ಯೋಜಿತ ಹತ್ಯಾ ಪ್ರಯತ್ನ: ಎಲ್ಲ ರಾಜಕೀಯ ಪಕ್ಷಗಳಿಗೂ ಸವಾಲು!

Update: 2018-08-04 04:40 GMT

ಕನ್ನಡನಾಡಿನ ಕೆಲವು ಶ್ರೇಷ್ಠ ಬರಹಗಾರರನ್ನು, ಧರ್ಮಗುರುಗಳನ್ನು ಗುರಿಯಾಗಿಸಿಕೊಂಡು ಕೆಲವರು ರೂಪಿಸಿದ್ದ ಯೋಜಿತ ಸಂಚೊಂದನ್ನು ಕರ್ನಾಟಕ ಸರಕಾರದ ವಿಶೇಷ ತನಿಖಾ ದಳ ಈಚೆಗೆ ಬೆಳಕಿಗೆ ತಂದಿದೆ. ಹೃದಯವಿರುವ ಯಾರಿಗೇ ಆದರೂ ಈ ಪಟ್ಟಿ ನೋಡಿದರೆ ಅವರಲ್ಲಿ ದಿಗ್ಭ್ರಮೆ ಹುಟ್ಟದಿರದು. ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ವಿಕಾಸಗೊಂಡಿರುವ ಇಂಥ ದೊಡ್ಡ ಚಿಂತಕರನ್ನು ಹಿಂಸೆಗೆ ಗುರಿ ಮಾಡಲೆತ್ನಿಸಿರುವ ಈ ಅಮಾನುಷ ಬೆಳವಣಿಗೆಯ ಬಗ್ಗೆ ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಲೇಖಕ ಗಿರೀಶ್ ಕಾರ್ನಾಡರು ಭಾರತದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಕರ್ನಾಟಕಕ್ಕೆ ತಂದುಕೊಟ್ಟವರು. ಭಾರತದಲ್ಲಿ ಮಾತ್ರವಲ್ಲ, ಭಾರತದ ಆಚೆಗಿನ ಜಗತ್ತಿನಲ್ಲಿಯೂ ಕರ್ನಾಟಕದ ಹೆಸರನ್ನು ನೆಲೆ ನಿಲ್ಲಿಸಿದವರು.

ಚಂದ್ರಶೇಖರ ಪಾಟೀಲರು ತುರ್ತುಪರಿಸ್ಥಿತಿಯನ್ನು ದಿಟ್ಟವಾಗಿ ವಿರೋಧಿಸಿ ಜೈಲಿಗೆ ಹೋದವರು. ಹೀಗೆ ಆ ಕಾಲದಲ್ಲಿ ಜೈಲಿಗೆ ಹೋದವರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ, ಎಲ್. ಕೆ. ಅಡ್ವಾಣಿ, ಅಟಲ್‌ಬಿಹಾರಿ ವಾಜಪೇಯಿ ಥರದ ರಾಜಕಾರಣಿಗಳೂ ಇದ್ದರು. ಚಂಪಾ ಎಂದೇ ಖ್ಯಾತರಾಗಿರುವ ಕವಿ ಪ್ರೊ. ಚಂದ್ರಶೇಖರ ಪಾಟೀಲರು ನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದವರು. ಪ್ರೊ. ಕೆ.ಎಸ್. ಭಗವಾನ್ ಶೇಕ್ಸ್ ಪಿಯರ್‌ನ ಕೃತಿಗಳನ್ನು ಕನ್ನಡಕ್ಕೆ ತಂದವರು ಹಾಗೂ ಕುವೆಂಪು ಮಾರ್ಗದ ವೈಚಾರಿಕ ಪರಂಪರೆಯನ್ನು ಮುಂದುವರಿಸಿದವರು. ಚಂಪಾ ಹಾಗೂ ಭಗವಾನ್ ಹಲವು ದಶಕಗಳ ಕಾಲ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಿದ್ದಾರೆ. ಭಗವಾನ್ ಕೆಲವೊಮ್ಮೆ ಕೊಂಚ ತೂಕ ತಪ್ಪಿದ ವಿವಾದಾಸ್ಪದವಾದ ಹೇಳಿಕೆಗಳನ್ನು ನೀಡಿದ್ದರೂ, ಮುಕ್ತ ಚರ್ಚೆಗೆ ಸದಾ ಸಿದ್ಧರಾಗಿರುವವರು. ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳು ದಲಿತರು ಹಾಗೂ ಪ್ರಗತಿಪರರ ಪರವಾಗಿ ಕೆಲಸ ಮಾಡುತ್ತಾ ಬಂದಿರುವ ಹಾಗೂ ಧಾರ್ಮಿಕ ಸುಧಾರಣೆಗಳಲ್ಲಿ ಮುಂಚೂಣಿಯಲ್ಲಿರುವ ಜಾತ್ಯತೀತ ಸ್ವಾಮೀಜಿಗಳಲ್ಲಿ ಮುಖ್ಯರು. ಲೇಖಕಿ ಬಿ. ಟಿ. ಲಲಿತಾನಾಯಕ್ ಶೋಷಿತ ಲಂಬಾಣಿ ಸಮುದಾಯದಿಂದ ಬಂದು ಮುಖ್ಯ ಕನ್ನಡ ಲೇಖಕಿಯಾಗಿ ಬೆಳೆದು ಮುಂದೆ ಜನತಾದಳದಿಂದ ಶಾಸಕರಾಗಿ ಆರಿಸಿಬಂದವರು. ಲಂಬಾಣಿ ಸಮುದಾಯದ ಹಾಗೂ ದಲಿತರ ಏಳಿಗೆಗಾಗಿ ನಿರಂತರ ಕೆಲಸ ಮಾಡಿದವರು. ಡಾ. ಸಿ. ಎಸ್. ದ್ವಾರಕಾನಾಥ್ ಕೈವಾರ ತಾತಯ್ಯನವರ ಮೇಲೆ ಆಳವಾದ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ವಕೀಲರು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಉತ್ತಮ ಶಿಫಾರಸುಗಳನ್ನು ಮಾಡಿದವರು. ಬಂಜಗೆರೆ ಜಯಪ್ರಕಾಶ್ ನಾಡಿನ ಹೆಮ್ಮೆಯ ಕವಿ ಹಾಗೂ ದುಡಿಯುವ ವರ್ಗದ ಜೊತೆ ಸದಾ ಹೋರಾಟ ಮಾಡುತ್ತಾ ಬಂದಿದ್ದಾರೆ. ಇವರೆಲ್ಲರ ಜೊತೆಗೆ ಜನರನ್ನು ವಿಚಾರವಂತರಾಗಿ ಮಾಡುತ್ತಿರುವ ನಾಡಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕರ ಮೇಲೆ ಈಗಾಗಲೇ ಯೋಜಿತ ಹಲ್ಲೆಯ ಪ್ರಯತ್ನಗಳಾಗಿವೆ. ಈ ಎಲ್ಲರೂ ಕರ್ನಾಟಕದ ಒಟ್ಟಾರೆ ಪ್ರಗತಿಗೆ, ಸಾಮಾಜಿಕ ನ್ಯಾಯದ ವಲಯಕ್ಕೆ ಹಾಗೂ ಚಿಂತನೆಗೆ ಅತ್ಯಂತ ಗಣನೀಯ ಕೊಡುಗೆ ಕೊಟ್ಟವರು. ಕರ್ನಾಟಕದ ದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ, ದುರ್ಬಲರ ಪರವಾಗಿ, ಒಟ್ಟಾರೆಯಾಗಿ ಸಾಮಾಜಿಕ ನ್ಯಾಯದ ಪರವಾಗಿ ಗಟ್ಟಿಯಾಗಿ ನಿಂತವರು. ಈ ಚಿಂತಕರ ವಿಚಾರಗಳ ಬಗ್ಗೆ ಕೆಲವರಿಗೆ ಭಿನ್ನಾಭಿಪ್ರಾಯಗಳಿರಬಹುದು. ಅವರ ವಿಚಾರಗಳನ್ನು ಒಪ್ಪುವ, ತಿರಸ್ಕರಿಸುವ, ಖಂಡಿಸುವ ಹಕ್ಕು ಎಲ್ಲರಿಗೂ ಇದೆ.

ಈವರೆಗೆ ಎಲ್ಲ ಬಗೆಯ ಉಗ್ರ ಹಾಗೂ ಹೀನ ಟೀಕೆಗಳನ್ನೂ ಈ ಎಲ್ಲರೂ ಉದಾರ ಮನಸ್ಸಿನಿಂದ ಸ್ವೀಕರಿಸಿದ್ದಾರೆ ಹಾಗೂ ಇವರಲ್ಲಿ ಯಾರೂ ಹಿಂಸೆಯ ಭಾಷೆಯನ್ನು ಎಂದೂ ಬಳಸಿಲ್ಲ. ಜೊತೆಗೆ, ಅವರ ಕೊಡುಗೆಯನ್ನು ಇಡೀ ದೇಶ ಪುರಸ್ಕರಿಸಿದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಬೇಕು. ಇಂತಹ ದೊಡ್ಡ ಚಿಂತಕರ ವಿರುದ್ಧ ಭೀಕರ ಹತ್ಯಾ ಸಂಚು ರೂಪಿಸಲು ಇರುವ ಕಾರಣಗಳೇನು ಎಂಬುದನ್ನು ಮುಂದಿನ ತನಿಖೆಗಳು ಹೊರಗೆಡಹಬಹುದು. ಆದರೆ ಕರ್ನಾಟಕದ ಚಳವಳಿಗಳು ಹಾಗೂ ಸಾಂಸ್ಕೃತಿಕ ವಲಯಗಳು ಈ ಅಪಾಯಕರ ಬೆಳವಣಿಗೆಗಳನ್ನು ಕುರಿತು ದೊಡ್ಡ ಮಟ್ಟದಲ್ಲಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಎಲ್ಲ ವಲಯದ ಸೂಕ್ಷ್ಮಜ್ಞರೂ ಕಳಕಳಿಯಿಂದ ಹೇಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಎಲ್ಲ ರಾಜಕೀಯ ಪಕ್ಷಗಳ ರಾಜಕಾರಣಿಗಳೂ ಈ ತರದ ಯೋಜಿತ ಹಿಂಸೆ ತಮ್ಮ ಬುಡಕ್ಕೂ ಬರಲಿದೆ ಎಂಬ ಅಪಾಯದ ಕರೆಗಂಟೆಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು.

ಕಾಶ್ಮೀರದಲ್ಲಿ ಇಂತಹ ಅನೇಕ ಗುಂಪುಗಳ ಹಿಂಸೆ ಹೆಚ್ಚಾಗಿರುವುದರಿಂದಲೇ ಅಲ್ಲಿ ಚುನಾವಣೆ ನಡೆಸುವುದು ಕೂಡ ಕಷ್ಟವಾಗಿದೆ ಎಂಬ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಎಚ್ಚರವಿರಬೇಕು. ಯಾಕೆಂದರೆ ಈ ಬಗೆಯ ಸಂಚಿನಲ್ಲಿ ಭಾಗಿಯಾಗಿರುವವರು ಒಂದು ಗುಂಪಿನ ಅಥವಾ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ. ಅಂದರೆ, ಈ ಪ್ರಯತ್ನಗಳ ಹಿಂದೆ ಧರ್ಮದ ಮುಸುಕು ಹೊದ್ದ ರಾಜಕೀಯ ಸಂಚು ಪ್ರಬಲವಾಗಿಯೇ ಇರುವಂತೆ ಕಾಣುತ್ತಿದೆ. ಇದಕ್ಕೆ ಪ್ರತಿ ಸಂಚುಗಳೂ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಆಗ ಇಡೀ ಕರ್ನಾಟಕವು ತಾಲಿಬಾನ್ ರೀತಿ ಆಗುವ ಸಂಭವವಿರುತ್ತದೆ. ಈ ರೀತಿಯ ಬೆಳವಣಿಗೆಗಳು ಒಂದು ವಲಯದಲ್ಲಿ ಶುರುವಾದರೆ ಅವು ವಿಜ್ಞಾನ, ಸಿನೆಮಾ, ರಾಜಕೀಯ ಮುಂತಾಗಿ ಎಲ್ಲ ವಲಯಗಳಿಗೂ ಹಬ್ಬುವುದು ಖಂಡಿತ. ಆದ್ದರಿಂದ ಈ ಬಗೆಯ ಯೋಜಿತ ಹತ್ಯೆಯ ಪ್ರಯತ್ನಗಳಿಗೆ ಕೊನೆ ಹೇಳಬೇಕೆಂಬ ಗಟ್ಟಿ ದನಿ ಎಲ್ಲ ವಲಯಗಳಿಂದಲೂ ಕೇಳಿ ಬರಬೇಕು.

ಈ ನಿಟ್ಟಿನಲ್ಲಿ ಜನಸಾಮಾನ್ಯರು ಹಾಗೂ ಸಾಮಾಜಿಕ ಚಳವಳಿಗಳ ಜೊತೆಜೊತೆಗೇ ಆಳುವ ಸರಕಾರ, ಬಿಜೆಪಿ, ಕಾಂಗ್ರೆಸ್, ಜನತಾದಳ, ಕಮ್ಯುನಿಸ್ಟ್ ಪಕ್ಷಗಳು, ಬಹುಜನ ಸಮಾಜ ಪಕ್ಷ ಮುಂತಾದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಕೂಡ ಒಟ್ಟಾಗಿ ಯೋಚಿಸಬೇಕು. ಅದರ ಜೊತೆಗೇ ಮುಗ್ಧ ತರುಣರು ತಮಗೆ ಅರಿವಿಲ್ಲದೆಯೇ ಇಂತಹ ಕುರುಡು ಹಿಂಸೆಯ ಯೋಜನೆಗಳಲ್ಲಿ ತೊಡಗಿ ಇನ್ನೂ ಆರಂಭವಾಗಬೇಕಾಗಿರುವ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳಬಾರದೆಂದು ಹಿರಿಯರು ಸದಾ ಎಚ್ಚರಿಸುತ್ತಿರಬೇಕು. ಯುವಕರನ್ನು ಎಳೆಯ ವಯಸ್ಸಿನಲ್ಲೇ ಹೀಗೆ ದಾರಿ ತಪ್ಪಿಸಿ ಅವರನ್ನು ಪ್ರಪಾತಕ್ಕೆ ತಳ್ಳುತ್ತಿರುವ ನಾಯಕರು ಈಗಲಾದರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜಕೀಯ ಪಕ್ಷಗಳು ಈ ಎಲ್ಲ ಪ್ರಯತ್ನಗಳಿಗೆ ಒಳಗೊಳಗೇ ಕುಮ್ಮಕ್ಕು ಕೊಡುವುದನ್ನು ಮೊದಲು ನಿಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News