ನಾಸಾ ಖಾಸಗಿ ಬಾಹ್ಯಾಕಾಶ ನೌಕೆ ತಂಡದಲ್ಲಿ ಸುನಿತಾ ವಿಲಿಯಮ್ಸ್

Update: 2018-08-04 04:42 GMT

ಹೂಸ್ಟನ್, ಆ. 4: ನಾಸಾದ ಮೊಟ್ಟಮೊದಲ ಮಾನವ ಬಾಹ್ಯಾಕಾಶ ವಿಮಾನ ಯೋಜನೆಗೆ ಆಯ್ಕೆ ಮಾಡಿರುವ ಒಂಬತ್ತು ಮಂದಿ ಬಾಹ್ಯಾಕಾಶಯಾನಿಗಳ ಪೈಕಿ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸೇರಿದ್ದಾರೆ.

2011ರಲ್ಲಿ ಬಾಹ್ಯಾಕಾಶ ನೌಕೆ ಯೋಜನೆಯಿಂದ ಹೊರಬಂದ ಬಳಿಕ ಮೊಟ್ಟಮೊದಲ ಬಾರಿಗೆ ನಾಸಾ ಮತ್ತೆ ಮಾನವ ಬಾಹ್ಯಾಕಾಶ ವಿಮಾನ ಯೋಜನೆ ಕೈಗೆತ್ತಿಕೊಂಡಿದೆ.

ಹಲವು ವರ್ಷಗಳ ಕಾಲ ವಾಹನ ಅಭಿವೃದ್ಧಿ ಮತ್ತು ನಿರ್ಮಾಣದ ನಿರೀಕ್ಷೆಯಲ್ಲಿ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಇದೀಗ ವಾಣಿಜ್ಯ ಸಿಬ್ಬಂದಿ ಬಾಹ್ಯಾಕಾಶ ನೌಕೆಯಲ್ಲಿ ತಂತ್ರಜ್ಞರನ್ನು ಕಳುಹಿಸಲಿದೆ.

ಒಂಬತ್ತು ಮಂದಿ ಬಾಹ್ಯಾಕಾಶ ಯಾನಿಗಳು ಮೊದಲ ಸಿಬ್ಬಂದಿ ಪರೀಕ್ಷಾ ಹಾರಾಟವನ್ನು ಕೈಗೊಳ್ಳಲಿದ್ದಾರೆ. ಹೊಸ ವಾಣಿಜ್ಯ ಬಾಹ್ಯಾಕಾಶ ನೌಕೆಯನ್ನು ಬೋಯಿಂಗ್ ಕಂಪನಿ ಮತ್ತು ಸ್ಪೇಸ್‌ ಎಕ್ಸ್ ನಿರ್ಮಿಸಿ ನಿರ್ವಹಿಸುತ್ತದೆ ಎಂದು ನಾಸಾ ಪ್ರಕಟಿಸಿದೆ.

ನಾಸಾದ ಎಂಟು ಮಂದಿ ಬಾಹ್ಯಾಕಾಶ ಯಾನಿಗಳು ಮತ್ತು ಒಬ್ಬ ಮಾಜಿ ಯಾನಿ ಬೋಯಿಂಗ್ ಸಿಎಸ್‌ಟಿ-100 ಸ್ಟಾರ್‌ ಲೈನರ್ ಮತ್ತು ಸ್ಪೇಸ್‌ ಎಕ್ಸ್ ಡ್ರಾಗನ್‌ ಕ್ಯಾಪ್ಸೂಲ್ ಅನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸುವರು. ಇದು 2019ರಲ್ಲಿ ಆರಂಭವಾಗಲಿದೆ. ನಾಸಾ ಆಯ್ಕೆ ಮಾಡಿರುವ ಒಂಬತ್ತು ಮಂದಿಯ ಪೈಕಿ ನಾಲ್ವರು ಮೊದಲ ಬಾರಿಗೆ ಗಗನಯಾನ ಕೈಗೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News