ಪ್ರತಿರೋಧಗಳನ್ನು ಕೊಲ್ಲುವ ಮತ್ತು ಕೊಳ್ಳುವ ತಂತ್ರ

Update: 2018-08-05 18:52 GMT


ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತರುವ ಮುನ್ನ ಕಾರ್ಪೊರೇಟ್ ಶಕ್ತಿಗಳು ಮಾಡಿದ ಮೊದಲ ಕೆಲಸ, ಮಾಧ್ಯಮಗಳನ್ನು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ಕೊಲ್ಲುವುದು ಮತ್ತು ಕೊಳ್ಳುವುದು. ಮಾಧ್ಯಮಗಳನ್ನು ಮಣಿಸುವ ತಂತ್ರ ಆರಂಭವಾದುದು ‘ತೆಹಲ್ಕಾ’ ವಾರಪತ್ರಿಕೆಯನ್ನು ಕೊಂದು ಹಾಕುವುದರ ಜೊತೆಗೆ. ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ತೆಹಲ್ಕಾ ದೇಶಾದ್ಯಂತ ಪತ್ರಿಕೋದ್ಯಮದ ಕುರಿತಂತೆ ಹೊಸ ಚರ್ಚೆಯೊಂದನ್ನು ಹುಟ್ಟಿಸಿ ಹಾಕಿತ್ತು. ಕುಟುಕು ಕಾರ್ಯಾಚರಣೆಯ ಮೂಲಕ ರಕ್ಷಣಾ ಇಲಾಖೆಯೊಳಗಿನ ಅಕ್ರಮವನ್ನು ಬಯಲಿಗೆಳೆದು ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ವಿಶೇಷ ವರದಿಗಳನ್ನು ಮಾಡಿ, ವಾಸ್ತವವನ್ನು ವಿಶ್ವಮಟ್ಟಕ್ಕೆ ತಲುಪಿಸಿದ ಹೆಗ್ಗಳಿಕೆಯೂ ತೆಹಲ್ಕಾ ಪತ್ರಿಕೆಗೆ ಸೇರಬೇಕು. ಈ ನಿಟ್ಟಿನಲ್ಲಿ ಮೋದಿಯನ್ನು ಅಧಿಕಾರಕ್ಕೇರಿಸುವ ಕಾರ್ಯಯೋಜನೆ ರೂಪುಗೊಂಡಾಗ ಎದುರಾದ ದೊಡ್ಡ ಅಡ್ಡಿ ತೆಹೆಲ್ಕಾದಂತಹ ಪತ್ರಿಕೆಗಳು. ಅದರ ಸಂಪಾದಕ ತರುಣ್ ತೇಜ್‌ಪಾಲ್ ಅವರು ಹಣ ಮತ್ತು ಖ್ಯಾತಿಯ ಉತ್ತುಂಗದಲ್ಲಿದ್ದ ಸಮಯ ಅದು. ಅವರ ದೌರ್ಬಲ್ಯವನ್ನು ಬಳಸಿಕೊಂಡು ಅವರನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಕಾರ್ಪೊರೇಟ್ ಶಕ್ತಿ ಯಶಸ್ವಿಯಾಯಿತು. ಹೆಣ್ಣೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಅವರು ಸಿಲುಕಿಕೊಂಡರು. ವ್ಯವಸ್ಥೆಯ ವಿರುದ್ಧ ಪ್ರತಿರೋಧದ ಅತಿ ದೊಡ್ಡ ಶಕ್ತಿ ಎಂದು ಗುರುತಿಸಿಕೊಂಡಿದ್ದ ತೆಹೆಲ್ಕಾದ ವಿಶ್ವಾಸಾರ್ಹತೆ, ಒಂದೇ ಒಂದು ನಿಮಿಷದಲ್ಲಿ ನೆಲಕಚ್ಚಿತು. ಪ್ರಗತಿಪರರೇ ತೆಹೆಲ್ಕಾ ವಿರುದ್ಧ ಮಾತನಾಡಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ವಿರುದ್ಧ ಜೋರು ದನಿಯಲ್ಲಿ ಮಾತನಾಡಬಹುದಾದ ಪತ್ರಿಕೆಯೊಂದು ಹೀಗೆ ಮೂಕವಾಗಬೇಕಾಯಿತು. ಅದರೊಳಗಿದ್ದ ಶ್ರೇಷ್ಠ ಪತ್ರಕರ್ತರೆಲ್ಲ ಸಾಮಾಜಿಕ ತಾಣಗಳನ್ನು ನೆಚ್ಚಿಕೊಳ್ಳಬೇಕಾಯಿತು.

ಮೋದಿ ಅಧಿಕಾರಕ್ಕೇರಿದ ದಿನದಿಂದ ಈ ದಮನ ನೀತಿ ಇನ್ನಷ್ಟು ತೀವ್ರವಾಗಿದೆ. ಆರಂಭದಲ್ಲಿ ಪರಿಸರ ಮತ್ತು ಮಾನವ ಹಕ್ಕುಗಳ ಪರವಾಗಿ ಮಾತನಾಡುವ ಎನ್‌ಜಿಒಗಳನ್ನು ಸರಕಾರ ಗುರಿ ಮಾಡಿತು. ಅವುಗಳ ಹಣೆಗಳಿಗೆ ‘ದೇಶದ್ರೋಹಿ’ಗಳೆಂಬ ಹಣೆ ಪಟ್ಟಿ ಕಟ್ಟಿ, ಬೇರೆ ಬೇರೆ ರೀತಿಯಲ್ಲಿ ಚಿತ್ರಹಿಂಸೆ ನೀಡತೊಡಗಿತು. ಪರಿಸರದ ಪರವಾಗಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದ ‘ಗ್ರೀನ್‌ಪೀಸ್’ನಂತಹ ಅಂತರ್‌ರಾಷ್ಟ್ರೀಯ ಸಂಸ್ಥೆಗಳೂ ಕಾರ್ಯಾಚರಿಸುವಲ್ಲಿ ಚಡಪಡಿಸುವ ವಾತಾವರಣ ನಿರ್ಮಾಣವಾಯಿತು. ಈ ದೇಶದ ಸಂಸತ್ತು ದುರ್ಬಲ ವಿರೋಧಪಕ್ಷವನ್ನು ಹೊಂದಿದ್ದು, ತನ್ನ ನಿಜವಾದ ವಿರೋಧ ಪಕ್ಷ ಮಾನವ ಹಕ್ಕು ಹೋರಾಟ ಸಂಸ್ಥೆಗಳು ಮತ್ತು ಮಾಧ್ಯಮಗಳು ಎನ್ನುವುದನ್ನು ಮೋದಿ ಮತ್ತು ಅವರ ಹಿಂದಿರುವ ಕಾರ್ಪೊರೇಟ್ ಶಕ್ತಿಗಳು ಅರಿತಿದ್ದರು. ಈ ಕಾರಣದಿಂದ ಬೇರೆ ಬೇರೆ ಮಾರ್ಗಗಳ ಮೂಲಕ ಅವುಗಳ ಧ್ವನಿಯನ್ನು ಹಿಸುಕತೊಡಗಿದವು. ಸಂಘಪರಿವಾರದ ಹಿಂಸೆಯನ್ನು ಸ್ಪಷ್ಟ ಮಾತುಗಳಿಂದ ಖಂಡಿಸುತ್ತಾ ಬಂದಿದ್ದ ರಾಜ್‌ದೀಪ್ ಸರ್ದೇಸಾಯಿ ಸಿಎನ್‌ಎನ್-ಐಬಿಎನ್ ಚಾನೆಲ್‌ಗೆ ರಾಜೀನಾಮೆ ನೀಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿದರು. ಸಾಗರಿಕಾ ಘೋಷ್ ಕೂಡ ಅದೇ ದಾರಿಯನ್ನು ಹಿಡಿದರು.

ಸಿದ್ಧಾರ್ಥ ವರದರಾಜನ್‌ರಂತಹ ಹಿರಿಯ ಪತ್ರಕರ್ತರು ಹಿಂದೂವನ್ನು ತೊರೆಯುವಂತಹ ಸನ್ನಿವೇಶ ನಿರ್ಮಾಣವಾಯಿತು. ಎನ್‌ಡಿಟಿವಿಯ ವಿರುದ್ಧ ಐಟಿ ಅಧಿಕಾರಿಗಳನ್ನೇ ಬಳಸಿಕೊಂಡರು. ತೀಸ್ತಾ ಸೆಟಲ್ವಾಡ್ ಅವರು ಕಾನೂನಾತ್ಮಕವಾಗಿ ಚಿತ್ರಹಿಂಸೆ ಅನುಭವಿಸಿದರು. ಹಲವು ಪತ್ರಿಕೆಗಳನ್ನು, ಟಿವಿ ಚಾನೆಲ್‌ಗಳನ್ನು ಕೊಂಡುಕೊಂಡರೆ, ಕೆಲವು ಪತ್ರಿಕೆಗಳನ್ನು ಅಕ್ಷರಶಃ ಕೊಂದರು. ಪತ್ರಿಕೆಗಳಿಂದ ಹೊರತಳ್ಳಲ್ಪಟ್ಟ ಧೀಮಂತ ಪತ್ರಕರ್ತರೆಲ್ಲ, ಸಾಮಾಜಿಕ ತಾಣವನ್ನೇ ಮಾಧ್ಯಮವಾಗಿ ಬಳಸಿಕೊಳ್ಳಬೇಕಾಯಿತು. ಆದರೂ ಬೆಂಬಿಡದ ಸರಕಾರ, ಆ ಪತ್ರಕರ್ತರ ವಿರುದ್ಧ ವೈಯಕ್ತಿಕ ಕೇಸುಗಳನ್ನು ದಾಖಲಿಸ ತೊಡಗಿತು. ಮೋದಿ ಸರಕಾರವನ್ನು ಟೀಕಿಸಿದ ಕಾರಣಕ್ಕಾಗಿ ಇತ್ತೀಚೆಗಷ್ಟೇ ಎಬಿಪಿ ಹಿಂದಿ ಸುದ್ದಿವಾಹಿನಿಯಿಂದ ಇಬ್ಬರು ಖ್ಯಾತ ಪತ್ರಕರ್ತರು ಆ ಚಾನೆಲ್‌ನ್ನು ತೊರೆಯುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಮೋದಿಯ ಪ್ರಚಾರ ಪ್ರಿಯತೆ, ಅಭಿವೃದ್ಧಿಯ ಹಿಂದಿರುವ ವಾಸ್ತವವನ್ನು ಬಹಿರಂಗ ಪಡಿಸಿದ್ದೇ ಇವರು ಮಾಡಿರುವ ಅಪರಾಧ. ಒಂದು ಸುದ್ದಿ ವಾಹಿನಿ ವಾಸ್ತವವನ್ನು ಬಹಿರಂಗಪಡಿಸಿದರೆ ಅದಕ್ಕೆ ಸ್ಪಷ್ಟನೆಯನ್ನು ನೀಡುವುದು ಸರಕಾರದ ಕರ್ತವ್ಯ. ಆ ಸುದ್ದಿವಾಹಿನಿ ಸುಳ್ಳನ್ನು ಹೇಳಿದ್ದೇ ಆಗಿದ್ದರೆ, ನಿಜ ಏನು ಎನ್ನುವುದನ್ನು ಜಗತ್ತಿಗೆ ಸಾರಲು ಮೋದಿಗೆ ಸಾಕಷ್ಟು ಅವಕಾಶಗಳಿವೆ, ಅವರ ಜೊತೆಗೆ ಸಾಕಷ್ಟು ಮಾಧ್ಯಮಗಳೂ ಇವೆ. ಆದರೆ ಯಾವಾಗ ಟೀಕೆ ಮಾಡಿದವರ ಬಾಯಿಯನ್ನೇ ಮುಚ್ಚಿಸಲು ಸರಕಾರ ಹೊರಡುತ್ತದೆಯೋ, ಅದರ ಅರ್ಥ ಟೀಕಾಕಾರರ ಮಾತುಗಳಲ್ಲಿ ಸತ್ಯವಿದೆ ಮತ್ತು ಅದನ್ನು ನಿರಾಕರಿಸಲು ಅವರು ವಿಫಲವಾಗಿದ್ದಾರೆ ಎಂದು.

ಎಬಿಪಿಯ ಪತ್ರಕರ್ತರ ವಜಾ ಮೋದಿಯ ಅಭಿವೃದ್ಧಿಯ ಅಸಲಿಯತ್ತನ್ನು ಹೇಳುತ್ತಿದೆ. ಸತ್ಯವೇನು ಎನ್ನುವುದನ್ನು ಪತ್ರಕರ್ತರು ದೇಶದ ಮುಂದಿಡಲು ಹಿಂಜರಿಯುವಂತೆ ಮಾಡುವುದರಿಂದ ಮೋದಿಯ ಜನಪ್ರಿಯತೆಯನ್ನು ಉಳಿಸಿಕೊಳ್ಳಬಹುದು ಎಂದು ಕಾರ್ಪೊರೇಟ್ ಶಕ್ತಿಗಳು ಭಾವಿಸಿಕೊಂಡಿವೆ. ಇದೇ ಹೊತ್ತಿಗೆ ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡು, ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡಿದ ನ್ಯಾಯವಾದಿಯನ್ನು ಪರೋಕ್ಷವಾಗಿ ಬಾಯಿ ಮುಚ್ಚಿಸುವ ತಂತ್ರವನ್ನು ನಡೆಯುತ್ತಿದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಬಿ. ಎಚ್. ಲೋಯಾ ಅವರ ಸಾವು ಕೊಲೆ ಎಂದು ಕುಟುಂಬ ಆರೋಪಿಸಿತ್ತು. ಇನ್ನೋರ್ವ ನ್ಯಾಯಾಧೀಶರು ಈ ಪ್ರಕರಣಕ್ಕೆ ಸಂಬಂಧಿಸಿ ಲೋಯಾ ಅವರಿಗೆ ಲಂಚದ ಆಮಿಷ ಒಡ್ಡಿದ್ದರು ಎಂದೂ ಹೇಳಲಾಗಿತ್ತು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನ ಪ್ರಮುಖ ಆರೋಪಿಗಳಲ್ಲಿ ಅಮಿತ್ ಶಾ ಕೂಡ ಸೇರಿದ್ದಾರೆ. ಲಂಚ ಆಮಿಷಕ್ಕೆ ತಲೆಬಾಗದ ಹಿನ್ನೆಲೆಯಲ್ಲಿ ಲೋಯಾ ಕೊಂದು ಹಾಕಲಾಗಿದೆ ಎಂಬ ಆರೋಪ, ಅಮಿತ್ ಶಾ ಬಳಗಕ್ಕೆ ತೀವ್ರ ಮುಜುಗರವುಂಟು ಮಾಡಿತ್ತು.

ತನ್ನೆಲ್ಲ ಶಕ್ತಿಗಳನ್ನು ಬಳಸಿ ಈ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಅಲ್ಲದೆ, ಆ ಪ್ರಕರಣವನ್ನು ಮೇಲೆ ತಂದ ಹೋರಾಟಗಾರರ ಕೈ ಕಟ್ಟುವ ಕೆಲಸ ಇದೀಗ ನಡೆಯುತ್ತಿದೆ. ಅದರ ಭಾಗವಾಗಿ, ಲೋಯಾ ಪ್ರಕರಣದಲ್ಲಿ ಹೋರಾಟ ಮಾಡಿದ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಉಕೆಯ ವಿರುದ್ಧ ಸರಕಾರ ದೂರೊಂದನ್ನು ದಾಖಲಿಸಿ ಅವರನ್ನು ಬಂಧಿಸಿದೆ. ಅದೂ 17 ವರ್ಷಗಳ ಹಿಂದಿನ ಪ್ರಕರಣ. ಇದೇ ನ್ಯಾಯವಾದಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಂಬಂಧಿಸಿಯೂ ಈ ಹಿಂದೆ ದೂರೊಂದನ್ನು ದಾಖಲಿಸಿದ್ದರು. ಚುನಾವಣೆಯಲ್ಲಿ ಕೆಲವು ಮಾಹಿತಿಗಳನ್ನು ಬಚ್ಚಿಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ವಿರುದ್ಧ ಇವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ಫಡ್ನವೀಸ್‌ಗೆ ನ್ಯಾಯಾಲಯ ನೋಟಿಸನ್ನು ಜಾರಿಗೊಳಿಸಿತ್ತು. ತಮ್ಮ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಬದಲಿಗೆ ಸರಕಾರ ಇದೀಗ, ದೂರು ನೀಡಿದ ಹೋರಾಟಗಾರನನ್ನೇ ಬಂಧಿಸಿದೆ. ಇದು ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಸತ್‌ನಲ್ಲಿ ವಿರೋಧಪಕ್ಷದ ನಾಯಕರೂ ಸರಕಾರದ ವಿರುದ್ಧ ಮಾತನಾಡಲಾಗದ ಸ್ಥಿತಿ ಬರಲಿದೆ. ಭಾರತ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದಕ್ಕೆ ಇಷ್ಟು ಸಾಲದೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News