ಎರಡನೆ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಸಿಎಂ ಕುಮಾರಸ್ವಾಮಿ ಆಹ್ವಾನ

Update: 2018-08-03 13:23 GMT

ಬೆಂಗಳೂರು, ಆ. 3: ಬಂಡವಾಳ ಹೂಡಿಕೆದಾರರು ರಾಜ್ಯದ ಎರಡನೆ ಮತ್ತು ಮೂರನೆ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು. ಇದಕ್ಕೆ ರಾಜ್ಯ ಸರಕಾರ ಅಗತ್ಯ ರೀತಿಯ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ‘ಬೆಂಗಳೂರು ಟೆಕ್ ಸಮ್ಮಿಟ್-2018’ರ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಐಟಿ-ಬಿಟಿ ಕಂಪೆನಿಗಳ ಸಿಇಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಎರಡನೆ ಹಾಗೂ ಮೂರನೆ ಹಂತದ ನಗರಗಳಲ್ಲಿ ಉದ್ಯಮಗಳ ಸ್ಥಾಪನೆಯ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಲು ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ಈ ನಗರಗಳಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ. ಕೌಶಲ್ಯ ತರಬೇತಿಗೂ ಆದ್ಯತೆ ನೀಡಲಿದ್ದು, ಆಯವ್ಯಯದಲ್ಲಿ ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಈ ಭಾಗದಲ್ಲಿ ಉದ್ಯಮಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ವಿವಿಧ ಕಂಪೆನಿಗಳ ಮುಖ್ಯಸ್ಥರ ಸಲಹೆಗಳನ್ನು ಆಲಿಸಿದ ಸಿಎಂ ಕುಮಾರಸ್ವಾಮಿ, ಸರಕಾರವು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಿದ್ಧವಿದೆ. ಕೈಗಾರಿಕೆಗಳ ಸ್ಥಾಪನೆಗಿರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿ ಕಚೇರಿಯಲ್ಲಿಯೇ ವಿಶೇಷ ಘಟಕ ಸ್ಥಾಪಿಸಲಾಗುವುದು ಎಂದರು.

ರಾಜ್ಯ ಸರಕಾರವು ಈ ವರ್ಷ ಆಯವ್ಯಯದಲ್ಲಿ ಘೋಷಿಸಿದಂತೆ ಚೀನಾದೊಂದಿಗೆ ಆರೋಗ್ಯಕರ ಸ್ಪರ್ಧೆ ಎಂಬ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದೆ. ಬೀದರ್‌ನಲ್ಲಿ ಕೃಷಿಗೆ ಪೂರಕ ಯಂತ್ರೋಪಕರಣಗಳ ತಯಾರಿಕೆ, ಕಲಬುರಗಿಯಲ್ಲಿ ಸೌರ ವಿದ್ಯುತ್ ಉಪಕರಣಗಳ ಉದ್ಯಮ, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿತ್ರದುರ್ಗದಲ್ಲಿ ಎಲ್ಇಡಿ ಹೀಗೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕೆಗಳ ಕ್ಲಸ್ಟರ್ ಸ್ಥಾಪಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ರೀತಿ ಪ್ರೋತ್ಸಾಹ ನೀಡಲಾಗುವುದು ಎಂದರು.

‘ಕರ್ನಾಟಕ ಇನ್ನೋವೇಷನ್ ಹಬ್’ ಎಂದು ಹೆಸರಾಗಿದೆ. ಈ ವಲಯಕ್ಕೆ ಬೆಂಬಲ ನೀಡಲು, ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಇನ್ನೊವೇಷನ್ ಅಥಾರಿಟಿಯನ್ನು ಸ್ಥಾಪಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬೃಹತ್ ಕೈಗಾರಿಕೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಐಟಿ-ಬಿಟಿ ಉದ್ಯಮಗಳ ಬೆಳವಣಿಗೆಗೆ ರಾಜ್ಯ ಸರಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಶ್ರೀನಿವಾಸ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಎಂ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕರ್ನಾಟಕ ಐಟಿ ವಿಷನ್ ಗ್ರೂಪ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದ ಉದ್ಯಮಶೀಲತೆ ಅಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಆದ್ಯತೆ ನೀಡಲು ಉದ್ದೇಶಿಸಿದ್ದು, ಈ ಕಾರ್ಯಕ್ಕೆ ಐಟಿ-ಬಿಟಿ ವಲಯದ ದಿಗ್ಗಜರು ಅಗತ್ಯ ಬೆಂಬಲ ನೀಡಬೇಕು’
-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News