ಕಟು ವಿಮರ್ಶೆಗೆ ತೆರಬೇಕಾದ ಬೆಲೆ

Update: 2018-08-05 18:51 GMT

ಈಗ ಮಾಧ್ಯಮವೆಂದರೆ ಪತ್ರಿಕೆ ಮಾತ್ರವಲ್ಲ, ಅದರ ವ್ಯಾಪ್ತಿ ವಿಸ್ತಾರವಾಗಿದೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮವೂ ಸೇರಿಕೊಂಡಿದೆ. ಡಿಜಿಟಲ್ ಪತ್ರಿಕೆಗಳು ಬಂದಿವೆ. ಸಾಮಾಜಿಕ ಜಾಲತಾಣವು ಕ್ರಿಯಾಶೀಲವಾಗಿದೆ. ಆದರೆ ಮಾಧ್ಯಮಗಳಲ್ಲಿ ಮೊದಲಿನ ಸ್ವಾತಂತ್ರದ ಗಾಳಿ ಬೀಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದರೆ, ತಮ್ಮ ನೌಕರಿ ಸುರಕ್ಷಿತವಾಗಿ ಉಳಿಯುವುದಿಲ್ಲ ಎಂಬ ಭೀತಿ ಮಾಧ್ಯಮ ಲೋಕದ ಎಲ್ಲೆಡೆ ಆವರಿಸಿದೆ.


ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. ಆದರೆ ಅಘೋಷಿತವಾಗಿ ಜಾರಿಯಾಗಿದೆ. ಪತ್ರಿಕಾ ಸ್ವಾತಂತ್ರವನ್ನು ನಿರ್ಬಂಧಿಸಿಲ್ಲ. ಆದರೆ ಮಾಧ್ಯಮಗಳ ಬಾಯಿಗೆ ಬೀಗ ಬಿದ್ದಿದೆ. ಜನರ ಪ್ರತಿಭಟನೆ ನಿಷೇಧಿಸಿಲ್ಲ. ಆದರೆ ಪ್ರತಿಭಟನೆಯ ಅವಕಾಶಗಳು ಕಡಿಮೆಯಾಗಿವೆ. ಪ್ರಜಾಪ್ರಭುತ್ವದ ಹೆಸರನ್ನು ಉಳಿಸಿಕೊಂಡೆ ಅದನ್ನು ನಾಶ ಮಾಡುವ ಮಸಲತ್ತು ನಡೆದಿದೆ. ಹೇಗಾದರೂ ಮಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೊಂದು ಭೀತಿಯ ವಾತಾವರಣ ಮೂಡಿದೆ. ಯಾರೂ ಮುಕ್ತವಾಗಿ ಮಾತನಾಡುವಂತಿಲ್ಲ. ಮುಕ್ತವಾಗಿ ಓಡಾಡುವಂತಿಲ್ಲ ಎಂದು ಮುಂಬೈ ಹೈಕೋರ್ಟ್ ವ್ಯಕ್ತಪಡಿಸಿದ ಆತಂಕದಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಸೂತ್ರ ಹಿಡಿಯುವ ಮಸಲತ್ತು ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಈಗ ಎದುರಾಳಿಗಳೇ ಇಲ್ಲದಂತಹ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಿಸಲು ಹೊರಟಿದೆ. ವಿಮರ್ಶೆ ಇಲ್ಲದಂತಹ ಮಾಧ್ಯಮವನ್ನು ಬಯಸುತ್ತಿದೆ. ಇದು ಬರೀ ಇವರಿಬ್ಬರ ವ್ಯಕ್ತಿಗತ ಹುನ್ನಾರವಲ್ಲ. ಭಾರತವನ್ನು ದೋಚುವ ಮುಕ್ತ ಅವಕಾಶವನ್ನು ಬಯಸುತ್ತಿರುವ ಕಾರ್ಪೊರೇಟ್ ಬಂಡವಾಳಶಾಹಿಗೂ ಹಾಗೂ ಈಗಿರುವ ಸಂವಿಧಾನವನ್ನು ಬದಲಿಸಿ, ಮನುವಾದವನ್ನು ದೇಶದ ಮೇಲೆ ಹೇರಲು ಹೊರಟಿರುವ ಸಂಘ ಪರಿವಾರಕ್ಕೂ ಇದು ಬೇಕಾಗಿದೆ. ಅಂತಲೇ ಇವೆರಡೂ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಆ ದಿನಗಳು ನನಗಿನ್ನೂ ನೆನಪಿನಲ್ಲಿವೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗಲೇ ನಾನು ಸಂಯುಕ್ತ ಕರ್ನಾಟಕದ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದೆ. ಆಗ ಈ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ನನ್ನ ಸಂದರ್ಶನ ಮಾಡಿ, ಕೆಲಸಕ್ಕೆ ಸೇರಿಸಿಕೊಂಡರು. ಆಗ ಮಾಧ್ಯಮವೆಂದರೆ, ಮುದ್ರಣ ಮಾಧ್ಯಮ ಮಾತ್ರ ಇತ್ತು. ದೃಶ್ಯ ಮಾಧ್ಯಮ ದೇಶದಲ್ಲಿ ಇನ್ನೂ ಪ್ರವೇಶಿಸಿರಲಿಲ್ಲ. ಪತ್ರಿಕೆಗಳೇ ಆಗ ದೇಶದ ಮೂಲೆಮೂಲೆಗೆ ಸುದ್ದಿಯನ್ನು ತಲುಪಿಸುತ್ತಿದ್ದವು. ಇದನ್ನು ಬಿಟ್ಟರೆ, ಸರಕಾರದ ಆಕಾಶವಾಣಿಯಲ್ಲಿ ಬರುತ್ತಿದ್ದ ಸುದ್ದಿಗಳಿಗೆ ಜನ ಅವಲಂಬಿತರಾಗಿದ್ದರು. ಸಂಯುಕ್ತ ಕರ್ನಾಟಕದ ಒಡೆತನವನ್ನು ಆಗ ದೇವರಾಜ ಅರಸು ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಎಂ.ವೈ.ಘೋರ್ಪಡೆ ವಹಿಸಿಕೊಂಡಿದ್ದರು. ಲೋಕಶಿಕ್ಷಣ ಟ್ರಸ್ಟ್‌ನ ರಂಗನಾಥ ದಿವಾಕರ ಅವರು ಪತ್ರಿಕೆ ಮತ್ತು ಇತರ ಆಸ್ತಿಯನ್ನು ಪರಭಾರೆ ಮಾಡಿದ್ದರು. ಘೋರ್ಪಡೆಯವರು ಕಾಂಗ್ರೆಸ್ ಸರ್ಕಾರದ ಹಣಕಾಸು ಮಂತ್ರಿಯಾಗಿದ್ದರೂ ಕೂಡ ಹೀಗೆ ಬರೆಯಬೇಕೆಂದು ಯಾವುದೇ ನಿರ್ಬಂಧವನ್ನು ಪತ್ರಿಕೆಯ ಮೇಲೆ ಹೇರಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಲೋಹಿಯಾ ಸಮಾಜವಾದಿ ಖಾದ್ರಿ ಶಾಮಣ್ಣನವರನ್ನು ಪತ್ರಿಕೆಯ ಸಂಪಾದಕರಾಗಿ ಘೋರ್ಪಡೆ ನೇಮಕ ಮಾಡಿದ್ದರು. ಆ ಸ್ಥಾನದಲ್ಲಿ ಇದ್ದರೂ ತುರ್ತು ಪರಿಸ್ಥಿತಿ ವಿರೋಧಿಸುತ್ತಿದ್ದ ಖಾದ್ರಿ ಶಾಮಣ್ಣ ಅವರನ್ನು ರಹಸ್ಯವಾಗಿ ಬೇಟಿ ಮಾಡಲು ಆಗ ಭೂಗತರಾಗಿದ್ದ ಸೋಶಿಯಲಿಸ್ಟ್ ನಾಯಕ ಜಾರ್ಜ್ ಫೆರ್ನಾಂಡಿಸ್ ಆಗಾಗ ಬರುತ್ತಿದ್ದರು. ಇದು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರಿಗೆ ಗೊತ್ತಿತ್ತು. ಆದರೂ ಖಾದ್ರಿಯವರಿಗೆ ಯಾವ ತೊಂದರೆಯೂ ಆಗಲಿಲ್ಲ.

ಈಗ ಮಾಧ್ಯಮವೆಂದರೆ ಪತ್ರಿಕೆ ಮಾತ್ರವಲ್ಲ, ಅದರ ವ್ಯಾಪ್ತಿ ವಿಸ್ತಾರವಾಗಿದೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮವೂ ಸೇರಿಕೊಂಡಿದೆ. ಡಿಜಿಟಲ್ ಪತ್ರಿಕೆಗಳು ಬಂದಿವೆ. ಸಾಮಾಜಿಕ ಜಾಲತಾಣವು ಕ್ರಿಯಾಶೀಲವಾಗಿದೆ. ಆದರೆ ಮಾಧ್ಯಮಗಳಲ್ಲಿ ಮೊದಲಿನ ಸ್ವಾತಂತ್ರದ ಗಾಳಿ ಬೀಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದರೆ, ತಮ್ಮ ನೌಕರಿ ಸುರಕ್ಷಿತವಾಗಿ ಉಳಿಯುವುದಿಲ್ಲ ಎಂಬ ಭೀತಿ ಮಾಧ್ಯಮ ಲೋಕದ ಎಲ್ಲೆಡೆ ಆವರಿಸಿದೆ. ಅಂತಲೇ ಮೋದಿ ಅವರನ್ನು ಹೊಗಳಿ, ಅವರ ಲೋಪಗಳನ್ನು ಮುಚ್ಚಿ, ಸುದ್ದಿಗಳು ಪ್ರಸಾರವಾಗುತ್ತಿವೆ.

ಇತ್ತೀಚೆಗೆ ಎಬಿಪಿ ನ್ಯೂಸ್ ನೆಟ್‌ನ ವ್ಯವಸ್ಥಾಪಕ ಮಿಲಿಂದ್ ಖಾಂಡೇಕರ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಉಂಟಾಯಿತು. ಅವರೊಂದಿಗೆ ಇನ್ನೂ ಕೆಲವರು ರಾಜೀನಾಮೆ ನೀಡಿದರು. ಈ ವಾಹಿನಿಯಲ್ಲಿ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಪುಣ್ಯಪ್ರಸೂನ್ ಬಾಜಪೇಯಿ ಕೂಡ ರಾಜೀನಾಮೆ ನೀಡಿದರು. ಇನ್ನೊಬ್ಬ ಪತ್ರಕರ್ತ ಅಭಿಸಾರ ಶರ್ಮಾ ರಜೆ ಮೇಲೆ ಹೋದರು. ಇವರ ನಿರ್ಗಮನ ಸುದ್ದಿ ಲೋಕಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಸಮುದಾಯಗಳ ಜೊತೆಗೆ ಸಂವಾದ ನಡೆಸುತ್ತಿದ್ದಾರೆ. ಹೀಗೆ ಛತ್ತೀಸಗಡದ ಚಂದ್ರಮಣಿ ಕೌಶಿಕ್ ಎಂಬ ಮಹಿಳೆ ಜೊತೆಗೆ ಅವರು ಮಾತುಕತೆ ನಡೆಸುತ್ತಿದ್ದಾಗ, ಆಕೆ ತಾನು ಭತ್ತ ಬೆಳೆಯುವ ಬದಲು ಸೀತಾಫಲ ಬೆಳೆಯಲು ಆರಂಭಿಸಿ ದುಪ್ಪಟ್ಟು ಲಾಭ ಪಡೆದೆ ಎಂದು ಹೇಳಿದರು.

ಈ ಬಗ್ಗೆ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಬಾಜಪೇಯಿ, ಈ ಮಹಿಳೆಗೆ ಸುಳ್ಳು ಹೇಳಲು ತರಬೇತಿ ನೀಡಲಾಗಿದೆ ಎಂದು ಆರೋಪಿಸಿದರು. ದಿಲ್ಲಿಯಿಂದ ಛತ್ತೀಸಗಡದ ಕಂಕೇರ ಜಿಲ್ಲೆಗೆ ಆಗಮಿಸಿದ ಅಧಿಕಾರಿಯೊಬ್ಬರು, ಇದೇ ರೀತಿ ತಪ್ಪು ಹೇಳುವಂತೆ ಮಹಿಳೆಗೆ ಸೂಚಿಸಿದ್ದರು ಎಂದು ದಾಖಲೆ ಸಮೇತ ಎಬಿಪಿ ವರದಿ ಮಾಡಿತು.

ಇಷ್ಟಾಗಿದ್ದೆ ತಡ, ಬಿಜೆಪಿ ನಾಯಕತ್ವ ಎಬಿಪಿ ನ್ಯೂಸ್ ವಿರುದ್ಧ ದಾಳಿ ಆರಂಭಿಸಿತು. ಕೇಂದ್ರ ಸಚಿವ ರಾಜವರ್ಧನ ಸಿಂಗ್ ರಾಠೋಡ ಅವರು ನರೇಂದ್ರ ಮೋದಿಯವರನ್ನು ವಿರೋಧಿಸುವ ಅಜೆಂಡಾ ಎಬಿಪಿ ಹೊಂದಿದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ ಎಬಿಪಿ ನ್ಯೂಸ್, ತನ್ನ ವರದಿಗಾರನನ್ನು ಆ ಮಹಿಳೆ ಇದ್ದ ಗ್ರಾಮಕ್ಕೆ ಕಳುಹಿಸಿ ಆಕೆಯ ಸಂದರ್ಶನ ಮಾಡಿತು. ಈ ಬೆಳವಣಿಗೆಯಿಂದ ಉರಿದು ಹೋದ ಬಿಜೆಪಿ ನಾಯಕರು ಚಾನೆಲ್ ಮಾಲಕತ್ವದ ಮೇಲೆ ಒತ್ತಡ ಹೇರಲು ಶುರು ಮಾಡಿದರು. ಪ್ರೈಮ್‌ಟೈಮ್ ಅವಧಿಯಲ್ಲೇ ವಾಹಿನಿ ಸಿಗ್ನಲ್‌ನಲ್ಲಿ ತೊಂದರೆ ಕಾಣಿಸಿತು. ಪ್ರಸಾರಕ್ಕೆ ವ್ಯತ್ಯಯವಾಯಿತು.

ಇದು ವಾಹಿನಿಯ ಗಮನಕ್ಕೆ ಬಂತು. ಇದಕ್ಕೆಲ್ಲ ಹೆದರುವುದಿಲ್ಲ. ನಾವು ಸತ್ಯವನ್ನೇ ಹೇಳುತ್ತೇವೆ ಎಂದು ಬಾಜಪೇಯಿ ಟ್ವೀಟ್ ಮಾಡಿದರು. ತಮ್ಮ ಕಾರ್ಯಕ್ರಮ ಪ್ರಸಾರಕ್ಕೆ ವ್ಯತ್ಯಯವಾದ ನಂತರ, ಆ ಕಾರ್ಯಕ್ರಮದ ವೀಡಿಯೊಗಳನ್ನು ಅನಿವಾರ್ಯವಾಗಿ ಟ್ವೀಟ್ ಮಾಡಲು ಆರಂಭಿಸಿದರು. ಟಿವಿ ವಾಹಿನಿ ಪ್ರಸಾರಕ್ಕೆ ಬೇಕಾದ ಸಿಗ್ನಲ್‌ಗಳು ಕೇಂದ್ರ ಸರಕಾರದ ವಶದಲ್ಲಿರುತ್ತವೆ. ಹೀಗಾಗಿ ಈ ತಾಂತ್ರಿಕ ಸಮಸ್ಯೆಗೆ ಯಾರು ಕಾರಣ ಎಂಬುದು ಸ್ಪಷ್ಟವಾಗುತ್ತದೆ.

ಈ ಎಲ್ಲಾ ಬೆಳವಣಿಗೆಗಳ ನಂತರ, ಕಳೆದ ವಾರ ಖಾಂಡೇಕರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಇನ್ನೊಬ್ಬ ಪತ್ರಕರ್ತ ಬಾಜಪೇಯಿ ಕೂಡ ಪದತ್ಯಾಗ ಮಾಡಿದರು. ಮತ್ತೊಬ್ಬ ಪತ್ರಕರ್ತ ಅಭಿಸಾರ ಶರ್ಮಾ ರಜೆ ಮೇಲೆ ತೆರಳಿದರು. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ತಮಗೆ ಮಂಡಿಯೂರದ ಪತ್ರಕರ್ತರನ್ನು ಈ ರೀತಿ ಬಲಿ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. 2014ರಲ್ಲಿ ರಾಜ್‌ದೀಪ್ ಸರ್ದೇಸಾಯಿ ಮತ್ತು ಸಾಗರಿಕಾ ಘೋಷ್ ಅವರು ಸಿಎನ್‌ಎನ್-ಐಬಿಎನ್‌ಗೆರಾಜೀನಾಮೆ ಕೊಡಬೇಕಾಗಿ ಬಂತು. 2015ರಲ್ಲಿ ಔಟ್‌ಲುಕ್ ಪತ್ರಿಕೆಯಿಂದ ಸಂಪಾದಕ ಮೈಸೂರಿನ ಕೃಷ್ಣ ಪ್ರಸಾದ್ ಅವರನ್ನು ಎತ್ತಂಗಡಿ ಮಾಡಲಾಯಿತು. ಅದೇ ವರ್ಷ ನವೆಂಬರ್‌ನಲ್ಲಿ ಓಪನ್ ಪತ್ರಿಕೆ ಸಂಪಾದಕ ಸ್ಥಾನಕ್ಕೆ ಮನು ಜೋಸೆಫ್ ರಾಜೀನಾಮೆ ನೀಡಿದರು. ಅದಕ್ಕಿಂತ ಮುನ್ನವೇ ಹಿಂದೂ ಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಸಿದ್ಧಾರ್ಥ ವರದರಾಜನ್ ಅವರು ಕೂಡ ರಾಜೀನಾಮೆ ನೀಡಿದರು.

ಮಹಾರಾಷ್ಟ್ರದಲ್ಲಿ ಹೆಸರಾಂತ ಪತ್ರಕರ್ತ ನಿಖಿಲ್ ವಾಗ್ಲೆ ಮತ್ತು ಅಂಬೇಕರ್ ಅವರಿಗೆ ಯಾವುದೇ ಚಾನೆಲ್‌ನಲ್ಲಿ ಕೆಲಸ ಸಿಗದಂತೆ ನೋಡಿಕೊಳ್ಳಲಾಯಿತು. ಮರಾಠಿ ವಾಹಿನಿಗಳಲ್ಲಿ ಉತ್ತಮ ರಾಜಕೀಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವಾಗ್ಲೆ ಬಿಜೆಪಿ ನಾಯಕರಿಗೆ ಇಕ್ಕಟ್ಟಾಗುವಂತಹ ಪ್ರಶ್ನೆ ಕೇಳುತ್ತಾರೆಂದು ಅವರು ಕೆಲಸ ಮಾಡುತ್ತಿದ್ದ ವಾಹಿನಿಗಳ ಮೇಲೆ ಒತ್ತಡ ತಂದು ಅವರ ಕಾಂಟ್ರಾಕ್ಟ್ ರದ್ದುಪಡಿಸಲಾಗುತಿತ್ತು. ಈಗಂತೂ ದೇಶದ 30ಕ್ಕೂ ಹೆಚ್ಚು ವಾಹಿನಿಗಳ ಒಡೆತನ ಅಂಬಾನಿ ಅವರಿಗೆ ಸೇರಿದೆ. ಅಲ್ಲಿ ಮೋದಿ ವಿರುದ್ಧ ಮಾತನಾಡುವಂತೆಯೇ ಇಲ್ಲ.

ಕರ್ನಾಟಕದಂತಹ ರಾಜ್ಯಗಳಲ್ಲೂ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಇದೇ ಪರಿಸ್ಥಿತಿ ಇದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಈಗ ಗಂಡಾಂತರದಲ್ಲಿದೆ. ತಮಗೆ ಅನ್ನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇಲ್ಲ. ಇನ್ನು ತಮಗೆ ಅನ್ನಿಸಿದ್ದನ್ನು ಸಾಹಿತಿಗಳು ಬರೆಯಲು ಹೊರಟರೆ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬರೆಯಬೇಕಾಗುತ್ತದೆ. ಈಗಾಗಲೇ ದಾಬೋಳ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಉದಾಹರಣೆ ನಮ್ಮ ಕಣ್ಣು ಮುಂದಿದೆ.

ಮಾಧ್ಯಮ ಸಂಸ್ಥೆಗಳ ಮಾಲಕರನ್ನು ಬೆದರಿಸಿ, ತಮ್ಮ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪತ್ರಕರ್ತರನ್ನು ಕೆಲಸದಿಂದ ಉಚ್ಚಾಟನೆ ಮಾಡಲು ಮೋದಿ ಸರಕಾರ ಒತ್ತಡ ಹೇರುತ್ತಿದೆ. ಕೆಲಸ ಕಳೆದುಕೊಂಡು ಬೀದಿ ಪಾಲಾಗಲು ಯಾರಿಗೂ ಇಷ್ಟ ಇರುವುದಿಲ್ಲ. ನಿಖಿಲ್ ವಾಗ್ಲೆ, ಖಾಂಡೇಕರ್‌ರಂತಹ ದಿಟ್ಟ ಪತ್ರಕರ್ತರು ಮಾತ್ರ ತಮ್ಮ ಆತ್ಮಗೌರವ ಉಳಿಸಿಕೊಳ್ಳಲು ತಿರುಗಿ ನಿಲ್ಲುತ್ತಾರೆ. ಗೌರಿ ಲಂಕೇಶ್ ಅಂಥವರು ಸಾವಿಗೆ ಹೆದರದೆ ಹುತಾತ್ಮರಾಗುತ್ತಾರೆ. ಇದು ದೇಶದ ಇಂದಿನ ಸ್ಥಿತಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News