ಪಾಕ್: ಪ್ರಮುಖ ಪಕ್ಷಗಳ ಮೈತ್ರಿ; ಇಮ್ರಾನ್ ಖಾನ್ ವಿರುದ್ಧ ಸ್ಪರ್ಧೆ

Update: 2018-08-03 14:41 GMT

ಇಸ್ಲಾಮಾಬಾದ್ ಆ.3: ಮೈತ್ರಿ ಏರ್ಪಡಿಸಿಕೊಂಡಿರುವ ಪಾಕಿಸ್ತಾನದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ), ಸಂಸತ್ತಿನಲ್ಲಿ ಪ್ರಧಾನಿ ಹುದ್ದೆಗೆ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಘೋಷಿಸಿವೆ.

ಈ ಮೂಲಕ ಈ ಪಕ್ಷಗಳು, ಕಳೆದ ವಾರದ ಚುನಾವಣೆಯಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಸವಾಲೊಡ್ಡಿದ್ದಾರೆ.

ಈ ಮಿತ್ರಕೂಟಕ್ಕೆ ಹಲವಾರು ಸಣ್ಣ ಪಕ್ಷಗಳು ಕೈಜೋಡಿಸಿವೆಯಾದರೂ, ಪ್ರಧಾನಿ ಹುದ್ದೆಗೆ ಆಯ್ಕೆಗೊಳ್ಳುವುದರಿಂದ ಇಮ್ರಾನ್ ಖಾನ್‌ರನ್ನು ತಡೆಯುವುದು ಅಸಂಭವ ಎನ್ನಲಾಗಿದೆ. ಆದರೆ, ಇದರಿಂದ ಇಮ್ರಾನ್‌ರ ಬಹುಮತ ಕಡಿಮೆಯಾಗುತ್ತದೆ ಹಾಗೂ ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸುವುದು ಅವರಿಗೆ ಕಷ್ಟವಾಗುತ್ತದೆ.

ಪಾಕಿಸ್ತಾನದ ಸಂಸತ್ತು ನ್ಯಾಶನಲ್ ಅಸೆಂಬ್ಲಿಯ 272 ಚುನಾಯಿತ ಸ್ಥಾನಗಳಲ್ಲಿ ಇಮ್ರಾನ್‌ರ ಪಕ್ಷ 116 ಸ್ಥಾನಗಳನ್ನು ಗೆದ್ದಿದೆ. ಸರಕಾರ ರಚಿಸಲು ಅವರಿಗೆ ಹಲವು ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಅದೇ ವೇಳೆ, ಚುನಾವಣೆಯಲ್ಲಿ ಸೇನೆ ಹಸ್ತಕ್ಷೇಪ ನಡೆಸಿದೆ ಎಂಬುದಾಗಿ ಗುರುವಾರವೂ ಆರೋಪಿಸಿರುವ ಪ್ರಮುಖ ಎದುರಾಳಿ ಪಕ್ಷಗಳು, ಇಮ್ರಾನ್ ಖಾನ್ ಪ್ರಧಾನಿಯಾಗಿ ಆಯ್ಕೆಯಾಗುವುದನ್ನು ತಡೆಯಲು ಯತ್ನಿಸುವುದಾಗಿ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News