ಪತ್ರಕರ್ತ ಬುಖಾರಿ ಹತ್ಯೆ ಆರೋಪಿ ಪ್ರತ್ಯಕ್ಷ !

Update: 2018-08-05 04:00 GMT

ಶ್ರೀನಗರ, ಆ. 5: ರೈಸಿಂಗ್ ಕಾಶ್ಮೀರ್ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣ ಆರೋಪಿ ಮತ್ತು ಕಳೆದ ಫೆಬ್ರವರಿಯಲ್ಲಿ ಶ್ರೀನಗರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಪಾಕಿಸ್ತಾನದ ನವೀದ್ ಜತ್, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರನೊಬ್ಬನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾನೆ.

ಶೋಪಿಯಾನ್‌ನಲ್ಲಿ 12 ಗಂಟೆಗಳ ಸುಧೀರ್ಘ ಕಾರ್ಯಾಚರಣೆಯಲ್ಲಿ ಹತನಾದ ವಕಾರ್ ಅಹ್ಮದ್ ಶೇಖ್‌ನ ಅಂತ್ಯಸಂಸ್ಕಾರದಲ್ಲಿ ಜತ್ ಪಾಲ್ಗೊಂಡಿದ್ದ ಎನ್ನಲಾಗಿದೆ. ವಕಾರ್ ಅಹ್ಮದ್, ಲಷ್ಕರ್ ಇ ತಯ್ಬಾ, ಅಲ್ ಬದರ್ ಮತ್ತು ಹಿಜ್‌ಬುಲ್‌ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗಳಿಗೆ ಕೆಲಸ ಮಾಡುತ್ತಿದ್ದ.

ಮಲಿಕ್‌ಗುಂಡ್ ಗ್ರಾಮದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ 20 ವರ್ಷದ ನವೀದ್ ಜತ್, ವಕಾರ್ ಅಹ್ಮದ್ ಶೇಖ್‌ಗೆ ಅಂತಿಮ ನಮನ ಸಲ್ಲಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆತ ಎಕೆ-47 ಬಂದೂಕು ಹಿಡಿದುಕೊಂಡಿದ್ದ ಎಂದು ಪಿಟಿಐ ವರದಿ ಮಾಡಿದೆ.

ಕಳೆದ ಕೆಲ ತಿಂಗಳುಗಳಿಂದ ಮೃತ ಉಗ್ರಗಾಮಿಗಳ ಅಂತ್ಯಸಂಸ್ಕಾರದ ವೇಳೆ ಭದ್ರತಾ ಪಡೆಗಳು, ಸಂಭಾವ್ಯ ಘರ್ಷಣೆ ತಪ್ಪಿಸುವ ದೃಷ್ಟಿಯಿಂದ ಅಲ್ಲಿಗೆ ಭೇಟಿ ನೀಡುತ್ತಿಲ್ಲ. ಇದರಿಂದ ಉಗ್ರಗಾಮಿ ಮುಖಂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ಶೇಖ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಹಲವು ಮಂದಿ ಉಗ್ರರ ಪೈಕಿ ಜತ್ ಕೂಡಾ ಒಬ್ಬ ಎನ್ನಲಾಗಿದೆ.

ಭದ್ರತಾ ಪಡೆ ಸ್ಥಳಕ್ಕೆ ಭೇಟಿ ನೀಡುವ ವೇಳೆಗೆ ಉಗ್ರಗಾಮಿಗಳು ಪರಾರಿಯಾಗಿದ್ದರು. ಪಾಕಿಸ್ತಾನದ ಮುಲ್ತಾನ್ ನಿವಾಸಿಯಾಗಿರುವ ನವೀದ್‌ನನ್ನು 2014ರ ಜೂನ್‌ನಲ್ಲಿ ಕುಲ್‌ಗಾಮ್‌ನ ಯರಿಪೋರಾದಲ್ಲಿ ಬಂಧಿಸಲಾಗಿತ್ತು. ರಾಜ್ಯದಲ್ಲಿ ಹಲವು ಮಂದಿಯ ಹತ್ಯೆ ಪ್ರಕರಣಗಳಲ್ಲಿ ಷಾಮೀಲಾದ ಆರೋಪವನ್ನು ಈತ ಎದುರಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News