ಆ.10 ರಿಂದ ಪದವಿ ಶಿಕ್ಷಣ ಪುನಶ್ಚೇತನ ಕುರಿತ ವಿಚಾರ ಸಂಕಿರಣ

Update: 2018-08-03 13:17 GMT

ಬೆಂಗಳೂರು, ಆ.3: ‘ಭಾರತದಲ್ಲಿ ಪದವಿ ಶಿಕ್ಷಣ ಪುನಶ್ಚೇತನ’ ವಿಷಯ ಕುರಿತು ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಸಂಸ್ಥೆ(ಸೆಸ್), ನ್ಯಾಕ್ ಸಂಸ್ಥೆ, ಭಾರತೀಯ ವಿದ್ಯಾಲಯ ಸಂಘ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆ.10 ಮತ್ತು 11 ರಂದು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಜೆ.ಆರ್.ಡಿ.ಟಾಟಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಸ್‌ನ ಅಧ್ಯಕ್ಷ ಪ್ರೊ.ಎಂ.ಕೆ.ಶ್ರೀಧರ್, ವಿಚಾರ ಸಂಕಿರಣದಲ್ಲಿ ಪದವಿ ಶಿಕ್ಷಣದ ಪುನರುಜ್ಜೀವನ ಸಕಾರಾತ್ಮಕ, ರಚನಾತ್ಮಕ ಹಾಗೂ ಕಲ್ಪನಾತ್ಮಕವಾದುದಾಗಿದೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಶಿಕ್ಷಕರು, ವಿದ್ಯಾರ್ಥಿಗಳು, ಸಂಸ್ಥೆಯ ನಿರ್ವಾಹಕರು, ನೀತಿ ನಿರೂಪಕರನ್ನು ಇಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಪಠ್ಯಕ್ರಮ, ಪರೀಕ್ಷಾ ವಿಧಾನ, ಪಾಠ ಹೇಳುವ ರೀತಿ, ಕೌಶಲ್ಯವನ್ನು ಪಠ್ಯದಲ್ಲಿ ಜೋಡಿಸುವುದು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ವಿಚಾರಗಳಾಗಿ ಕಾರ್ಯಕ್ರಮ ಕೇಂದ್ರೀಕರಿಸುತ್ತದೆ. ಸೃಜನಾತ್ಮಕ ರೀತಿಯಲ್ಲಿ ಶಿಕ್ಷಣವನ್ನು ಬದಲಿಸುವುದು ವಿಚಾರ ಸಂಕಿರಣದ ಉದ್ದೇಶವಾದ್ದರಿಂದ ‘ರಿಜುವ್ ಐಡಿಯ ಕಾಂಕ್ಲೇವ್’ ಎಂಬ ಪ್ರಾಯೋಗಿಕ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಪದವಿ ಶಿಕ್ಷಣದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಿಗೆ ಸೃಜನಾತ್ಮಕವಾಗಿ ಪರಿಹಾರಗಳನ್ನು ಪ್ರಸ್ತುತ ಪಡಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ವಿಚಾರ ಸಂಕಿರಣವನ್ನು ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಕೆ.ಕಸ್ತೂರಿ ರಂಗನ್ ಉದ್ಘಾಟಿಸಲಿದ್ದು, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಮುಖ್ಯ ನಿರ್ದೇಶಕ ಡಾ.ಎಸ್.ಎ.ಕೋರಿ, ಯುಜಿಸಿ ಮುಖ್ಯಸ್ಥ ಪ್ರೊ.ಡಿ.ಪಿ.ಸಿಂಗ್, ಭಾರತೀಯ ವಿದ್ಯಾಲಯದ ಸಂಘದ ಮುಖ್ಯ ಕಾರ್ಯದರ್ಶಿ ಡಾ.ಫರಕನ್ ಕಮರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News