ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ: ಕೇಂದ್ರ ಸರಕಾರ ಕ್ರಮ ಖಂಡಿಸಿ ಆ.4ರಂದು ಪ್ರತಿಭಟನೆ

Update: 2018-08-03 13:30 GMT

ಬೆಂಗಳೂರು, ಆ.3: ಬಂಡೀಪುರ ಸಂರಕ್ಷಿತ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರದ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಆ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸುವಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಪತ್ರ ಬರೆದಿದ್ದು, ಈ ಕುರಿತು ತಕ್ಷಣ ಅಭಿಪ್ರಾಯ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಸಂಚಾರಕ್ಕೆ ಅವಕಾಶ ನೀಡಲು ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.

ಸಂಚಾರ ನಿಷೇಧಿಸಿದ ಬಳಿಕ ವನ್ಯಜೀವಿಗಳಿಗೆ ತೊಂದರೆಯಾಗದಂತೆ ತಡೆಯುವ ಸಲುವಾಗಿ ಪರ್ಯಾಯ ರಸ್ತೆಯಾಗಿ ಮೇಲುಸೇತುವೆ ನಿರ್ಮಾಣ ಮಾಡುವ ಸಲಹೆ ನೀಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ರಸ್ತೆಯ ಮೂಲಕ ವಾಹನ ಸಂಚಾರ ಮಾಡುವುದರಿಂದ ಪ್ರಾಣಿಗಳು ಸಾಯುತ್ತಿವೆ. ಆದರೆ, ಮೇಲುಸೇತುವೆ ಮಾಡುವುದರಿಂದ ಪ್ರಾಣಿಗಳು ಇನ್ನೂ ಹೆಚ್ಚಿನ ತೊಂದರೆಗೆ ಒಳಗಾಗುತ್ತವೆ. ಮೇಲು ಸೇತುವೆ ಮೇಲೆ ಸಂಚಾರ ಮಾಡುವ ವಾಹನಗಳ ಬೆಳಕು ಇಡೀ ಅರಣ್ಯದ ಮೇಲೆ ಬಿದ್ದು, ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದು ಅವರು ಹೇಳಿದರು. ಕೇರಳ ಸರಕಾರ ನಿಷೇಧ ಹಿಂಪಡೆಯಬೇಕು ಎಂದು ಕರ್ನಾಟಕ ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ. ಈಗಾಗಲೇ ಅನೇಕ ಬಾರಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಈಗ ಇರುವ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ನಿಷೇಧವನ್ನು ಜಾಸ್ತಿ ಮಾಡಿ ಸಂಜೆ 6 ರವರೆಗೆ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ಯಾವುದೇ ಕಾರಣಕ್ಕೂ ಸಂಚಾರ ಮುಕ್ತ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ಒಕ್ಕೂಟದ ವತಿಯಿಂದ ಆ.4 ರಂದು ಮಲ್ಲೇಶ್ವರಂ 18 ನೆ ಕ್ರಾಸ್‌ನಲ್ಲಿರುವ ಅರಣ್ಯ ಇಲಾಖೆ ಕಾರ್ಯಾಲಯದ ಮುಂದೆ ತಮಟೆ ಚಳವಳಿ ಹಾಗೂ ಆ.12 ರವಿವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News