ್ರವಾದರೆ, ಅದು ಆರೆಸ್ಸೆಸ್‌ನ ಬ್ರಾಹ್ಮಣ್ಯ ರಾಜಕೀಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ಚಳವಳಿಯ ದಿಕ್ಕು ತಪ್ಪಿಸುವುದಕ್ಕಾಗಿಯೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುವ ಕೃತಕ ಬೇಡಿಕೆಯೊಂದನ್ನು ಸೃಷ್ಟಿಸಲಾಗಿದೆ. ಉತ್ತರ ಕರ್ನಾಟಕದ ಜನರನ್ನು ಒಂದು ರೀತಿಯಲ್ಲಿ ಬಿಜೆಪಿ ಗೊಂದಲಗೊಳಿಸಿದೆ. ಇದೇ ಸಂದರ್ಭದಲ್ಲಿ ಈ ಗದ್ದಲಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೊಡುಗೆ ಇಲ್ಲದೇ ಇಲ್ಲ. ಒಬ್ಬ ಮುಖ್ಯಮಂತ್ರಿ ಮಾತನಾಡುವಾಗ, ನಾಲಗೆ ಜಾರದಂತೆ ಜಾಗೃತವಹಿಸಬೇಕು. ಭಾವೋದ್ವೇಗದ ಮಾತುಗಳು ಕೆಲವೊಮ್ಮೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಇಂತಹದೇ ಗಳಿಗೆಯಲ್ಲಿ ಕುಮಾರಸ್ವಾಮಿಯವರು ತಮ್ಮ ಶತ್ರುಗಳಿಗೆ ಅನಾಯಾಸವಾಗಿ ಆಹಾರವಾಗಿದ್ದಾರೆ. ರಾಜಕಾರಣಿಯಾಗಿ ಕುಮಾರಸ್ವಾಮಿ ತನ್ನ ತಂದೆಯಿಂದ ಕಲಿಯುವುದು ಇನ್ನಷ್ಟು ಇದೆ. ಇಲ್ಲವಾದರೆ, ದೇವೇಗೌಡರ ರಾಜಕೀಯ ಬದುಕು ಮುಗಿಯುವುದಕ್ಕೆ ಮುನ್ನವೇ ಕುಮಾರಸ್ವಾಮಿಯ ರಾಜಕೀಯ ಬದುಕು ಮುಗಿದು ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News